ಒಬ್ಬ ಹುಡುಗ ಸಾಧನೆ ಮಾಡಲು ಹೋಗುವಾಗ ಅವನಿಗೆ ಉತ್ತೇಜನ ಕೊಡುವ ಬದಲು ಈ ಸಮಾಜ ಅವನನ್ನು ನಿಂದನೆ ಮಾಡೋದೆ ಹೆಚ್ಚು. ಆಡಿಕೊಳ್ಳುವ ಜನರು ಕಡೆಗಣಿಸಿದರೂ ಕೊನೆಗೂ ತಾನು ಅಂದುಕೊಂಡಿದ್ದನ್ನು ಸಾಧಿಸುವ ಹೊತ್ತಿಗೆ ಆ ಹುಡುಗ ಎಲ್ಲವನ್ನು ಕಳೆದುಕೊಂಡಿರುತ್ತಾನೆ. ಎಷ್ಟೋ ವೇಳೆ ದುಡಿಮೆ ಮಾಡೋರಿಕೆ ಸಿಗೋ ಬೆಲೆ ಸಾಧನೆ ಮಾಡೋರಿಗೆ ಸಿಗೋದಿಲ್ಲ. ಆದ್ರೆ ಸಾಧನೆ ಮಾಡಿದ ಮೇಲೆ ಸಿಗೋ ಬೆಲೆ ಸತ್ತರೂ ಕಮ್ಮಿ ಆಗೊಲ್ಲ.
ಸಾಧನೆ ಮಾಡೋ ಮುಂಚೆ ಈ ಸಮಾಜ ಆಡೋ ಮಾತಿಂದ ನಾವು ಏನೆಲ್ಲಾ ಕಳೆದುಕೊಳ್ಳುತ್ತೇವೆ. ಸಾಧಕರ ಹಿಂದಿನ ಕಥೆ-ವ್ಯಥೆ ಏನು ಅನ್ನೋದನ್ನು ಇಲ್ಲೊಂದು ತಂಡ ಚಿತ್ರದ ಮೂಲಕ ತೆರೆಮೇಲೆ ಹೇಳಲು ಹೊರಟಿದೆ. ಅಂದಹಾಗೆ ಸಾಧಕನ ನೋವು-ನಲಿವಿನ ಕಥೆಯನ್ನು ಹೇಳುತ್ತಿರುವ ಚಿತ್ರದ ಹೆಸರು “ನಾನು ನನ್ ಜಾನು’. ಈಗಾಗಲೇ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ನಾನು ನನ್ ಜಾನು’ ತೆರೆಗೆ ಬರೋದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇತ್ತೀಚೆಗೆ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಇದೇ ತಿಂಗಳಾಂತ್ಯಕ್ಕೆ ಅದ್ಧೂರಿಯಾಗಿ ತನ್ನ ಹಾಡುಗಳನ್ನು ಹೊರತರುವ ಪ್ಲಾನ್ ಹಾಕಿಕೊಂಡಿದೆ. ಚಿತ್ರದ ಕಥಾಹಂದರ ಬಗ್ಗೆ ಮಾತನಾಡುವ ಚಿತ್ರತಂಡ, “ಒಂದೊಳ್ಳೆ ಕಥೆಯನ್ನು ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎನ್ನುವ ಭರವಸೆಯ ಮಾತುಗಳನ್ನಾಡುತ್ತದೆ.
ಇನ್ನು ಚಿತ್ರದ ಟೈಟಲ್‌ಗೆ “ಬದುಕೇ ಚೆಂದ ಇನ್ನು’ ಅಂಥ ಅಡಿಬರಹವಿದ್ದು, ಚಿತ್ರದಲ್ಲಿ ಒಂದು ನವಿರಾದ ಪ್ರೇಮಕಥೆ ಜೊತೆ ತಿಳಿ ಹಾಸ್ಯ, ಒಂದಷ್ಟು ಎಮೋಶನ್, ಆ್ಯಕ್ಷನ್ಸ್ ಹೀಗೆ ಮನರಂಜನೆಗೆ ಬೇಕಾದ ಎಲ್ಲಾ ಅಂಶಗಳೂ ಇದೆ. ನೋಡುಗರಿಗೆ ಅವರ ಹಳೆಯ ಲವ್ ಸ್ಟೋರಿ ನೆನಪಿಗೆ ಬರುತ್ತದೆ’ ಎನ್ನುವುದು ಚಿತ್ರತಂಡದ ಮಾತು. ಈ ಹಿಂದೆ ಹಲವು ನಿರ್ದೇಶಕರ ಬಳಿ ಕೆಲಸ ಮಾಡಿ ನಿರ್ದೇಶನ ವಿಭಾಗದಲ್ಲಿ ಒಂದಷ್ಟು ಅನುಭವ ಪಡೆದುಕೊಂಡಿರುವ ಶ್ರೀಹರಿ “ನಾನು ನನ್ ಜಾನು’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.
ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದ ಏಳು ಹಾಡುಗಳಿಗೆ ಶ್ರೀಧರ್ ಕಶ್ಯಪ್ ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆ “ಕ’, “ಮೋಜೋ’ ಚಿತ್ರಗಳಲ್ಲಿ ನಟಿಸಿದ್ದ ಮನು ಈ ಚಿತ್ರದಲ್ಲಿ ಒಂದು ಶೇಡ್‌ನಲ್ಲಿ ಬೇಜಾವಾಬ್ದಾರಿ ಹುಡುಗನಾಗಿ, ಮತ್ತೂಂದು ಶೇಡ್‌ನಲ್ಲಿ ಜವಾಬ್ದಾರಿ ವ್ಯಕ್ತಿಯಾಗಿ ಎರಡು ಶೇಡ್‌ಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕುಟುಂಬದ ಸಲುವಾಗಿ ಯಾವುದೇ ತ್ಯಾಗಕ್ಕೂ ಸಿದ್ದಳಾದ ಹುಡುಗಿಯಾಗಿ ನಾಯಕಿಯ ಪಾತ್ರದಲ್ಲಿ ರುತ್ವಿಕಾ ಶೆಟ್ಟಿ ಅಭಿನಯಿಸಿದ್ದಾರೆ.
ಇವರೊಂದಿಗೆ ಕಿರುತೆರೆಯ “ಮಜಾ ಭಾರತ’ ಕಾರ್ಯಕ್ರಮದ ಕಲಾವಿದರು ಮತ್ತು ಕಥೆಗೆ ಮಹತ್ವದ ತಿರುವು ಕೊಡುವ ಪಾತ್ರದಲ್ಲಿ ಸೃಜನ್ ಲೋಕೇಶ್ ಕೂಡ ಅಭಿನಯಿಸಿದ್ದಾರೆ. “ನಾನು ನನ್ ಜಾನು’ ಚಿತ್ರಕ್ಕೆ ಆನಂದ್ ಇಳಯರಾಜ-ಮಾರ ವರ್ಮನ್ ಛಾಯಾಗ್ರಹಂ, ವಿಶ್ವ.ಎಂ.ಎನ್ ಸಂಕಲನವಿದೆ. ಬಿಲ್ಡರ್ ಕೆಂಪೆಗೌಡ. ಎನ್, ಕಾಸ್ಮೋಟಿಕ್ಸ್ ಶಾಪ್ ಮಾಲೀಕ ಹರೀಶ್.ಪಿ, ದತ್ರಿ ಮಂಜು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಇದೇ ವರ್ಷಾಂತ್ಯಕ್ಕೆ “ನಾನು ನನ್ ಜಾನು’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.