Advertisement

ಕರ್ಣನಿಗೆ ಹೆಗಲು ಕೊಟ್ಟ ಚಿತ್ರರಂಗ

11:40 AM Nov 27, 2018 | Team Udayavani |

ಬೆಂಗಳೂರು: ಕನ್ನಡ ಚಲನಚಿತ್ರ ಜಗತ್ತಿನ ಅನೇಕ ಕಲಾವಿದರ “ಸಿನಿ ಪಯಣ’ದ ಯಶಸ್ಸಿಗೆ ಕರ್ಣನಂತೆ ಸಾಥ್‌ ನೀಡಿದ್ದ ಅಂಬರೀಶ್‌ ಅವರ “ಬಾಳ ಪಯಣ’ದ ಅಂತಿಮ ಯಾತ್ರೆಗೆ ಹಲವು ನಟರು, ಕಲಾವಿದರ ಹೆಗಲು ಕೊಟ್ಟಿದ್ದು ವಿಶೇಷವಾಗಿತ್ತು!

Advertisement

ಇಹಲೋಕ ತೊರೆದ ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ ಪಾರ್ಥಿವ ಶರೀರದ ಮೆರವಣಿಗೆ ಸೋಮವಾರ ನಗರದಲ್ಲಿ ನಡೆಯಿತು. ಕಂಠೀರವ ಕ್ರೀಡಾಂಗಣದಿಂದ ಮೊದಲ್ಗೊಂಡು, ಕಂಠೀರವ ಸ್ಟುಡಿಯೋ, ಮೆರವಣಿಗೆ ಸಾಗಿಬಂದ ರಸ್ತೆಯುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.

ಚಿತ್ರರಂಗದ ಪ್ರಮುಖರು ಪಾರ್ಥಿವ ಶರೀರ ಹೊತ್ತ ವಾಹನದ ಹಿಂದೆಯೇ ಅಂತಿಮ ಯಾತ್ರೆಯುದ್ದಕ್ಕೂ ಸಾಗಿ ಬಂದರು. ಶನಿವಾರ ರಾತ್ರಿ ಅಂಬರೀಶ್‌ ಅವರು ವಿಧಿವಶರಾದ ಕ್ಷಣದಿಂದ ಸೋಮವಾರ ಸಂಜೆ ಅಗ್ನಿಸ್ಪರ್ಶದವರೆಗೂ ಅವರ ಕುಟುಂಬದ ಜತೆಗೆ ಪಾರ್ಥಿವ ಶರೀರದ ಬಳಿಯೇ ಇದ್ದ ಸಿನಿಮಾ ರಂಗದ ಹಿರಿಯ, ಕಿರಿಯ ಕಲಾವಿದರು ಅಂತಿಮ ನಮನ ಸಲ್ಲಿಸಿದರು.

ಸರ್ಕಾರ ವತಿಯಿಂದ ಪಾರ್ಥಿವ ಶರೀರವನ್ನು ಕುಟುಂಬದವರಿಗೆ ವರ್ಗಾಯಿಸುತ್ತಿದ್ದಂತೆ ನಟರಾದ ದರ್ಶನ್‌, ಯಶ್‌, ಶಿವರಾಜ ಕುಮಾರ್‌, ಗಣೇಶ್‌, “ನೆನಪಿರಲಿ’ ಪ್ರೇಮ್‌, ನಿರ್ದೇಶಕ ಎಸ್‌.ನಾರಾಯಣ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮೊದಲಾದವರು ಪಾರ್ಥಿವ ಶರೀರದ ಸಮೀಪವೇ ಇದ್ದು, ಅಗ್ನಿ ಸ್ಪರ್ಶ ಮಾಡುವ ಸ್ಥಳದವರೆಗೆ ಹೆಗಲು ಕೊಟ್ಟು ಸಾಗಿದರು. ಕಲಿಯುಗ ಕರ್ಣನ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶವಾಗುತ್ತಿದ್ದಂತೆ ಎಲ್ಲರೂ ಕಂಬನಿ ಮಿಡಿದರು.

ಮೈಸೂರು ಪೇಟದೊಂದಿಗೆ ದಹನ: ಅಂಬರೀಶ್‌ ಅವರ ತಲೆಗೆ ಮೈಸೂರು ಪೇಟವನ್ನು ಭಾನುವಾರ ಬೆಳಗ್ಗೆ ಇರಿಸಲಾಗಿತ್ತು. ಕಂಠೀರವ ಕ್ರೀಡಾಂಗಣ ಮತ್ತು ಮಂಡ್ಯದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನ ಸಂದರ್ಭದಲ್ಲೂ ಅದೇ ಪೇಟ ಇತ್ತು. ಅಂತಿಮ ಯಾತ್ರೆ ಮುಗಿಸಿ, ಚಿತೆಯ ಮೇಲೆ ಪಾರ್ಥಿವ ಶರೀರವನ್ನು ಇರಿಸುವಾಗಲು ಪೇಟ ತೆಗೆದಿರಲಿಲ್ಲ. ಅಗ್ನಿಸ್ಪರ್ಶ ಮಾಡಿದಾಗ ಪೇಟವೂ ದೇಹದೊಂದಿಗೆ ಉರಿದು ಲೀನವಾಯಿತು.

Advertisement

ಗಣ್ಯರ ನಮನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ, ಎಸ್‌.ಎಂ.ಕೃಷ್ಣ, ಕೇಂದ್ರದ ಮಾಜಿ ಸಚಿವ ಸುಶೀಲ್‌ ಕುಮಾರ್‌ ಸಿಂಧೆ, ಸಚಿವರಾದ ಡಿ.ಕೆ.ಶಿವಕುಮಾರ್‌, ಎಚ್‌.ಡಿ.ರೇವಣ್ಣ, ಡಾ.ಜಯಮಾಲ ಸಹಿತವಾಗಿ ಹಲವು ಸಚಿವರು, ಶಾಸಕರು ಚಿತೆಗೆ ಕಟ್ಟಿಗೆ ಇಟ್ಟು ಭಾವಪೂರ್ಣ ನಮನ ಸಲ್ಲಿಸಿದರು. ಹಿರಿಯ, ಕಿರಿಯ ನಟ, ನಟಿಯರು, ನಿರ್ದೇಶಕ, ನಿರ್ಮಾಪಕರು ಮತ್ತು ಕುಟುಂಬ ವರ್ಗದವರು ಚಿತೆಗೆ ಕಟ್ಟಿಗೆ ಇಟ್ಟು ಕಂಬನಿ ಮಿಡಿದರು.

ಕುಸಿದ ಸುಮಲತಾ: ಅಂತ್ಯಕ್ರಿಯೆ ಆರಂಭವಾಗುವುದಕ್ಕೆ ಮುನ್ನ ಅಂಬರೀಶ್‌ ಪತ್ನಿ ಸುಮಲತಾ ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಅಲ್ಲೇ ಇದ್ದ ಸಚಿವ ಡಿ.ಕೆ.ಶಿವಕುಮಾರ್‌ ಕೂಡಲೇ ಮೈಕ್‌ನಲ್ಲಿ, ಯಾರಾದರೂ ವೈದ್ಯರು ಇದ್ದರೆ ಬನ್ನಿ ಅಥವಾ ಆ್ಯಂಬುಲೆನ್ಸ್‌ ತನ್ನಿ ಎಂದು ಸಂದೇಶ ನೀಡಿದರು. ಕುಟುಂಬದ ವೈದ್ಯರು ಕೂಡಲೇ ಸ್ಥಳಕ್ಕೆ ಆಗಮಿಸಿ, ಪ್ರಥಮ ಚಿಕಿತ್ಸೆ ನೀಡಿದರು.

ಸುಮಲತಾ ಅವರಿಗೆ ನೀರು ಕುಡಿಸಿದ ಕೆಲವೇ ನಿಮಿಷಗಳಲ್ಲಿ ಚೇತರಿಸಿಕೊಂಡರು. ನಂತರ ಅವರು ಅಂತ್ಯಕ್ರಿಯೆ ಮುಗಿಯುವವರೆಗೂ ಪುತ್ರನ ಜೊತೆಯಲ್ಲೇ ಇದ್ದರು. ಇದೇ ಸಂದರ್ಭದಲ್ಲಿ ಸುಮಲತಾ ಜತೆಗಿದ್ದ ಕುಟುಂಬದ ಸದಸ್ಯೆಯೊಬ್ಬರು ಹಾಗೂ ವ್ಯಕ್ತಿಯೊಬ್ಬರು ಕೂಡ ಸುಸ್ತಾಗಿ ಕುಸಿದರು. ಇಬ್ಬರನ್ನು ತಪಾಸಣೆ ಮಾಡಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿದರು.

ಅಚ್ಚುಕಟ್ಟಾದ ವ್ಯವಸ್ಥೆ: ಕಂಠೀರವ ಸ್ಟುಡಿಯೋ ಸಂಪೂರ್ಣ ಶೋಕದ ಮಡುವಿನಲ್ಲಿತ್ತು. ಅಭಿಮಾನಿಗಳು ಮತ್ತು ಗಣ್ಯರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಪೊಲೀಸರು ಹಾಗೂ ಜಿಲ್ಲಾಡಳಿತ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಸ್ಟುಡಿಯೋ ಆವರಣದಲ್ಲಿ ಗಣ್ಯರಿಗಾಗಿ 300 ಆಸನ ಹಾಗೂ ಸಾರ್ವಜನಿಕರಿಗೆ 2,000 ಆಸನಗಳನ್ನು ಇರಿಸಲಾಗಿತ್ತು.

ಗಣ್ಯರ ಆಸನಗಳಲ್ಲಿ ರಾಜಕಾರಣಿಗಳು ಹಾಗೂ ಚಿತ್ರರಂಗದವರು ಆಸೀನರಾಗಿದ್ದರು. ಬಹುತೇಕರಿಗೆ ಕುಳಿತುಕೊಳ್ಳಲು ಆಸನ ಸಿಗಲಿಲ್ಲ. ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಮಾಡಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಕುರ್ಚಿಗಳು ಸಾಕಾಗಲಿಲ್ಲ. ಅಂತ್ಯಸಂಸ್ಕಾರ ನೋಡಲು ಕುರ್ಚಿಗಳ ಮೇಲೇರಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಅಂಬರೀಶ್‌ ಅಂತಿಮ ಯಾತ್ರೆ ಟೈಮ್‌ಲೈನ್‌ ಟೈಮ್‌ಲೈನ್‌
ಬೆಳಗ್ಗೆ 11.30:
ಪಾರ್ಥಿವ ಶರೀರ ಹೊತ್ತ ಹೆಲಿಕಾಪ್ಟರ್‌ ಎಚ್‌ಎಎಲ್‌ ವಿಮಾನನಿಲ್ದಾಣ ಆಗಮನ
ಬೆಳಗ್ಗೆ 11.52: ಕಂಠೀರವ ಕ್ರೀಡಾಂಗಣಕ್ಕೆ ಪಾರ್ಥಿವ ಶರೀರ ರವಾನೆ
ಮಧ್ಯಾಹ್ನ 12.02: ಕ್ರೀಡಾಂಗಣಕ್ಕೆ ಬಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
ಮಧ್ಯಾಹ್ನ 12.30: ಅಂತಿಮ ಯಾತ್ರೆ ಆರಂಭ
ಮಧ್ಯಾಹ್ನ 12.47: ಹಡ್ಸನ್‌ ವೃತ್ತ ತಲುಪಿದ ಮೆರವಣಿಗೆ
ಮಧ್ಯಾಹ್ನ 12.59: ಮೈಸೂರು ಬ್ಯಾಂಕ್‌ ವೃತ್ತ
ಮಧ್ಯಾಹ್ನ 01.06: ಬಸವೇಶ್ವರ ವೃತ್ತ
ಮಧ್ಯಾಹ್ನ 1.38: ಕಾವೇರಿ ಚಿತ್ರಮಂದಿರ
ಮಧ್ಯಾಹ್ನ 1.55: ಸ್ಯಾಂಕಿ ಕೆರೆ ತಲುಪಿದ ಯಾತ್ರೆ
ಮಧ್ಯಾಹ್ನ 2.13: ಸರ್ಕಲ್‌ ಮಾರಮ್ಮ ದೇವಸ್ಥಾನ
ಮಧ್ಯಾಹ್ನ 2.33: ಯಶವಂತಪುರ
ಮಧ್ಯಾಹ್ನ 2.44: ಗೋವರ್ಧನ್‌ ಚಿತ್ರಮಂದಿರ
ಮಧ್ಯಾಹ್ನ 3.00: ಗೊರಗುಂಟೆ ಪಾಳ್ಯ 
ಸಂಜೆ 4.02: ಕಂಠೀರವ ಸ್ಟುಡಿಯೋ ತಲುಪಿದ ಯಾತ್ರೆ
ಸಂಜೆ 4.15: ಅಂತ್ಯಸಂಸ್ಕಾರ ಕ್ರಿಯಾ ವಿಧಾನ ಆರಂಭ
ಸಂಜೆ 4.56: ಮೂರು ಸುತ್ತು ಕುಶಾಲು ತೋಪು ಸಿಡಿಸಿ ಸರ್ಕಾರಿ ಗೌರವ
ಸಂಜೆ 5.07: ಅಂಬರೀಶ್‌ ಕುಟುಂಬಕ್ಕೆ ರಾಷ್ಟ್ರಧ್ವಜ ಹಸ್ತಾಂತರ
ಸಂಜೆ 5.56: ಪಾರ್ಥಿಕ ಶರೀರಕ್ಕೆ ಅಗ್ನಿಸ್ಪರ್ಶ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next