Advertisement

ನಗರ ಕತ್ತಲಲ್ಲಿದೆ; ಬೀದಿ ದೀಪವೆಲ್ಲ ಸ್ತಬ್ಧ 

11:59 AM Jul 09, 2018 | |

ಮಹಾನಗರ: ನಗರದ ಹೃದಯ ಭಾಗವಾದ ಹಂಪನಕಟ್ಟೆ ಬಸ್‌ ನಿಲ್ದಾಣದಿಂದ ಆರ್‌ಟಿಒ ಬಸ್‌ ನಿಲ್ದಾಣದ ವರೆಗೆ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಸಂಚರಿಸುವಾಗ ಎಚ್ಚರದಿಂದಿರಿ. ಏಕೆಂದರೆ ಈ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ರಾತ್ರಿ ವೇಳೆ ಬೀದಿ ದೀಪಗಳು ಉರಿಯುವುದಿಲ್ಲ.

Advertisement

ಈ ಬಗ್ಗೆ ಸಾರ್ವಜನಿಕರು ಮಹಾನಗರ ಪಾಲಿಕೆ ಈ ಹಿಂದೆಯೇ ದೂರು ನೀಡಿದ್ದರು. ಆದರೂ, ಪಾಲಿಕೆ ಮಾತ್ರ ಮಳೆಯ ನೆಪ ಹೇಳಿ ದಿನ ದೂಡುತ್ತಿದೆ. ಇದರ ನೇರ ಪರಿಣಾಮ ಮಾತ್ರ ಸಾರ್ವಜನಿಕರ ಮೇಲೆ ಆಗುತ್ತಿದೆ. ಹಂಪನಕಟ್ಟೆ ಅಂದರೆ ಸದಾ ಜನನಿಬಿಡ ಪ್ರದೇಶವಾಗಿದ್ದು, ರಾತ್ರಿ ಸುಮಾರು 10 ಗಂಟೆಯವರೆಗೂ ಈ ನಿಲ್ದಾಣದಲ್ಲಿ ಬಸ್‌ಗೆ ಕಾಯುವವರಿದ್ದಾರೆ. 

ಪಂಪ್‌ವೆಲ್‌, ಲಾಲ್‌ಬಾಗ್‌, ಕಂಕನಾಡಿ, ಕಾಸರಗೋಡು, ಪುತ್ತೂರು, ಧರ್ಮಸ್ಥಳ ಸಹಿತ ಇನ್ನಿತರ ಪ್ರದೇಶಗಳಿಗೆ ತೆರಳುವ ಬಸ್‌ ಗಳು ಇದೇ ಮಾರ್ಗವಾಗಿ ರಾತ್ರಿ ವೇಳೆಯಲ್ಲಿ ಮಹಿಳೆಯರು ಸಹಿತ ಹೆಚ್ಚಿನ ಮಂದಿ ಇಲ್ಲೇ ಬಸ್‌ಗೆ ಕಾಯುತ್ತಾರೆ. 

ಏನು ಕಾರಣ?
ಮಳೆ ಬರುವುದಕ್ಕೂ ಮುಂಚಿತವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್‌ ನಿರ್ವಹಣಾ ಕಾಮಗಾರಿ ನಡೆಸಬೇಕಿತ್ತು. ಆದರೆ ಇದು ಸಮರ್ಪಕವಾಗಿ ನಡೆಯಲಿಲ್ಲ. ಇದೇ ಕಾರಣಕ್ಕೆ ಮೇ ತಿಂಗಳ ಕೊನೆಯ ವಾರದಲ್ಲಿ ಬಂದಂತಹ ಭಾರೀ ಮಳೆಗೆ ಇಲ್ಲಿನ ಸುಮಾರು 250 ಮೀಟರ್‌ನಷ್ಟು ವಿದ್ಯುತ್‌ ಕೇಬಲ್‌ಗ‌ಳಿಗೆ ಹಾನಿಯಾಗಿದೆ. ಇದರಿಂದಾಗಿ ಹೆಚ್ಚಿನ ಬೀದಿ ದೀಪಗಳು ಉರಿಯುವುದಿಲ್ಲ.

ಇದು ಕೇವಲ ಇಲ್ಲಿಯ ಸಮಸ್ಯೆಯಲ್ಲ. ಮಳೆ ಗಾಳಿ ಬಂದರೆ ಸಾಕು ನಗರದ ಕೊಟ್ಟಾರ ಕ್ರಾಸ್‌, ಲಾಲ್‌ಬಾಗ್‌, ಬಿಜೈ, ಉರ್ವಸ್ಟೋರ್‌, ಎಂ.ಜಿ. ರೋಡ್‌ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿನ ಬೀದಿ ದೀಪಗಳು ಕೆಟ್ಟು ಹೋಗುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಅನೇಕ ಮಂದಿ ಅಳಲು ತೋಡಿಕೊಂಡಿದ್ದು, ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಎನ್ನುವುದು ಸಾರ್ವಜನಿಕರ ಬೇಡಿಕೆ.

Advertisement

ಸಮಸ್ಯೆ ಬಗೆಹರಿಸುತ್ತೇವೆ
ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ವಿದ್ಯುತ್‌ ಕೇಬಲ್‌ನ ಸಮಸ್ಯೆ ಇದೆ. ಇದೇ ಕಾರಣಕ್ಕೆ ಕೆಲವು ಕಡೆ ಬೀದಿ ದೀಪಗಳು ಉರಿಯುವುದಿಲ್ಲ. ಕೆಲವು ಸಮಯದಲ್ಲಿ ಮೆಸ್ಕಾಂ ವಿಭಾಗ ದುರಸ್ತಿ ಮಾಡದ ಕಾರಣದಿಂದಲೂ ಈ ಸಮಸ್ಯೆ ಉದ್ಭವಿಸುತ್ತಿದೆ. ಸದ್ಯದಲ್ಲೇ ಸಮಸ್ಯೆ ಬಗೆಹರಿಯಲಿದೆ.
– ಮಹಮ್ಮದ್‌ ನಜೀರ್‌, ಮಹಾನಗರ ಪಾಲಿಕೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next