Advertisement

ಮಳಿ-ಬೆಳಿ ಕೈ ಕೊಟ್ಟೈತಿ-ಸಾಲ ತೀರ್ಸೋದು ಹೆಂಗಂತ

03:29 PM Aug 24, 2018 | |

ವಿಜಯಪುರ: ಮುಂದೋಡಿ ಮಳೆ ಆತಂತ ಸಾಲಸೂಲ ಮಾಡಿ ಬಿತ್ತಿದ ಕಾಳು ಮೇಲೆದ್ದ ಮ್ಯಾಲ ಮತ್ತೆ ಮಳಿ ಸುರಿಲಾರ ಬೆಳಿ ಒಣಗೇತಿ. ಸರ್ಕಾರ ಸಾಲ ಮನ್ನಾ ಮಾಡಿನಂತಿದ್ರೂ ತೀರಿಲ್ಲ. ಮುಂದೆ ಹೆಂಗ ಜೀವನ ಅನ್ನೋದೇ ಚಿಂತ್ಯಾಗೇತಿ. ಬರ್ತೀರಿ, ಹೊಕ್ಕೀರಿ ಅನ್ನಂಗಾಗ ಸರ್ಕಾರ ರೈತರ ನೆರವಿಗೆ ಬರಬೇಕು. 

Advertisement

ಇದು ವಿಜಯಪುರ ಜಿಲ್ಲೆಯಲ್ಲಿ ಮಳೆ ಇಲ್ಲದೇ ಬರ ಆವರಿಸಿ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರ ಗೋಳಿನ ಮಾತು. ಗುರುವಾರ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಜಿಲ್ಲೆಯ ಬರ ಅಧ್ಯಯನಕ್ಕಾಗಿ ಹೊನಗನಹಳ್ಳಿ ರೈತ ಶಿವನಗೌಡ ಶಂಕರಗೌಡ ಬಿರಾದಾರ ಅವರ ಜಮೀನಿನಲ್ಲಿ ಬೆಳೆ ಹಾನಿ ಪರಿಶೀಲನೆ ವೇಳೆ ಸ್ಥಳದಲ್ಲಿದ್ದ ರೈತರು ತಮ್ಮ ಗೋಳು ಹೇಳಿಕೊಂಡರು.

ಮುಂಗಾರು ಹಂಗಾಮಿನ ಆರಂಭದಲ್ಲಿ ಉತ್ತಮ ಮಳೆ ಆಗಿತ್ತೆಂದು ಹತ್ತಾರು ಸಾವಿರ ರೂ. ಸಾಲ ಮಾಡಿ ಬಿತ್ತನೆ ಮಾಡಿದೆವು, ಕಸ, ಕಳೆ ತೆಗೆಸಿ, ಗೊಬ್ಬರ ಹಾಕಿದೆವು. ಆದರೆ ಬಿತ್ತನೆ ಬಳಿಕ ಮಳೆ ಇಲ್ಲದೇ ಒಣಗಿನಿಂತ ತೊಗರಿ ಬೆಳೆ, ಮಳೆ ನಿರೀಕ್ಷೆಯಲ್ಲಿ ಬಿತ್ತಿದ್ದರೂ ಮೊಳಕೆ ಒಡೆಯದ ಬೆಳೆ ಹಾನಿಯಾಗಿದೆ. ಒಂದೆಡೆ ಮುಂಗಾರು ಬಿತ್ತನೆಗೆ ತೊಡಗಿಸಿ ಬಂಡವಾಳ ಕೈ ಬಿಡುತ್ತಿದೆ. ಮತ್ತೂಂದೆಡೆ ಹಿಂಗಾರು ಹಂಗಾಮಿಗೆ ಬಿತ್ತನೆಗೆ ಬೀಜ-ಗೊಬ್ಬರಕ್ಕೆ ಹಣ ಹೊಂದಿಸಿಕೊಳ್ಳಬೇಕು ಎಂದು ರೈತರು ಅವಲತ್ತುಕೊಂಡರು.

ಸರ್ಕಾರ ಬರ ಸಂದರ್ಭದಲ್ಲಿ ರೈತರ ನೆರವಿಗೆ ಜಾರಿಗೆ ತಂದಿರುವ ಬೆಳೆ ವಿಮೆ ಮಾಡಿಸಿದಲ್ಲಿ ಪರಿಹಾರ ದೊರೆಯುತ್ತದೆ. ನೀವೇಕೆ ಇದರ ಸೌಲಭ್ಯ ಪಡೆಯಲು ವಿಮೆ ಹಣ ಪಾವತಿಸುವುದಿಲ್ಲ ಎಂದಾಗ ರೈತರು ಎರಡು ವರ್ಷಗಳ ಹಿಂದೆ ಕಟ್ಟಿದ ಬೆಳೆ ವಿಮೆ ಹಣವೇ ಇನ್ನೂ ಪಾವತಿ ಆಗಿಲ್ಲ. ಕೊನೆ ಕ್ಷಣದಲ್ಲಿ ವಿಮೆ ಕಟ್ಟಿ ಅಂತಾರೆ, ಬ್ಯಾಂಕಿಗೆ ಹೋದ್ರೆ ವಿಮೆ ಕಟ್ಟದಷ್ಟು ದಟ್ಟಣೆ ಇರುತ್ತವೆ. ಬೆಳೆ ವಿಮೆ
ಹಂತದಲ್ಲಿ ಹೆಚ್ಚಿನ ಕೌಂಟರ್‌ ತೆರೆದು, ರೈತರ ಅನುಕೂಲ ಮಾಡಿಕೊಡುವುದಿಲ್ಲ. ಇಂಥ ಸ್ಥಿತಿಯಲ್ಲಿ ರೈತರು ಬೆಳೆ ವಿಮೆಯನ್ನು ನಂಬಿದರೆ ರೈತರು ಕೃಷಿ ಮಾಡಲು ಸಾಧ್ಯವಿಲ್ಲ . ಇತರೆ ರೈತರಂತೂ ಪ್ರತಿ ಎಕರೆಗೆ ಈಗಾಲೇ ಸುಮಾರು 30 ಸಾವಿರಕ್ಕಿಂತ ಹೆಚ್ಚಿನ ಖರ್ಚು ಮಾಡಿದ್ದು, ಬೆಳೆ ಹಾನಿ ಆಗಿರುವ ಕಾರಣ ಲಕ್ಷಾಂತರ ಸಾಲ ತಲೆ ಮೇಲೆ ಬಂದಿದೆ. ಇದೀಗ ಮತ್ತೆ ಹಿಂಗಾರಿಗೆ ಬಿತ್ತನೆ ಮಾಡಲು ಜಮೀನು ಹದ ಮಾಡಬೇಕು, ಬೀಜ-ಗೊಬ್ಬರ ಖರೀದಿಗೆ ಮುಂದಾಗಬೇಕು.
 
ಹಣ ಹೊಂದಿಸುವ ಬಗೆ ತಿಳಿಯುತ್ತಿಲ್ಲ ಎಂದು ಶಿವನಗೌಡ ಬಿರಾದಾರ ಕಂಗಾಲಾಗಿದ್ದರು. ಸಾಲ ಕೊಡುವವರಾದರೂ ಎಷ್ಟು ಅಂತ ಕೊಡುತ್ತಾರೆ ನೀವೇ ಹೇಳಿ, ನಾವಾದರೂ ಹತ್ತಾರು ವರ್ಷ ನಿರಂತರ ಸಾಲ ಮಾಡಿ ಬಿತ್ತನೆ ಮಾಡಿ ಕೈಸುಟ್ಟುಕೊಳ್ಳುತ್ತಿದ್ದರೆ ನಮ್ಮ ಕುಟುಂಬಗಳು ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ ಎಂದು ತಿಪ್ಪಣ್ಣ ತುಪ್ಪದ ಸಚಿವ ದೇಶಪಾಂಡೆ ಎದುರು ಗೋಳಿಟ್ಟರು.

ಕೇವಲ ಅಧ್ಯಯನ, ವರದಿ ಅಂತೆಲ್ಲ ಕಾಲ ಕಳೆಯದೇ ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು. ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಿ, ಕೂಡಲೇ ಋಣಮುಕ್ತರಾಗಿ ಮಾಡಿ, ಹಿಂಗಾರು ಬಿತ್ತನೆಗೆ ಉಚಿತ ಬೀಜ-ಗೊಬ್ಬರ ಪೂರೈಕೆಗೆ ಮುಂದಾಗಬೇಕು ಎಂದು ಮಹಾದೇವಪ್ಪ ಕೆಂಗನಾಳ ಆಗ್ರಹಿಸಿದರು. 

Advertisement

ರೈತರ ಗೋಳು ಆಲಿಸಿದ  ಬಳಿಕ ಪ್ರತಿಕ್ರಿಯಿಸಿದ ಸಚಿವ ಆರ್‌.ವಿ.ದೇಶಪಾಂಡೆ ರೈತರು ದೃತಿಗೆಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಸಂಕಷ್ಟಕ್ಕೆ ಸ್ಪಂದಿಸಲಿದೆ. ಸರ್ಕಾರ ರೈತರ ಸಂಕಷ್ಟಕ್ಕೆ ತ್ವರಿತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ದೇಶಪಾಂ ಡೆ ರೈತರಿಗೆ ಭರವಸೆ ನೀಡಿದರು. ಆಗಸ್ಟ್‌ 31ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬರ ಘೋಷಣೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next