Advertisement
ಮೊದಲೇ ಮಲ್ಪೆ ಪೇಟೆಯ ಮುಖ್ಯರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಅಂಗಡಿಗಳ ಮೆಟ್ಟಿಲುಗಳನ್ನು ಚರಂಡಿಯನ್ನು ಮುಚ್ಚಿ ಕಟ್ಟಲಾಗಿದೆ. ಕೆಲವಡೆ ಚರಂಡಿಗೆ ಹಾಸಿದ ಕಲ್ಲು ಚಪ್ಪಡಿಗಳಿಂದ ಚರಂಡಿಯೇ ಬ್ಲಾಕ್ ಆಗಿದೆ. ಉಳಿದ ಕಡೆಯ ಚರಂಡಿಗಳು ಮಣ್ಣಿನಿಂದ ಮುಚ್ಚಿ ಹೋಗಿ ರಸ್ತೆಯಾಗಿ ಮಾರ್ಪಟ್ಟಿವೆ. ಹಾಗಾಗಿ ಪ್ರತೀ ಮಳೆಗಾಲದಲ್ಲಿ ಜೋರಾದ ಮಳೆಗೆ ಕೃತಕ ನೆರೆ ಉಂಟಾಗಿ ಮಳೆ ನೀರು ರಸ್ತೆಯಲ್ಲೆ ಹರಿಯುತ್ತಿದೆ.
ಮಲ್ಪೆ ಮುಖ್ಯ ಜಂಕ್ಷನ್ ಶಿವಸಾಗರ್ ಹೊಟೇಲ್‌ನಿಂದ ಯುಬಿಎಂ ದೇವಾಲಯದವರೆಗೆ ಚರಂಡಿ ಕಲ್ಲು ಚಪ್ಪಡಿ ಯಿಂದ ಮುಚ್ಚಿ ಹೋಗಿದೆ. ಇಲ್ಲಿನ ತೋಡಿನ ಹೂಳು ತೆಗೆಯದೇ ವರ್ಷಗಳೇ ಕಳೆದಿದ್ದು ಪ್ರತಿವರ್ಷ ಕೃತಕ ನೆರೆ ಉಂಟಾಗುತ್ತಿದೆ. ಮಸೀದಿ ಮುಂಭಾಗದ ರಸ್ತೆಯ ಬದಿಯ ತೋಡಿನಲ್ಲಿ ಗಿಡಗಂಟಿಗಳು ಬೆಳೆದು ನಿಂತು ನೀರು ಹರಿಯಲು ತಡೆಯೊಡ್ಡಿದೆ. ಹನುಮಾನ್‌ನಗರ ಭಜನ ಮಂದಿರದ ಸಮೀಪದಲ್ಲಿರುವ ನಾಲ್ಕು ತೋಡುಗಳ ಹೂಳನ್ನು ತೆರವುಗೊಳಿಸುವ ಕಾರ್ಯ ನಡೆದಿಲ್ಲ. ಬೇಬಿ ಮೈರನ್ ಇಂಡಸ್ಟ್ರೀಸ್‌ನಿಂದ ಬಾಪುತೋಟ ಪ್ರದೇಶದ ಬಳಿಯ ರಸ್ತೆಯ ಚರಂಡಿ ನಿರ್ವಹಣೆ ಇಲ್ಲದಂತಾಗಿದೆ. ಚರಂಡಿಯಲ್ಲಿ ಕಸಕಡ್ಡಿ ತ್ಯಾಜ್ಯಗಳು ತುಂಬಿಹೋಗಿವೆ. ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ (ಫಿಶರೀಸ್) ಮುಂಭಾಗದಲ್ಲಿರುವ ಚರಂಡಿಯಲ್ಲಿ ಹೂಳಿನೊಂದಿಗೆ ಕಸಕಡ್ಡಿ ತುಂಬಿದೆ. ಶಾಲಾ ಸಭಾಭವನದ ಹಿಂಭಾಗದ ಮತ್ತು ಏಳೂರು ಮೊಗವೀರ ಸಭಾವನದ ಮುಂಭಾಗದ ಚರಂಡಿಯಲ್ಲೂ ಹೂಳು ತುಂಬಿದೆ. ಕಾಮಗಾರಿ ನಡೆಸುವ ಭರವಸೆ
ಈಗಾಗಲೇ ನಗರಸಭೆಯ ಪೌರಾಯುಕ್ತರಿಗೆ ಮತ್ತು ಆರೋಗ್ಯ ಅಧಿಕಾರಿಗಳಿಗೆ ಹೂಳೆತ್ತಬೇಕಾಗಿರುವ ಚರಂಡಿಗಳ ಪಟ್ಟಿ ಮಾಡಿ ಕೊಟ್ಟಿದ್ದೇನೆ. ಆರೋಗ್ಯ ಅಧಿಕಾರಿ ಸೇ°ಹ ಅವರು ಸ್ಥಳ ಪರಿಶೀಲನೆ ನಡೆಸಿ ಆದಷ್ಟು ಬೇಗ ಹೂಳೆತ್ತುವ ಕಾಮಗಾರಿ ನಡೆಸುವ ಭರವಸೆಯನ್ನು ನೀಡಿದ್ದಾರೆ.
-ಎಡ್ಲಿನ್ ಕರ್ಕಡ,
ನಗರಸಭೆ ಸದಸ್ಯರು, ಮಲ್ಪೆ ಸೆಂಟ್ರಲ್
Related Articles
ಮಳೆ ಸುರಿದ ಬಳಿಕ ಕೆಲಸ ಆರಂಭಿಸಿದರೆ, ಮತ್ತೆ ಮಳೆಯ ನೆಪವೊಡ್ಡಿ ಕಾಮಗಾರಿ ನಿಲ್ಲಿಸಲಾಗುತ್ತದೆ. ಮಾತ್ರವಲ್ಲದೆ ಮಳೆಯಲ್ಲಿ ಚರಂಡಿಯ ಹೂಳೆತ್ತಿದರೆ ಅದೇ ಮಳೆ ನೀರಿನೊಂದಿಗೆ ಆ ಹೂಳು ಮತ್ತೆ ಚರಂಡಿ ಸೇರುತ್ತದೆ. ಹಾಗಾಗಿ ಮಳೆಗಾಲಕ್ಕೆ ಒಂದೆರಡು ತಿಂಗಳು ಮುನ್ನವೇ ಚರಂಡಿಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಬೇಕು. ಈ ಬಗ್ಗೆ ಆಡಳಿತ ಈಗಲೇ ಸನ್ನದ್ಧವಾಗಬೇಕು.
-ಸ್ಟೀವನ್ ಅಮ್ಮನ್ನ, ಸ್ಥಳೀಯರು
Advertisement