Advertisement

ಮಣ್ಣಿನ ಕುದುರೆ ಹತ್ತಿ ಹೊಳೆ ದಾಟಲು ಹೋದೆ!

08:20 PM Jan 27, 2020 | Lakshmi GovindaRaj |

ಮೋಸದ ದಾರಿಯನ್ನು ಪರಿಚಯಿಸಿದ ನಿಮಗೆ ಈಗ ನನ್ನ ನೆನಪಿಲ್ಲದೆ ಇರಬಹುದು. ನೀವು ನನ್ನೊಂದಿಗೆ ಆಡಿದಂಥ ಆಟವನ್ನೇ ಮುಂದೊಂದು ದಿನ ಬೇರೆಯವರು ನಿಮ್ಮ ಜೊತೆ ಆಡಬಹುದು. ಎಚ್ಚರ…

Advertisement

ಪ್ರೀತಿ ಎಂದರೆ ಪವಿತ್ರ ಬಂಧ, ಪ್ರೀತಿ ಎಂದರೆ ಅಂದೊಂದು ನಿರ್ಮಲವಾದ ಎರಡು ಮನಸ್ಸುಗಳ ಕೊಂಡಿ. ಆದರೆ, ಪ್ರೀತಿ ಯ ಮುಖವಾಡ ಧರಿಸಿ ನನ್ನ ಜೊತೆ ಪ್ರೀತಿಯ ನಾಟಕವಾಡಲು ಮನಸ್ಸಾದರೂ ಹೇಗೆ ಬಂತು ನಿನಗೆ? ನನ್ನ ಪಾಡಿಗೆ ನಾನು ಇದ್ದೆ, ನೀನೇ ನನ್ನ ಬಳಿ ಬಂದು ಪ್ರೀತಿಯೆಂಬ ಕಥೆಯ ಕಟ್ಟಿ, ಅದರಲ್ಲಿ ನನಗೂ ಒಂದು ಪಾತ್ರ ಕೊಟ್ಟೆ. ನಾನೆಂದೂ ನಿನ್ನ ಬಳಿ ನನಗೆ ಆ ಪಾತ್ರ ಬೇಕೆಂದು ಬೇಡಿಕೆ ಇಟ್ಟಿರಲಿಲ್ಲ.

ದಾರಿಯಲ್ಲಿ ಕಂಡವರೆಲ್ಲರೂ ನನ್ನ ನಿನ್ನ ಸಂಬಂಧದ ಬಗ್ಗೆ ಹಲವು ಬಗೆಯಲ್ಲಿ, ಹಲವು ರೀತಿಯಲ್ಲಿ ಮಾತನಾಡಿದರೂ ಓಲೈಸಲಿಲ್ಲ. ಆದರೆ ಮುಂದೆ ಒಂದು ದಿನ, ಅದು ನಾಟಕವೆಂದು ತಿಳಿದಾಗ ನಂಬಲಾಗಲಿಲ್ಲ. ಆದರೂ ನಂಬಲೇಬೇಕಿತ್ತು. ನಾಟಕದಲ್ಲಿ ನೀನು ಪ್ರೇಮಿಸಿದ ಹುಡುಗಿಯೇ ಬೇರೆ, ಅವಳಿಗೆ ಅನುಗುಣವಾಗುವಂತೆ ವಾತಾವರಣ ಸಂದರ್ಭ ರಚಿಸಿ, ಅವಳಿಗೆ ತೊಂದರೆ ಆಗಬಾರದೆಂದು ನನ್ನನ್ನು ಮುಂದಿಟ್ಟೆ.

ನಾನೋ ಸತ್ಯ, ಸುಳ್ಳು ಯಾವುದನ್ನೂ ಅರಿಯದೆ, ಮಣ್ಣಿನ ಕುದುರೆಯ ನಂಬಿ ಹೊಳೆಯ ದಾಟಲು, ಕನಸು, ಗುರಿಗಳ ಗಂಟು ಕಟ್ಟಿಕೊಂಡು ಹೊರಟೆ. ನನಗೆ ನಾನು ಹತ್ತಿರುವುದು ಮಣ್ಣಿನ ಕುದುರೆಯೆಂಬ ಸಣ್ಣ ಆಲೋಚನೆಯೂ ಬರಲಿಲ್ಲ. ನೀನು ಪ್ರೀತಿಸಿದ ಹುಡುಗಿಯ ಕನಸಿಗಾಗಿ ನನ್ನ ಗುರಿ ತಪ್ಪಿಸಿದೆ. ನನ್ನ ಆಲೋಚನೆ, ಹೊರಟ ದಾರಿಯ ದಿಕ್ಕು, ಜೊತೆಗೆ ಸ್ನೇಹಿತರನ್ನೂ ನನ್ನಿಂದ ದೂರ ಮಾಡಿದೆ.

ನಾನು, ನನಗೆ ಕೊಟ್ಟ ಪಾತ್ರವನ್ನು ಹೇಗೆ ನಿರೂಪಿಸಿ ತೋರಿಸಬೇಕೆಂದು, ನಾಟಕದ ಪಾತ್ರದಲ್ಲಿ ಆಳವಾಗಿ ಇಳಿದು ಪಾತ್ರ ಧಾರಿಯಾಗಿಯೇ ಉಳಿದುಬಿಟ್ಟೆ. ಅಷ್ಟರಲ್ಲಿ, ಕೊನೆಗೆ ಕೊಟ್ಟ ಪಾತ್ರವನ್ನು ಹಿಂಪಡೆಯಲು ಇಲ್ಲ. ಸಲ್ಲದ ಸಬೂಬು ಹೇಳಿ, ಜೊತೆಗೆ ಆರೋಪವನ್ನೂ ಮಾಡಿ, ಕೊನೆಗೂ ನನ್ನನ್ನೇ ಎಲ್ಲರ ಬಳಿಯೂ ಕೆಟ್ಟವಳಾಗಿ ಮಾಡಿಹೋದೆ.

Advertisement

ನನ್ನದಲ್ಲದ ನಾಟಕಕ್ಕೆ ನನ್ನನ್ನೇ ಕಥಾನಾಯಕಿಯಾಗಿ ಮಾಡಿ ಜೀವನದ ಪಾಠ ಕಲಿಸಿದ ನಿನಗೆ ಹೇಗೆ ಕೃತಜ್ಞತೆ ತಿಳಿಸಬೇಕೆಂದು ಗೊತ್ತಿಲ್ಲ. ನನಗೂ ಮನಸ್ಸಿದೆ ಭಾವನೆಗಳಿವೆ, ನೀನು ಪ್ರೀತಿಸಿದ ಹುಡುಗಿಯಂತೆ ನಾನೂ ಒಂದು ಹೆಣ್ಣಲ್ಲವೆ? ನನ್ನ ಬಗ್ಗೆ ನನಗೆ ನಂಬಿಕೆ ಇದೆ. ಮುಖಕ್ಕೆ ಬಣ್ಣ ಹಚ್ಚಿ ನಾಟಕವಾಡುವವರ ನಡುವೆ ಮನಸ್ಸಿಗೆ ಬಣ್ಣ ಹಚ್ಚಿ ಕೊಂಡು ಅಂತರಾಳದ ಕಥೆಯ ಜೊತೆಗೆ ನಟನೆ ಮಾಡಿದೆ.

ನಿನ್ನ ಅಭಿನಯ ಮೆಚ್ಚಿ ಅದರ ರೂಪವನ್ನು ಬಣ್ಣಿಸಲು ನನಗೀಗ ಶಕ್ತಿಯಿಲ್ಲ. ಎಲ್ಲರ ಎದುರಿಗೆ ನೀವು ನಿರ್ದೇಶಿಸಿದ ನಾಟಕಕ್ಕೆ ಮೆಚ್ಚುಗೆ ಪಡೆಯಲು ನನ್ನನ್ನು ದಾಳವಾಗಿ, ಮಧ್ಯವರ್ತಿಯಾಗಿ ಬಳಸಿಕೊಂಡಿರಿ. ಮೋಸದ ದಾರಿಯನ್ನು ಪರಿಚಯಿಸಿದ ನಿಮಗೆ ಈಗ ನನ್ನ ನೆನಪಿಲ್ಲದೆ ಇರಬಹುದು. ನೀವು ನನ್ನೊಂದಿಗೆ ಆಡಿದಂಥ ಆಟವನ್ನೇ ಮುಂದೊಂದಿ ದಿನ ಬೇರೆಯವರು ನಿಮ್ಮ ಜೊತೆ ಆಡಬಹುದು. ಎಚ್ಚರ…

* ಭಾಗ್ಯಶ್ರೀ ಎಸ್‌, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next