Advertisement
ನೆರೆರಾಷ್ಟ್ರಗಳಲ್ಲಿರುವ ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರೀಯ ಏಕಾಭಿಪ್ರಾಯ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಪ್ರಯತ್ನ ವಿಫಲವಾಗಿದೆ. ಇದೀಗ ಈ ಮಸೂದೆಯನ್ನು ಸರಕಾರ ಬದಿಗೆ ಸರಿಸಬೇಕಾಗಿ ಬಂದಿರುವುದು ನಿಜಕ್ಕೂ ದುರಂತವೇ ಸರಿ.
Related Articles
Advertisement
ಯಾರು ಹಿಂದೂ ನಿರಾಶ್ರಿತರು; ಯಾರು ಮುಸ್ಲಿಂ ನಿರಾಶ್ರಿತರು?ಇಲ್ಲಿ ಒತ್ತಿ ಹೇಳಬೇಕಾದ ಮಾತೊಂದಿದೆ. ಈ ಮಸೂದೆ ಮುಖ್ಯವಾಗಿ ಬಾಂಗ್ಲಾ ಒಳವಲಸಿಗರಿಗೆ ಸಂಬಂಧಿಸಿದೆ. ಪಾಕಿಸ್ಥಾನದ ಒಳವಲಸಿಗರ ಆಗಮನ ಸ್ಥಗಿತಗೊಂಡಿದೆ. ಪಾಕ್‌ನಲ್ಲೀಗ ಇರುವ ಹಿಂದೂ ಧರ್ಮೀಯರ ಸಂಖ್ಯಾ ಪ್ರಮಾಣ, ಆ ರಾಷ್ಟ್ರದ ಒಟ್ಟು ಜನಸಂಖ್ಯೆಯ ಸುಮಾರು ಶೇ. 2ರಷ್ಟು ಮಾತ್ರ. ಅಫ್ಘಾನಿಸ್ಥಾನದಲ್ಲಿದ್ದ ಹಿಂದೂಗಳ ಸಂಖ್ಯೆ ತುಂಬಾ ಕಡಿಮೆ; ಅಂದರೆ ಸುಮಾರು 50 ಸಾವಿರದಷ್ಟು. ಇವರಲ್ಲಿ ಹೆಚ್ಚಿನವರನ್ನು ತಾಲಿಬಾನ್ ಮತ್ತಿತರ ಇಸ್ಲಾಮೀ ಸಂಘಟನೆಗಳು ಹೊರಗಟ್ಟಿಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಅತಂತ್ರ ಸ್ಥಿತಿ ಇನ್ನೂ ಮುಂದುವರಿದಿದೆ. ಅಲ್ಲಿನ ಅವಾಮೀ ಲೀಗ್ ಸರಕಾರ ನಮ್ಮೊಂದಿಗೆ ಸ್ನೇಹದಿಂದಲೇ ಇದೆಯಾದರೂ, ಅಲ್ಲಿರುವ ಹಿಂದೂಗಳ ಎತ್ತಂಗಡಿ ಅಭಿಯಾನವನ್ನು ತಡೆಯುವಲ್ಲಿ ಸರಕಾರ ವಿಫಲವಾಗಿದೆ. ಬಾಂಗ್ಲಾದಲ್ಲೀಗ ಇರುವ ಹಿಂದೂಗಳ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ. 10ರಷ್ಟು. 1941ರ ಜನಗಣತಿಯ ಹೊತ್ತಿಗೆ ಈ ಪ್ರಮಾಣ ಶೇ. 24ರಷ್ಟಿತ್ತು. ಹಾಗೇ ನೋಡಿದರೆ ಭೂತಪೂರ್ವ ಪೂರ್ವ ಬಂಗಾಲದಲ್ಲಿದ್ದ ಹಿಂದೂಗಳು ಸಿರಿವಂತ ಕುಳಗಳಾಗಿದ್ದರು; ಅಲ್ಲಿನ ಹೆಚ್ಚಿನ ಕೃಷಿಭೂಮಿ ಅವರ ಕೈಯಲ್ಲೇ ಇತ್ತು; ಅವರಲ್ಲಿ ಹಲವರು ಕೈಗಾರಿಕೆ, ವಾಣಿಜ್ಯೋದ್ಯಮ ಹಾಗೂ ಇತರ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದರು. ಕವಿ ರವೀಂದ್ರನಾಥ ಟ್ಯಾಗೋರ್ ಹಾಗೂ ಅವರ ಕುಟುಂಬದವರು ಪೂರ್ವ ಬಂಗಾಲದ ಆಡ್ಯ ಹಿಂದೂ ಜಮೀನಾªರರಾಗಿದ್ದರು. ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ಅತಂತ್ರ ಸ್ಥಿತಿಯನ್ನು ಈಗ ಗಡೀಪಾರಾಗಿರುವ ಲೇಖಕಿ ತಸ್ಲಿಮಾ ನಝರೀನ್ ತಮ್ಮ “ಲಜ್ಜಾ’ ಎಂಬ ಇಂಗ್ಲಿಷ್ ಕಾದಂಬರಿಯಲ್ಲಿ ಆಶ್ಚರ್ಯಾಘಾತಕರ ರೀತಿಯಲ್ಲಿ ದಾಖಲಿಸಿದ್ದಾರೆ. ಭಾರತದಲ್ಲಿರುವ ನಮಗೆ ಆ ದೇಶದಲ್ಲಿ ಎಷ್ಟು ಮಂದಿ ಭಾರತೀಯರು ಮಂತ್ರಿಗಳಾಗಿ ಇಲ್ಲವೆ ಉನ್ನತ ಹುದ್ದೆಗಳ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆನ್ನುವುದನ್ನು ಅರಿಯಲು ಯಾವುದೇ ತೆರನ ಆಸಕ್ತಿಯಿಲ್ಲ! ಕಳೆದ ವರ್ಷವಷ್ಟೇ ಅಲ್ಲಿನ ಪ್ರಪ್ರಥಮ ಹಿಂದೂ ಧರ್ಮೀಯ ಮುಖ್ಯ ನ್ಯಾಯಾಧೀಶ ಸುರೇಂದ್ರ ಕುಮಾರ್ ಸಿನ್ಹಾ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು. ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಯಿತು. ಮುಖ್ಯ ನ್ಯಾಯಾಧೀಶರಿಗೇ ಇಂಥ “ಉಪಚಾರ’ ದೊರೆಯಿತೆಂದಾದರೆ ಇನ್ನು ಆ ದೇಶದಲ್ಲಿರುವ ಇವರ ಸಾಮಾನ್ಯ ಹಿಂದೂಗಳ ಪಾಡೇನು? ಹಿಂದೂಗಳ ಒಡೆತನದಲ್ಲಿದ್ದ ಅತಿ ಮುಖ್ಯ ಆಸ್ತಿಪಾಸ್ತಿಗಳನ್ನು ಸ್ಥಳೀಯ ಶ್ರೀಮಂತ ಕುಳಗಳು ದೋಚಿಯಾಗಿದೆ; ಕೆಲವರ ಆಸ್ತಿಗಳನ್ನು “ಶತ್ರುಗಳ ಆಸ್ತಿ”ಯೆಂದೇ ಪರಿಗಣಿಸಲಾಗುತ್ತಿದೆ. ಬಾಂಗ್ಲಾದ ಈ ನತದೃಷ್ಟರು ಭಾರತಕ್ಕಲ್ಲದೆ ಇನ್ನೆಲ್ಲಿಗೆ ಹೋಗಬೇಕು? ಹಾಗೆಂದೇ ಇಂಥ ಪೌರತ್ವ ಮಸೂದೆಯೊಂದು ತೀರಾ ಅಗತ್ಯವಾಗಿದೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಮುಂದಾಗುವ ಮೂಲಕ ಬಿಜೆಪಿ ಕೇವಲ ತನ್ನ ಚುನಾವಣಾ ಕಾಲದ ಭರವಸೆಗಳ ಪೈಕಿ ಒಂದನ್ನು ಅನುಷ್ಠಾನಗೊಳಿಸಲು ಮುಂದಾಗಿತ್ತಷ್ಟೆ. ಮಸೂದೆಗೆ ವಿರೋಧ ಪ್ರಕಟವಾಗಲು ಕಾರಣ, ಜಾತ್ಯತೀತತೆ ಕುರಿತ ತಪ್ಪು ವ್ಯಾಖ್ಯಾನ! ಹಾಗೇ ನೋಡಿದರೆ ಬಾಂಗ್ಲಾದ ಮುಸ್ಲಿಮರು ಕೂಡ ಭಾರತದ ಆಸರೆ ಬಯಸಿ ತಾಯ್ನೆಲದಿಂದ ಕಾಲೆ¤ಗೆಯುತ್ತಿದ್ದಾರೆ. ಅವರ ವಲಸೆಯ ಕಾರಣ ಬೇರೆ. ಹಿಂದೂಗಳು ಅಲ್ಲಿನವರ ಕಿರುಕುಳ ಹಾಗೂ ಹಿಂಸೆ ತಾಳದೆ ಅಲ್ಲಿಂದ ಕಾಲೆ¤ಗೆಯುತ್ತಿದ್ದಾರಾದರೆ, ಬಾಂಗ್ಲಾ ಮುಸ್ಲಿಮರು ಭಾರತದಲ್ಲಿ ದೊರೆಯುವ “ಸುವರ್ಣಾವಕಾಶ ವಲಯ’ದ ಮೇಲಿನ ಆಸೆಯಿಂದ ಭಾರತವನ್ನು ಪ್ರವೇಶಿಸಲು ಹಾತೊರೆಯುವವರು. ಪೌರತ್ವ ಮಸೂದೆಯನ್ನು ವಿರೋಧಿಸುವವರು ಈ ವ್ಯತ್ಯಾಸವನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಉದಾಹರಣೆಗೆ ಕರ್ನಾಟಕದಲ್ಲಿಯೂ ಬಾಂಗ್ಲಾಮೂಲದ ಕಾನೂನುಬಾಹಿರ ನಿರಾಶ್ರಿತರಿದ್ದಾರೆ. ಇಂಥವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರೆಂಬಂಥ ವರದಿಗಳನ್ನು ಆಗಾಗ ನೋಡುತ್ತಿರುತ್ತೇವೆ. ಅವರನ್ನು ಅವರ ತಾಯ್ನಾಡಿಗೆ ಕಳುಹಿಸಿಕೊಟ್ಟ ಬಗೆಗಿನ ವರದಿಗಳು ನಮ್ಮ ಕಣ್ಣಿಗೆ ಬೀಳುತ್ತಿಲ್ಲ. ಜನಸಂಘದ ಹುಟ್ಟಿಗೆ ಕಾರಣ
ಪಾಕಿಸ್ಥಾನ ತನ್ನಲ್ಲಿನ ಅಲ್ಪಸಂಖ್ಯಾಕ ಹಿಂದುಗಳಿಗೆ ಅವರ ಮೂಲಭೂತ ಹಕ್ಕುಗಳ ಬಗ್ಗೆ ಭರವಸೆ ನೀಡಲು ವಿಫಲವಾದ ಕಾರಣದಿಂದಲೇ ಡಾ| ಶ್ಯಾಮ ಪ್ರಸಾದ್ ಮುಖರ್ಜಿ 1951ರ ಅಕ್ಟೋಬರ್‌ನಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದ್ದು ಎಂಬ ಐತಿಹಾಸಿಕ ಸತ್ಯವನ್ನು ಇಲ್ಲಿ ಗಮನಿಸಬೇಕು. ಅಂದಿನ ಜನಸಂಘವೇ ಇಂದಿನ ಬಿಜೆಪಿ. ಉಭಯ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳನ್ನು ಖಾತರಿ ಪಡಿಸುವ ಉದ್ದೇಶದ “ನೆಹರೂ – ಲಿಯಾಖತ್ ಅಲಿಖಾನ್ ಒಪ್ಪಂದ’ (1951)ವನ್ನು ವಿರೋಧಿಸಿ ಮುಖರ್ಜಿಯವರು ನೆಹರೂ ಸಂಪುಟದಿಂದ ಹೊರನಡೆದರು. ಪಾಕಿಸ್ಥಾನದಿಂದ ಹಿಂದುಗಳು ಪ್ರವಾಹೋಪಾದಿಯಲ್ಲಿ ಭಾರತದತ್ತ ವಲಸೆ ಬಂದುದಕ್ಕೆ ಪಾಕಿಸ್ಥಾನವೇ ಕಾರಣ; ಅದನ್ನು ನೆಹರೂ ಅವರು ಅಪರಾಧಿಯೆಂದು ಪರಿಗಣಿಸಬೇಕಿತ್ತೆನ್ನುವುದು ಮುಖರ್ಜಿಯವರ ಬಯಕೆಯಾಗಿತ್ತು. ಅಲ್ಲದೆ ಪೂರ್ವ ಪಾಕಿಸ್ಥಾನ (ಇಂದಿನ ಬಾಂಗ್ಲಾ ದೇಶ)ದಲ್ಲಿ ಉಳಿದು ಬಿಟ್ಟಿದ್ದ ಹಿಂದೂಗಳ ಗತಿ-ಸ್ಥಿತಿಯ ಮೇಲೆ ಗಮನಹರಿಸುವ ಕಷ್ಟವನ್ನು ನೆಹರೂ ತೆಗೆದುಕೊಳ್ಳಲಿಲ್ಲವೆನ್ನುವುದು ಮುಖರ್ಜಿಯವರ ಇನ್ನೊಂದು ಆಕ್ಷೇಪವಾಗಿತ್ತು. ಪೂರ್ವ ಪಾಕಿಸ್ಥಾನದಿಂದ ಬಂದಿದ್ದ ನಿರಾಶ್ರಿತರಿಗೆ (ಹಿಂದು, ಮುಸ್ಲಿಂ ಮತ್ತಿತರರಿಗೆ) ಪುನರ್ವಸತಿ ಕಲ್ಪಿಸಲೆಂದು 1958ರಲ್ಲಿ ನೆಹರೂ ಸರಕಾರ “ದಂಡಕಾರಣ್ಯ ಯೋಜನೆ”ಯನ್ನು ಆರಂಭಿಸಿತೆನ್ನುವುದನ್ನು ದೇಶ ಇಂದು ಮರೆತು ಬಿಟ್ಟಿದೆ. ಈ ನಿರಾಶ್ರಿತರಿಗೆ ಅವಿಭಜಿತ ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶಗಳ ಅರಣ್ಯ ವಲಯಗಳಲ್ಲಿ ಪುನರ್ವಸತಿ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಅಸ್ಸಾಂ, ಪಶ್ಚಿಮ ಬಂಗಾಲ ಹಾಗೂ ತ್ರಿಪುರಾ ರಾಜ್ಯಗಳ ಮೇಲೆ ಬೀಳುತ್ತಿದ್ದ ನಿರಾಶ್ರಿತರ ಒತ್ತಡವನ್ನು ತಗ್ಗಿಸುವುದೂ ಇದರ ಹಿಂದಿನ ಆಶಯವಾಗಿತ್ತು. ಹೀಗೆ ಇಂದು ಬದಿಗೆ ಸರಿಸಲಾಗುತ್ತಿರುವ (ಸರಕಾರ ಅನಿವಾರ್ಯವಾಗಿ ಕೈ ಬಿಟ್ಟಿರುವ ) ಪೌರತ್ವ ತಿದ್ದುಪಡಿ ಮಸೂದೆಗೆ ಸುದೀರ್ಘ ಇತಿಹಾಸವಿದೆ. ಈ ಮಸೂದೆಯನ್ನು ಇನ್ನೊಂದು ದೃಷ್ಟಿಯಿಂದಲೂ ನೋಡಬೇಕಾಗಿದೆ. ಮಸೂದೆಯನ್ನು ವಿರೋಧಿಸುತ್ತಿರುವವರು ಹೇಳುವ ಪ್ರಕಾರ, ಇದು ಈಗ ನಡೆಯುತ್ತಿರುವ ರಾಷ್ಟ್ರೀಯ ನಾಗರಿಕ (ಪೌರ) ದಾಖಲಾತಿ ಕಾರ್ಯದ ಮೇಲೆ ವಿರುದ್ಧ ಪರಿಣಾಮವನ್ನು ಬೀರುತ್ತದೆ. ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳ ಸಂದರ್ಭದಲ್ಲಿ ಈ ದಾಖಲೆ ಸಂಗ್ರಹಣ ಪ್ರಕ್ರಿಯೆ (ಎನ್‌ಆರ್‌ಸಿ) 1971ರ ಮಾರ್ಚ್‌ನಿಂದ ಈ ವರೆಗೆ ಕಾನೂನುಬಾಹಿರವಾಗಿ ಭಾರತವನ್ನು ಪ್ರವೇಶಿಸುತ್ತ ಬಂದಿರುವ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಮಾಡಲಿದೆ. ಎನ್‌ಆರ್‌ಸಿಯಡಿಯಲ್ಲಿ ಅಕ್ರಮ ಹಿಂದೂ ನಿರಾಶ್ರಿತ, ಅಕ್ರಮ ಮುಸ್ಲಿಂ ನಿರಾಶ್ರಿತರೆನ್ನುವಂಥ ಭೇದವನ್ನು ಮಾಡಲಾಗುವುದಿಲ್ಲ. ಮಸೂದೆಯ ಟೀಕಾಕಾರರ ಈ ವಾದದಲ್ಲಿ ಹುರುಳಿದೆ. ಅಸ್ಸಾಮಿನಲ್ಲಿ ಈ ನಿರಾಶ್ರಿತರು ಆರು ದಿಗ½ಂಧನ ಶಿಬಿರಗಳಲ್ಲಿ ಇರಿಸಲ್ಪಟ್ಟಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವಿದೆ. ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಸ್ವೀಕರಿಸಲು ಪ.ಬಂಗಾಲದ ಆಳುವ ಪಕ್ಷವಾದ ತೃಣಮೂಲ ಕಾಂಗ್ರೆಸ್, ಅಲ್ಲಿನ ಕಾಂಗ್ರೆಸ್ ಹಾಗೂ ವಾಮಪಕ್ಷಗಳು ತುದಿಗಾಲಲ್ಲಿ ನಿಂತಿರುವುದು ರಾಜಕೀಯ ಲಾಭದ ದೃಷ್ಟಿಯಿಂದಷ್ಟೇ. ಅಕ್ರಮ ವಲಸಿಗರು ಈ ಪಕ್ಷಗಳ ಪಾಲಿಗೆ ಅಕ್ಷರಶಃ ವೋಟ್ ಬ್ಯಾಂಕ್‌ಗಳು! ಬಾಂಗ್ಲಾದೇಶಕ್ಕೆ ತಾಗಿಕೊಂಡಿರುವ ಪಶ್ಚಿಮ ಬಂಗಾಲದ ಜಿಲ್ಲೆಗಳಲ್ಲಿರುವ ಮುಸ್ಲಿಮ್ ಒಳವಲಸಿಗರ ಸಂಖ್ಯೆ, ಸ್ಥಳೀಯ ನಿವಾಸಿಗಳ ಸಂಖ್ಯೆಗಿಂತ ಅಧಿಕವಾಗಿದೆ. ಅಕ್ರಮ ಒಳ ವಲಸಿಗರು ಈಚಿನ ವರ್ಷಗಳಲ್ಲಿ ರಾಜಕೀಯ ಬೆಂಬಲ ದಕ್ಕಿಸಿ ಕೊಂಡು ಎಷ್ಟೊಂದು ಬಲಿಷ್ಠರಾಗಿದ್ದಾರೆಂದರೆ ಮಾಲ್ಡಾದಂಥ ಜಿಲ್ಲೆಗಳಲ್ಲಿ ತಮಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ನಾಶ ಮಾಡುವ ಉದ್ದೇಶದಿಂದ ಅಲ್ಲಿನ ಪೊಲೀಸ್ ಠಾಣೆಗಳನ್ನು ಹಾಗೂ ಸರಕಾರಿ ಕಚೇರಿಗಳನ್ನು ಸುಟ್ಟು ಹಾಕಿದ್ದಾರೆ. “ಅಕ್ರಮ ವಲಸಿಗರನ್ನು ಪಶ್ಚಿಮ ಬಂಗಾಲದಿಂದ ಓಡಿಸಿಯೇ ಸಿದ್ಧ’ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರಷ್ಟೆ? ಅವರ ಈ ಹೇಳಿಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಸಿಟ್ಟಿಗೆಬ್ಬಿಸಿದೆ. ಆಕೆಯಂಥ ರಾಜಕಾರಣಿಗಳಿಗೆ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡುವುದು ಬೇಕಿಲ್ಲವೆ, ಎಂದು ಅಚ್ಚರಿಪಡುವಂತಾಗಿದೆ.