ಹಾವೇರಿ: ಉಪಚುನಾವಣೆ ನಡೆಯುತ್ತಿರುವ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಗೆದ್ದಾಗಿದೆ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಶುದ್ಧ ಸುಳ್ಳು ಎಂದು ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ, ಮಾಜಿ ಸಚಿವ ಎಚ್.ಕೆ. ಪಾಟೀಲ ಆರೋಪಿಸಿದರು.
ನಗರದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರ “ಈಗಾಗಲೇ ನಾವು ಗೆದ್ದಾಗಿದೆ. ಈಗ ಅಂತರ ಎಷ್ಟೆಂಬುದರ ಬಗ್ಗೆ ಅಷ್ಟೇ ಯೋಚನೆ’ ಎಂಬ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದರು.
“ಬಿಜೆಪಿ ಅಭ್ಯರ್ಥಿ ಗೆದ್ದಾಗಿದೆ’ ಎಂದು ಗುಪ್ತಚರ ಮಾಹಿತಿ ಆಧರಿಸಿಯೇ ಹೇಳುತ್ತಿದ್ದೆನೆಂದು ಸಿಎಂ ಯಡಿಯೂರಪ್ಪ ಹೇಳುತ್ತಿದ್ದು, ಅವರ ಮಾತು ಸತ್ಯವಾಗಿದ್ದರೆ ಗುಪ್ತಚರ ಇಲಾಖೆ ಅವರನ್ನು ಓಲೈಸಲು, ಖುಷಿ ಪಡಿಸಲು ಸುಳ್ಳು ಮಾಹಿತಿ ನೀಡಿದೆ ಎಂದರ್ಥ. ಇಲ್ಲವೇ ಯಡಿಯೂರಪ್ಪ ಅವರೇ ಈ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದರ್ಥ ಎಂದರು.
ಉಪ ಚುನಾವಣೆ ಬಳಿಕ ಸರ್ಕಾರ ಬದಲಾಗುತ್ತದೆ. ಆದರೆ, ಮಧ್ಯಂತರ ಚುನಾವಣೆ ನಡೆಯುವುದಿಲ್ಲ. ಡಿ. 9ರ ಬಳಿಕ ಯಡಯೂರಪ್ಪ ಸರ್ಕಾರ ಬೀಳುತ್ತದೆ ಎಂದರು. ಬಿ.ಸಿ. ಪಾಟೀಲ ಪಕ್ಷಾಂತರ ಮಾಡುವ ಮೊದಲು ತೋರಿದ ವರ್ತನೆ, ನಡೆನುಡಿ, ಜನರಿಗೆ ಸ್ಪಂದಿಸದೇ ಇರುವುದರಿಂದ ಹಿರೇಕೆರೂರು ಕ್ಷೇತ್ರದಲ್ಲಿ ಅವರ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ ಅವರ ಪ್ರಾಮಾಣಿಕತೆ, ನಿಷ್ಠೆ, ರೈತ ಹೋರಾಟ, ತ್ಯಾಗ, ಗೌರವದಿಂದಾಗಿ ಅವರ ಮೇಲೆ ಅನುಕಂಪದ ಅಲೆ ಸೃಷ್ಟಿಯಾಗಿದೆ ಎಂದರು.
ಈ ಚುನಾವಣೆ ಪಕ್ಷನಿಷ್ಠೆ ಹಾಗೂ ಪಕ್ಷ ದ್ರೋಹ, ನೀತಿ ಮತ್ತು ಮೋಸ, ಮತದಾತರ ಸಾರ್ವಭೌಮ ಮತ್ತು ಶಾಸಕ ಸಾರ್ವಭೌಮ ನಡುವಿನ ಚುನಾವಣೆಇದಾಗಿದೆ. ಮತದಾರರು ಗುಲಾಮರಲ್ಲ, ಮತದಾರರು ಸಾರ್ವಭೌಮರು ಎಂದು ತಿಳಿಸುವ ಚುನಾವಣೆ ಇದಾಗಿದೆ ಎಂದರು.
ಬಿಜೆಪಿ ಅಭ್ಯರ್ಥಿಗೆ ತಮ್ಮ ಸಾಧನೆ ಹೇಳಿ ಮತ ಕೇಳಲು ನೈತಿಕವಾಗಿ ಧೈರ್ಯವಿಲ್ಲ. ಬಿಎಸ್‌ವೈ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ ಎಂದು ಟೀಕಿಸಿದರು. ಮಾಜಿ ಸಚಿವ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಎಂ.ಎಂ. ಹಿರೇಮಠ, ಜಿ.ಎಸ್. ಪಾಟೀಲ, ಮೋಹನ ಕೊಂಡಜ್ಜಿ, ಸಂಜಿವಕುಮಾರ ನೀರಲಗಿ, ಪದ್ಮನಾಭ ರೆಡ್ಡಿ, ಟಿ. ಈಶ್ವರ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.