ಹುಣಸೂರು: ನಗರದ ನಗರಸಭೆ ವತಿಯಿಂದ ಸ್ವತ್ಛ ಭಾರತ್ ಮಿಷನ್ ಯೋಜನೆಯಡಿ ನಗರಸಭೆ ಹಾಗೂ ಭಗೀರಥ ಸಂಸ್ಥೆ ಸಹಯೋಗದಲ್ಲಿ ನಗರ ಸಭೆಯ ಸದಸ್ಯರು ಹಾಗೂ ಸಿಬ್ಬಂದಿಗೆ ಒಂದು ದಿನದ ಪುನರ್ ಮನನ ಕಾರ್ಯಾಗಾರ ಆಯೋಜಿಸಲಾಗಿತ್ತು.
ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ನಗರಸಭೆ ಅಧ್ಯಕ್ಷ ಕೆ.ಲಕ್ಷಣ್ ಮಾತನಾಡಿ, ನಗರವನ್ನು ಬಯಲು ಶೌಚ ಮುಕ್ತ ಹಾಗೂ ಸ್ವತ್ಛ ನಗರವನ್ನಾಗಿಸಲು ನಗರಸಭೆ ಎಲ್ಲಾ ಸದಸ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಮಕ್ಕಳು, ಮಹಿಳೆಯರು, ಯುವಜನರ ಮತ್ತು ವೃದ್ಧರ ರಕ್ಷಣೆ ಮಾಡುವ ಕರ್ತವ್ಯ ನಮ್ಮೆಲ್ಲರ ಮೇಲಿದೆ, ಹಾಗಾಗಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ನಗರವನ್ನು ಸ್ವತ್ಛ ನಗರಿಯಾಗಿಸಬೇಕಿದೆ. ಈ ಸಂಬಂಧ ಆಟೋ ಮೂಲಕ ಪ್ರತಿ ವಾರ್ಡ್‌ಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುವಾಗ ಆಯಾ ವಾರ್ಡಿನ ಸದಸ್ಯರು, ನಗರಸಭೆ ಸಿಬ್ಬಂದಿ ಹಾಜರಿದ್ದು ಸಹಕರಿಸಬೇಕು ಎಂದು ತಿಳಿಸಿದರು.
ಭಗೀರಥ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎ ಚಂಗಪ್ಪ ಮಾತನಾಡಿ, ನೆಲೆ, ಜಲ, ಗಾಳಿ ನಮ್ಮ ಅವಿಭಾಜ್ಯ ಅಂಗಗಳು ಮತ್ತು ನೈಸರ್ಗಿಕ ಸಂಪತ್ತು ಉಳಿಸುವುದು, ಸಂರಕ್ಷಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ ಕೂಡ ಆಗಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಬೆಳೆಯುತ್ತಿರುವ ಕೈಗಾರಿಕರಣ ಮತ್ತು ಬೃಹತ್ ಕಟ್ಟಡಗಳ ನಿರ್ಮಾಣದಿಂದಾಗಿ ಹಾಗೂ ಮನುಷ್ಯನ ದುರಾಸೆಯಿಂದ ಪರಿಸರ ಹಾಳಾಗುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಸ್ವತ್ಛ ನಗರವನ್ನಾಗಿಸಲು ಎಲ್ಲರೂ ಜೊತೆಗೂಡಿ ಪಣತೊಡೋಣ ಎಂದರು.
ಪೌರಾಯುಕ್ತ ಶಿವಪ್ಪನಾಯ್ಕ ಮಾತನಾಡಿ, ನಗರ ದಿನೇದಿನೇ ಬೆಳೆಯುತ್ತಿದೆ, ಬಡಾವಣೆಗಳ ಹೆಚ್ಚು ನಿರ್ಮಾಣವಾಗುತ್ತದೆ. ಮೈಸೂರು ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಪಡೆಯಬೇಕಿದೆ, ನಗರದಲ್ಲಿ 27 ವಾರ್ಡ್‌ಗಳಲ್ಲಿ 10,600 ಮನೆಗಳಿದ್ದು, ಮೊದಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭ ಗೀರಥ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಬಗ್ಗೆ ಮಕ್ಕಳಲ್ಲಿ ಸ್ವತ್ಛತಾ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಮಕ್ಕಳಿಂದ ಸ್ವತ್ಛತೆ ಬಗ್ಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗುತ್ತದೆ ಎಂದು ಹೇಳಿದರು.
ಭಗೀರಥ ಸಂಸ್ಥೆಯ ನಂಜುಂಡಸ್ವಾಮಿ, ಜಿ.ಎಸ್.ಜಗದೀಶ್, ನಗರಸಭೆಯ ಸದಸ್ಯರಾದ ಶಿವರಾಜು, ನರಸಯ್ಯ, ಎಚ್.ಜೆ.ಯೋಗಾನಂದ, ನಸ್ರುಲ್ಲಾ, ಸತೀಶ್ ಕುಮಾರ್, ಸುನಿತಾ ಹಾಗೂ ನಾಮನಿರ್ದೇಶಿತ ಸದಸ್ಯರುಗಳು, ನಗರ ಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಶಿವಪ್ರಕಾಶ್, ಹಿರಿಯ ಆರೋಗ್ಯ ಸಹಾಯಕರಾದ ಸತೀಶಕುಮಾರ್, ಮೋಹನಕುಮಾರ್, ನಗರಸಭೆ ಸಿಬ್ಬಂದಿ ಭಾಗವಹಿಸಿದ್ದರು.