ಬೆಂಗಳೂರು: ‘ಮೋಡಬಿತ್ತನೆ ಕೇವಲ ಬರಗಾಲದ ಸಂದರ್ಭಗಳಿಗೆ ಸೀಮಿತವಾಗದೆ, ಅದೊಂದು ನಿರಂತರ ಪ್ರಕ್ರಿಯೆ ಆಗಬೇಕು’ ಎಂಬ ಒತ್ತಾಯ ತಜ್ಞರಿಂದ ಕೇಳಿಬಂದಿದೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿ ಡಾ.ಜಿ.ಎಸ್. ಭಟ್ ಮಾತನಾಡಿ, ಮೋಡಬಿತ್ತನೆಯನ್ನು ಜಲಸಂಪನ್ಮೂಲ ನಿರ್ವಹಣೆ ದೃಷ್ಟಿಯಿಂದ ನೋಡಬೇಕು. ಬರ ಮುನ್ಸೂಚನೆ ಇದ್ದಾಗ ನಾವು ಮೋಡಬಿತ್ತನೆ ಕೈಗೆತ್ತಿಕೊಳ್ಳುತ್ತೇವೆ. ಎಷ್ಟೋ ಸಲ ಅಲ್ಲಿ ಮೋಡಗಳೇ ಇರುವುದಿಲ್ಲ. ಮೋಡಗಳು ಇದ್ದಾಗಲೇ ಈ ಕಾರ್ಯ ಕೈಗೆತ್ತಿಕೊಳ್ಳುವುದರಿಂದ ಹೆಚ್ಚು ಮಳೆ ಸುರಿಸುವ ಸಾಧ್ಯತೆ ಇರುತ್ತದೆ. ಹೀಗೆ ಬಿದ್ದ ಮಳೆ ನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಭೈರೇಗೌಡ, ಕಳೆದ 19 ವರ್ಷಗಳಲ್ಲಿ 14 ಬರಪೀಡಿತ ವರ್ಷ ಎದುರಾಗಿವೆ. ಇದನ್ನು ಎದುರಿಸಲು ಹಲವು ಪ್ರಯತ್ನಗಳು ನಡೆಯುತ್ತಿದ್ದು, ಅದರಲ್ಲಿ ಮೋಡಬಿತ್ತನೆಯೂ ಒಂದು ಎಂದರು. ಬರದಿಂದ ಉಂಟಾಗುವ ಎಲ್ಲಾ ಸಮಸ್ಯೆಗಳಿಗೂ ಮೋಡಬಿತ್ತನೆಯೊಂದೇ ಪರಿಹಾರ ಅಲ್ಲ. 2017ರಲ್ಲಿ ಯಶಸ್ವಿಯಾಗಿ ಮೋಡಬಿತ್ತನೆ ಮಾಡಲಾಗಿದ್ದು, ಮಳೆ ಪ್ರಮಾಣದಲ್ಲಿ ಶೇ.28ರಷ್ಟು ಏರಿಕೆ ಕಂಡುಬಂದಿದೆ. ಮೋಡಬಿತ್ತನೆಯಾದ ಪ್ರದೇಶಗಳಲ್ಲಿ ಮೌಲ್ಯಮಾಪನ ಮಾಡಿದಾಗ ಸುಮಾರು 2.51ರಿಂದ 5 ಟಿಎಂಸಿ ನೀರು ಹೆಚ್ಚಳ ಆಗಿರುವುದು ಕಂಡುಬಂದಿದೆ ಎಂದರು.
ಕೃಷಿ ಸಚಿವ ಶಿವಶಂಕರರೆಡ್ಡಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮೋಡಬಿತ್ತನೆ ನಡೆಸಲು ಸರ್ಕಾರ ಉದ್ದೇಶಿಸಿದ್ದು, 2017ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗುವುದೆಂದರು.
Advertisement
ನಗರದ ಹೋಟೆಲ್ ಲಿ.ಮೆರಿಡಿಯನ್‌ನಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ‘ಮೋಡಬಿತ್ತನೆ’ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಈ ಅಭಿಪ್ರಾಯ ಕೇಳಿಬಂದಿತು.
Related Articles
Advertisement
ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತಿತರರಿದ್ದರು.
ಶಾಶ್ವತ ಇಲಾಖೆ ಸ್ಥಾಪನೆಗೆ ಶಿಫಾರಸು:
ವರ್ಷಧಾರೆ ಯೋಜನೆ ಅಡಿ ರಚಿಸಲಾದ ತಜ್ಞರು, ವಿಜ್ಞಾನಿಗಳ ತಂಡ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಮೋಡಬಿತ್ತನೆ ಚಟುವಟಿಕೆ ನಿರಂತರವಾಗಿ ನಡೆಯಲು ಶಾಶ್ವತ ಇಲಾಖೆ ಸ್ಥಾಪಿಸಬೇಕು ಎಂದು ಶಿಫಾರಸು ಮಾಡಿದೆ. ಮೋಡಬಿತ್ತನೆಗೆ ಶಾಶ್ವತ ರಾಡರ್ ಸ್ಥಾಪಿಸಲು ಭಾರತೀಯ ಹವಾಮಾನ ಇಲಾಖೆಯೊಂದಿಗೆ ಸಮಾಲೋಚನೆ ಮಾಡಬೇಕು. ರಾಡರ್ ದತ್ತಾಂಶಗಳನ್ನು ಮೋಡಬಿತ್ತನೆಯಲ್ಲದೆ, ಹವಾಮಾನ ಮುನ್ಸೂಚನೆ ಬಳಕೆ, ಕೃಷಿ ಚಟುವಟಿಕೆಗೂ ಉಪಯೋಗಿಸಿಕೊಳ್ಳಬೇಕು. ಮೋಡಬಿತ್ತನೆಗೆ ದೀರ್ಘಾವಧಿ ಕಾರ್ಯನೀತಿ ಸ್ಥಾಪಿಸಬೇಕು ಎನ್ನುವುದು ಸೇರಿ ಹಲವು ಶಿಫಾರಸು ಮಾಡಿದೆ. ವಿಚಾರ ಸಂಕಿರ ಣದ ವೇಳೆ ರಾಜ್ಯ ಮೋಡಬಿತ್ತನೆ ಕಾರ್ಯಾಚರಣೆ-2017ರ ‘ವರ್ಷಧಾರೆ’ ವರದಿ ಬಿಡುಗಡೆಗೊಂಡಿತು. ಅದರಲ್ಲಿ ಈ ಶಿಫಾರಸುಗಳನ್ನು ಮಾಡಲಾಗಿದೆ.
ಜುಲೈ ಮೊದಲ ವಾರದಿಂದ ಮೋಡ ಬಿತ್ತನೆ:
ಮುಂಗಾರು ಮಳೆ ಕೊರತೆ ಮುನ್ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ಬರುವ ಜುಲೈ ಮೊದಲ ವಾರದಿಂದ ಮೋಡಬಿತ್ತನೆ ಆರಂಭವಾಗಲಿದೆ. ಈಗಾಗಲೇ ಸಚಿವ ಸಂಪುಟದ ಒಪ್ಪಿಗೆ ದೊರಕಿದೆ. ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಕಾರ್ಯಾದೇಶ ಬಾಕಿ ಇದ್ದು, ಮೋಡಗಳು ದಟ್ಟವಾಗಿರುವ ಅವಧಿಯಲ್ಲಿ ಅಂದರೆ ಜುಲೈನಿಂದ ಸೆಪ್ಟೆಂಬರ್ ಮಧ್ಯೆ ಮೋಡ ಬಿತ್ತನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಮೋಡಬಿತ್ತನೆ ಪ್ರಕ್ರಿಯೆಗೆ ಸಂಬಂಧಿಸಿದ ಟೆಂಡರ್‌ನಲ್ಲಿ 2 ಕಂಪನಿಗಳು ಈ ಸಲ ಭಾಗವಹಿಸಿದ್ದವು. ಆ ಪೈಕಿ ಖ್ಯಾತಿ ಕ್ಲೈಮೇಟ್ ಮಾಡಿಫಿಕೇಷನ್ ಕನ್ಸಲ್ಟಂಟ್ಸ್ ಕಂಪನಿಗೆ 2 ವರ್ಷಗಳ ಅವಧಿಗೆ ಟೆಂಡರ್ ನೀಡಲಾಗಿದೆ. ಮೊದಲ ವರ್ಷ 45 ಕೋಟಿ, 2ನೇ ವರ್ಷ 46 ಕೋಟಿ ರೂ.ಗಳಿಗೆ ಟೆಂಡರ್ ನೀಡಲಾಗಿದೆ. ಜೂನ್ ಅಂತ್ಯಕ್ಕೆ ಅಥವಾ ಜುಲೈ ಮೊದಲ ವಾರದಲ್ಲಿ ಕಾರ್ಯಾರಂಭವಾಗಲಿದೆ. 3 ತಿಂಗಳು ಈ ಪ್ರಕ್ರಿಯೆ ನಡೆಯಲಿದೆ. ಕಳೆದ ಬಾರಿ 35 ಕೋಟಿ ರೂ. ವೆಚ್ಚದಲ್ಲಿ 2 ತಿಂಗಳು ಮೋಡಬಿತ್ತನೆ ಪ್ರಕ್ರಿಯೆ ನಡೆದಿತ್ತು ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.