Advertisement

ಕೇರಳ ಉರ್ದು ಯಾತ್ರೆ ಸಮಾರೋಪ

05:39 PM Apr 10, 2017 | Harsha Rao |

ಕಾಸರಗೋಡು: ಆಧುನಿಕ ವಿಜ್ಞಾನ, ಸಾಹಿತ್ಯ, ಜಾನಪದ ಸಹಿತ ಎಲ್ಲ ವಿಭಾಗಗಳಲ್ಲೂ ಅಧ್ಯಯನ, ಜಗತ್ತಿನ ವಿವಿಧ ರಾಷ್ಟ್ರಗಳೊಂದಿಗೆ ಸಂಪರ್ಕ ಸಹಿತ ಜನಜೀವನಕ್ಕೆ ಅಗತ್ಯವಾದ ಎಲ್ಲ ಸಾಧ್ಯತೆಗಳಿಗೂ ಮುಕ್ತವಾಗಿ ತೆರೆದುಕೊಂಡಿರುವ ಉರ್ದು ಭಾಷೆಯ ಸಮಗ್ರ ಅಭಿವೃದ್ಧಿಗೆ ಉಜ್ವಲ ಭವಿಷ್ಯವಿದೆ. ಇಂದಿನ ವಿದ್ಯಾಭ್ಯಾಸ ನೀತಿಯಲ್ಲಿ ಪ್ರಾದೇಶಿಕ ವ್ಯವಸ್ಥೆಗಳೊಂದಿಗೆ ಹೊಂದಾಣಿಕೆಯೊಂದಿಗೆ ವ್ಯವಹರಿಸುವ ಸಾಧ್ಯತೆಗಳು ಉರ್ದು ಭಾಷೆಗೆ ವಿಶೇಷವಾಗಿ ಇದೆ ಎಂದು ತೆಲಂಗಾಣ ವಿ.ವಿ.ಯ ವಿಶ್ರಾಂತ ಉಪಕುಲಪತಿ ಪ್ರೊ| ಅಕºರಲಿ ಖಾನ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ರಾಷ್ಟ್ರೀಯ ಜಾಗೃತಿ ಮತ್ತು ಮತ ಸೌಹಾರ್ದತೆ ಉರ್ದು ಭಾಷೆಯ ಮೂಲಕ ಎಂಬ ಘೋಷವಾಕ್ಯದೊಂದಿಗೆ ತೆಹ್ರೀಕೆ ಉರ್ದು ಕೇರಳ ಎ. 2ರಂದು ಉಪ್ಪಳದಿಂದ ಆರಂಭಿಸಿದ  ಕೇರಳ ಉರ್ದು ಯಾತ್ರೆಯು ತಿರುವನಂತಪುರದ ಗಾಂಧಿ ಪಾರ್ಕ್‌ನಲ್ಲಿ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಜಾಗತೀಕರಣದ ಪ್ರಭಾವದಿಂದ ಸ್ಥಳೀಯ ದೇಶೀ ಭಾಷೆಗಳು ಮೂಲೆಗುಂಪಾಗುತ್ತಿವೆಯೆಂಬ ತಪ್ಪಾದ ಹೇಳಿಕೆಗಳು ಜನರಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿತ್ತಿದೆ. ಆದರೆ ಗ್ರಾಮೀಣ ಮಟ್ಟದಿಂದ ಬೆಳೆದು ಬರುವ ಜಾನಪದೀಯ ಸೊಗಡಿನ ಜನಸಾಮಾನ್ಯರ ಭಾಷೆಗಳಿಗೆ ವ್ಯರ್ಥ ಗೊಂದಲಗಳು ಅಗತ್ಯವಿಲ್ಲವೆಂದು ಅವರು ತಿಳಿಸಿದರು. 
ಭಾಷೆಯೊಂದಿಗೆ ಬೆಳೆದುಬಂದಿರುವ ಜೀವನ ಕ್ರಮ, ಆಚರಣೆಗಳು ಜೀವಂತವಿದ್ದಷ್ಟು ಕಾಲ ಭಯಪಡುವ ಅಗತ್ಯವಿಲ್ಲವೆಂದು ಅವರು ತಿಳಿಸಿದರು.

ಕೇರಳದಲ್ಲಿ ಮಿತಿಗೊಳಪಟ್ಟ ಜನಸಂಖ್ಯೆಯಲ್ಲೂ ಉರ್ದು ಬೆಳೆದು ಬಂದಿರುವ ಏರಿಳಿತಗಳ ಬಗ್ಗೆ ವಿಶ್ಲೇಶಿಸಿದ ಅವರು ಕೇರಳದಲ್ಲಿ ಉರ್ದು ಭಾಷೆಗೆ ಎಲ್ಲಾ ಮಾನ್ಯತೆಗಳೊಂದಿಗೆ ಇನ್ನಷ್ಟು ಬೆಳವಣಿಗೆಗೆ ಸಾಧ್ಯವಿದೆಯೆಂದು ತಿಳಿಸಿದರು.
ಎಕೆಡಿಎಂಎಫ್‌ ಜಿಲ್ಲಾಧ್ಯಕ್ಷ ಮೊಹಮ್ಮದ್‌ ಯಾಕೂಬ್‌ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಖೀಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಸದಸ್ಯ ಅಬ್ದುಲ್‌ ಶುಕೂರ್‌ ಖಾಸಿಮಿ ಉದ್ಘಾಟಿಸಿದರು.

ಅಭಿನಂದನಾ ಕಾರ್ಯಕ್ರಮ 
ಜಾಥಾ ನಾಯಕ ಮುಹಮ್ಮದ್‌ ಅಝೀಂ ಮಣಿಮುಂಡ, ಉಪನಾಯಕ ಎಂ.ಮೋಹನನ್‌ ಕಣ್ಣೂರು, ಜಾಥಾ ನಿರ್ದೇಶಕ ವಿ.ಕೆ.ಸಿ. ಮೊಹಮ್ಮದ್‌ ಕೋಝಿಕ್ಕೋಡ್‌, ಟಿ.ಸಝೀಸ್‌ ಕಾಸರಗೋಡು, ಸಂಯೋಜಕ ವಿ.ವಿ.ಎಂ. ಬಶೀರ್‌ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.

Advertisement

ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಎ. ಶ್ರೀನಾಥ್‌, ಝಾರ್ಖಂಡ್‌ ವಿ.ವಿ.ಯ ನಿವೃತ್ತ ಉಪಕುಲಪತಿ ಡಾ| ಬಶೀರ್‌ ಅಹಮ್ಮದ್‌ ಖಾನ್‌, ಬಿ.ಎಫ್‌.ಎಚ್‌.ಆರ್‌. ಬಿಜಿಲಿ, ಎಕೆಡಿಎಂಎಫ್‌ ರಾಜ್ಯ ಅಧ್ಯಕ್ಷ ಎಚ್‌.ಅಬ್ದುಲ್‌ ಮಜೀದ್‌, ಹಫೀಸ್‌ ರಹಮಾನ್‌ ಉಪ್ಪಳ, ಎಂ.ವಿ.ಸಲೀಂ, ಇ. ಮನಾಫ್‌ ಕೊಲ್ಲಂ, ಎಂ.ಎ.ಶಬೀರ್‌, ಶುಜಾವುಲ್‌ ಕೊಲ್ಲಂ, ಅಮೀರ್‌ ಕೋಡಿಬೈಲ್‌, ಬಶೀರ್‌, ಮಜೀದ್‌ ಪರವೂರ್‌ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. 

ಜಾಥಾ ನಾಯಕ ಮೊಹಮ್ಮದ್‌ ಅಝೀಂ ಮಣಿಮುಂಡ ಪ್ರಾಸ್ತಾವಿಕವಾಗಿ ಮಾತನಾಡಿ ಉರ್ದು ಯಾತ್ರೆಯ ಬಗ್ಗೆ ಅನುಭವ ಹಂಚಿಕೊಂಡರು.

ಕೇರಳ ಉರ್ದು ಟೀಚರ್ ಅಸೋಸಿಯೇಶನ್‌ ರಾಜ್ಯ ಅಧ್ಯಕ್ಷ ಎಂ.ಹುಸೆ„ನ್‌ ಸ್ವಾಗತಿಸಿದರು. ಕೆಡಿಎಂಎಫ್‌ ರಾಜ್ಯ ಸಮಿತಿ ಸದಸ್ಯ ಅಬ್ದುಲ್‌ ಅಲಿ ವಂದಿಸಿದರು.

ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯಗಳು
ಎ.2 ರಂದು ಉಪ್ಪಳದಿಂದ ಆರಂಭಗೊಂಡು ರಾಜ್ಯದ ವಿವಿಧೆಡೆ ಸಂಚರಿಸಿ ಎ. 7ರಂದು ತಿರುವನಂತಪುರದಲ್ಲಿ ಸಮಾರೋಪಗೊಂಡ ಉರ್ದು ಯಾತ್ರೆಯ ಸಮಾರೋಪ ಸಮಾರಂಬದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಪೈಕಿ ಕೇರಳದಲ್ಲಿ ಉರ್ದು ಭಾಷೆ ಮಾತನಾಡುವ ಕುಟುಂಬಗಳ ಸ್ಥಿತಿಗತಿಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚಿಸಬೇಕು,  ಕಾಸರಗೋಡಿನಲ್ಲಿ ವರ್ಷಗಳ ಹಿಂದೆ ಆರಂಭಿಸಲಾದ ಉರ್ದು ಅಕಾಡೆಮಿಯ ಕಾರ್ಯ ಚಟುವಟಿಕೆಗಳಿಗೆ ವೇಗ ನೀಡಬೇಕು, ಕೇರಳದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿಂದಲೇ ಉರ್ದು ಭಾಷೆ ಕಲಿಕೆಗೆ ಅವಕಾಶ ನೀಡಬೇಕು, ಹೈಯರ್‌ ಸೆಕೆಂಡರಿ ವಿದ್ಯಾಭ್ಯಾಸದಲ್ಲಿ ಉರ್ದು ಭಾಷಾಧ್ಯಯನಕ್ಕೆ ಇನ್ನಷ್ಟು ಸೌಕರ್ಯಗಳನ್ನು ಏರ್ಪಡಿಸಬೇಕು, ಕೇಂದ್ರ ಸರಕಾರ ಉರ್ದು ಭಾಷಾಧ್ಯಯನಕ್ಕೆ ನೀಡುವ ನಿಧಿಯನ್ನು ರಾಜ್ಯ ಸರಕಾರ ಕೇರಳದ ಉರ್ದು ಅಧ್ಯಯನ, ಅಧ್ಯಾಪನಕ್ಕೆ ನೀಡಬೇಕು ಎಂಬ ನಿರ್ಣಯಗಳು ಪ್ರಮುಖವಾಗಿದ್ದು, ಸರಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next