Advertisement
ಮಲ್ಲಿಗೆ ನಗರಿಯಲ್ಲಿ ಶುಕ್ರವಾರದಿಂದ ಆರಂಭಗೊಂಡ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಗರದೆಲ್ಲೆಡೆ ಕನ್ನಡ ಸಾರ್ವಭೌಮತ್ವವನ್ನು ಪಸರಿಸಿತು. ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ(ಚಂಪಾ), ಅವರ ಪತ್ನಿ ನೀಲಾ ಪಾಟೀಲ ಮತ್ತು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಅವರು ಮೆರವಣಿಗೆಯಲ್ಲಿ ನಸುನಗುತ್ತಾ ಕೈಬೀಸುತ್ತಿದ್ದರು. ಕಲಾತಂಡಗಳ ಮೆರಗು: ಅಕ್ಷರ ಜಾತ್ರೆಯ ಅಂಗವಾಗಿ ನಡೆದಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಸಾಗಿದ ಕಲಾತಂಡಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿತು. ಪ್ರಮುಖವಾಗಿ ನಂದಿಧ್ವಜ, ನಗಾರಿ, ನಾದಸ್ವರ, ಕಹಳೆ, ಡೊಳ್ಳುಕುಣಿತ, ಕೋಲಾಟ, ಡೋಲು, ಆದಿವಾಸಿಗಳ ನೃತ್ಯ, ಮರಗಾಲು, ವೀರಭದ್ರ ಕುಣಿತ, ವೀರಗಾಸೆ, ಗೊಂಬೆ ಕುಣಿತ, ಹಲಗೆ ಬಡಿತ ಸೇರಿ 56 ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದಿತು. ಇವರೊಂದಿಗೆ ಅಕ್ಕಮಹಾದೇವಿ, ಭುವನೇಶ್ವರಿ, ಕಿತ್ತೂರು ರಾಣಿಚೆನ್ನಮ್ಮ, ರಾವಣ, ರಾಮ, ಆಂಜನೇಯನ ವೇಷಧಾರಿಗಳು ನೋಡುಗರ ಗಮನ ಸೆಳೆದರು.
ಕಲಾತಂಡಗಳು, ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಅದ್ಧೂರಿ ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು. ಪೊಲೀಸ್ ಬ್ಯಾಂಡ್ ಹಿಮ್ಮೇಳದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗಿತು.
Related Articles
Advertisement
ಮನಸೋತ ಫ್ರಾನ್ಸ್ ಪ್ರಜೆಗಳುನಗರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹೆಜ್ಜೆಹಾಕಿದ ಫ್ರಾನ್ಸ್ ಪ್ರಜೆಗಳು ಕಲಾತಂಡಗಳ ಆಕರ್ಷಣೆಗೆ ಮನಸೋತರು. 3 ದಿನಗಳ ಪ್ರವಾಸಕ್ಕೆಂದು ಮೈಸೂರಿಗೆ ಬಂದಿರುವ ಕರಮ್ ಹಾಗೂ ಪುಲೀನ್ ದಂಪತಿ, ತಾವು ಮೆರವಣಿಗೆಯಲ್ಲಿ ಸಾಗುತ್ತ ಅದರ ಸವಿಯನ್ನು
ಆಸ್ವಾದಿಸಿದ್ದೇವೆ ಎಂದು ಸಂತಸ ಹಂಚಿಕೊಂಡರು. ಹಿರಿಯಜ್ಜನ ಕನ್ನಡ ಪ್ರೇಮ
ಮೆರವಣಿಗೆಯಲ್ಲಿ ಅನೇಕ ಕನ್ನಡ ಪ್ರೇಮಿಗಳು ನಾಡಿನ ವಿವಿಧ ಭಾಗಗಳಿಂದ ಬಂದಿದ್ದು ವಿಶೇಷ. ಇವರಲ್ಲಿ ದೂರದ ಬೆಳಗಾವಿಯ ನೆಡಬಾಳ ಗ್ರಾಮದಿಂದ ಆಗಮಿಸಿದ್ದ 72ರ ಹರೆಯದ ಎಂ.ಡಿ. ಅಲಾಸೆ ಹಳದಿ ಅಂಗಿ, ಕೆಂಪು ಪೈಜಾಮ ಧರಿಸಿ, ಕೈಯಲ್ಲಿ ಕನ್ನಡ ಬೃಹತ್ ಧ್ವಜವನ್ನು ಹಿಡಿದು ಹೆಜ್ಜೆಹಾಕಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಜನರು ನಾಚುವಂತೆ ಮಾಡಿದರು. ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಎಂ.ಡಿ.ಅಲಾಸೆ ಅವರಿಗೆ ಇದು 53ನೇ ಸಾಹಿತ್ಯ ಸಮ್ಮೇಳನ. ಮೈಸೂರು ನಗರ, ಸಂಸ್ಕೃತಿ-ಪರಂಪರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಕನ್ನಡದ ಹಿರಿಯಜ್ಜ, ಮುಂದಿನ ಜನ್ಮದಲ್ಲಿ ಮೈಸೂರಿನಲ್ಲೇ ಹುಟ್ಟಬೇಕೆಂಬ ಇಂಗಿತ ವ್ಯಕ್ತಪಡಿಸಿದರು. ಗಮನ ಸೆಳೆದವರು: ಮೆರವಣಿಗೆಯಲ್ಲಿ ಮೈಸೂರಿನ ವಿದ್ಯಾರಣ್ಯಪುರಂ ಬಾಲಕ ಭುವಂತ್ ತನ್ನ ಪುಟಾಣಿ ಸೈಕಲ್‌ಗೆ ಕನ್ನಡ ಧ್ವಜ ಕಟ್ಟಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನಸೆಳೆದ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, 83ನೇ ಕನ್ನಡ ಸಮ್ಮೇಳನದ ಪೋಸ್ಟರ್ ಅಂಟಿಸಿಕೊಂಡು ಮಿಂಚಿದ. ಇವರೊಂದಿಗೆ ರಾಯಚೂರಿನ ವಿಶ್ವನಾಥ್ ಹಾಗೂ ಅವರ ಪುತ್ರ ನಿಖೀಲ್‌ಗೌಡ, ಕನ್ನಡ ನಾಡು-ನುಡಿ, ಇತಿಹಾಸವನ್ನು ಬಿಂಬಿಸುವ ಘೋಷಣಾ ಫಲಕವನ್ನು ಹೆಗಲಿಗೆ ಕಟ್ಟಿಕೊಂಡು ಮೆರವಣಿಗೆಯಲ್ಲಿ ಸಾಗಿದರು. ಅಂತೆಯೇ
ವಿಜಯಪುರದಿಂದ ಬಂದಿದ್ದ 48 ವರ್ಷದ ಪ್ರಾಥಮಿಕ ಶಾಲಾ ಶಿಕ್ಷಕ ಶಿವಕುಮಾರ್, ಉಸಿರು ನಿಂತರೆ ಸಾವು, ಸೈನಿಕರಿದ್ದರೆ ನಾವು, ಕನ್ನಡಕ್ಕೆ ಕೈಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಫಲಕ ಕಟ್ಟಿಕೊಂಡು ಹೆಜ್ಜೆಹಾಕಿದರು.