ಬೆಂಗಳೂರು: ರಾಜಧಾನಿಯಲ್ಲಿ ದುಷ್ಕರ್ಮಿಗಳು ಪೊಲೀಸರ ಮೇಲೆ ಹಲ್ಲೆ ಮುಂದುವರಿದಿದ್ದು, ಕಳ್ಳತನಕ್ಕೆ ಸಿದ್ಧರಾಗಿದ್ದ ಗುಂಪನ್ನು ಹಿಡಿಯಲು ಹೋದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿ ರೈಫಲ್ ಕಸಿದು ಪರಾರಿಯಾಗಿರುವ ಘಟನೆ ಟಾಟಾನಗರ ಮುಖ್ಯರಸ್ತೆಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಕಳೆದ 7 ದಿನಗಳ ಅಂತರದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಮೂರನೇ ಪ್ರಕರಣ ಇದಾಗಿದ್ದು, ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಪೇದೆ ಎಂ. ಪರಮೇಶ್ವರಪ್ಪ ಹಾಗೂ ಸಿದ್ದಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೇದೆಗಳ ದೂರಿನ ಮೇರೆಗೆ ಯಲಹಂಕ ಎಸಿಪಿ ನೇತೃತ್ವದಲ್ಲಿ ಪೊಲೀಸರ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ.
ಬುಧವಾರ ರಾತ್ರಿ ಟಾಟಾ ನಗರ ಸುತ್ತಲಭಾಗದಲ್ಲಿ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದು, ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ಬಗ್ಗೆ ಕಂಟ್ರೋಲ್ ರೂಂಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಗಸ್ತಿನಲ್ಲಿದ್ದ ಪರಮೇಶ್ವರಪ್ಪ ಹಾಗೂ ಸಿದ್ದಪ್ಪ ಇಬ್ಬರೂ ರಾತ್ರಿ 2-10ರ ಸುಮಾರಿಗೆ ಟಾಟಾನಗರದ ಮುಖ್ಯರಸ್ತೆಯ ಕಡೆ ಬೈಕ್‌ನಲ್ಲಿ ಬರುವ ವೇಳೆ, ನಾಲ್ವರು ದುಷ್ಕರ್ಮಿಗಳು ರಸ್ತೆಬದಿ ನಿಂತಿದ್ದ ಕಾರಿನ ಟೈರ್ ಬಿಚ್ಚುತ್ತಿದ್ದು, ಪೊಲೀಸರನ್ನು ಕಂಡ ದುಷ್ಕರ್ಮಿಗಳು ಪಕ್ಕ ಕಾಲುವೆಯಲ್ಲಿ ತಲೆಮರೆಸಿಕೊಂಡಿದ್ದಾರೆ.
ಕಾರಿನ ಬಳಿ ಬಂದ ಪೊಲೀಸರು ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಮುಂದಾದಾಗ, ಅವರು ಕಲ್ಲುತೂರಾಟ ನಡೆಸಿದ್ದಾರೆ. ಇದರಿಂದ ಗಾಯವಾಗಿದೆ. ಅದೇ ವೇಳೆ ರೈಫಲ್ ಕೆಳಗೆ ಬಿದ್ದಿದೆ. ದುಷ್ಕರ್ಮಿಗಳು ಪೊಲೀಸರ ರೈಫಲ್ ಎತ್ತಿಕೊಂಡಿದ್ದಾರೆ. ಇದಕ್ಕೆ ಪ್ರತಿರೋಧ ತೋರಿದ ಪೇದೆಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ವೇಳೆ ಪೇದೆ ಪರಮೇಶ್ವರಪ್ಪ ಬಲ ಕೈಗೆ ಸ್ವಲ್ಪ ಗಾಯವಾಗಿದೆ ಎಂದು ಹಿರಿಯ ಅಧಿಕಾರಿ ವಿವರಿಸಿದರು.
ಸಿಸಿಟಿವಿ ಪೂಟೇಜ್‌ನಲ್ಲಿ ಕೃತ್ಯದ ಸುಳಿವು!: ಘಟನಾ ಸ್ಥಳದ ಸುತ್ತಮುತ್ತಲ ಮನೆಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಫೂಟೇಜ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದ್ದು, ಆರೋಪಿಗಳು ಹೇಗಿದ್ದರು ಎಂಬ ಬಗ್ಗೆ ಪೇದೆಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಆದರೆ, ರಾತ್ರಿ ವೇಳೆಯಾದ್ದರಿಂದ ಅವರ ಮುಖಚಹರೆ ಸರಿಯಾಗಿ ಅವರಿಗೂ ಕಂಡಿಲ್ಲ. ನಾಲ್ಕೈದು ಮಂದಿಯಿದ್ದರು ಎಂದು ಹೇಳಿಕೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
ದುಷ್ಕರ್ಮಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು ಕಾರ್ಯಾಚರಣೆ ಮುಂದುವರಿಸಲಾಗಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ದುಷ್ಕರ್ಮಿಗಳ ಕುರಿತ ಸುಳಿವು ದೊರೆತಿದ್ದು ಶೀಘ್ರವೇ ಬಂಧಿಸಲು ಕ್ರಮ ಕೈಗೊಳ್ಳಲಾಗುವುದು.
-ಗಿರೀಶ್, ಡಿಸಿಪಿ, ಈಶಾನ್ಯ ವಿಭಾಗ
ವಾರದಲ್ಲಿ ಮತ್ತಷ್ಟು ಪ್ರಕರಣಗಳು
* ಜ.12: ತಡರಾತ್ರಿ 2 ಗಂಟೆ ಸುಮಾರಿಗೆ ಪಾನಮತ್ತ ಟೆಕ್ಕಿಗಳಿಂದ ಎಚ್‌ಎಎಲ್ ಸಬ್‌ಇನ್ಸ್‌ಪೆಕ್ಟರ್ ನವೀನ್ ಮತ್ತು ಪೇದೆ ಮೋಹನ್ ಮೇಲೆ ಹಲ್ಲೆ
* ಜನವರಿ.15 -ಶೆಟ್ಟಿಹಳ್ಳಿಯ ಅಂಜನಾದ್ರಿ ಬಡಾವಣೆಯಲ್ಲಿ ಮಹಾಲಕ್ಷ್ಮೀ ಲೇಔಟ್ ಠಾಣೆ ಮುಖ್ಯ ಪೇದೆ ಅನಿಲ್ ಕುಮಾರ್ ಮೇಲೆ ಬೈಕ್ ಸವಾರನಿಂದ ಹಲ್ಲೆ.
* ಜ.16- ರಾತ್ರಿ 11.30ರ ಸುಮಾರಿಗೆ ಜಗಳ ಬಿಡಿಸಲು ಹೋದ ಜಗಜೀವನ್ ರಾಂ ನಗರ ಠಾಣೆ ಮುಖ್ಯ ಪೇದೆ ( ಹೊಯ್ಸಳ ಚಾಲಕ) ಕೆ.ರಾಜೇಂದ್ರ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ರೌಡಿಶೀಟರ್ ಮೊಹಮದ್ ಅಲೀಂ
* ವಾಹನ ತಪಾಸಣೆ ವೇಳೆ ಪೊಲೀಸ್ ಸಿಬ್ಬಂದಿಯ ಸಮವಸ್ತ್ರ ಹರಿದ ದುಷ್ಕರ್ಮಿಗಳು. ಈ ಪ್ರಕರಣ ಸಂಬಂಧ ಬಾಗಲಕುಂಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.