Advertisement
ಪ್ರತಿಷ್ಠಿತ ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವ ದಿಲ್ಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಆಳುವವರ ಪಾಲಿಗೆ ಎಂದಿಗೂ “ಸಮಸ್ಯೆಯ ಮಗುವಾಗಿ’ ಉಳಿದಿದೆ. 1981ರಲ್ಲಿ ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಈ ವಿವಿಯಲ್ಲಿ ನಡೆದ ಭಾರೀ ಹಿಂಸಾಚಾರದ ಕಾರಣ ಅದನ್ನು 45 ದಿನಗಳ ಕಾಲ ಮುಚ್ಚಿದ್ದರು.
Related Articles
Advertisement
ಒಂದು ವೇಳೆ ದಿಲ್ಲಿ ಪೊಲೀಸರು ಜೆಎನ್‌ಯು ಒಳಗೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಲಾಠಿ ಬೀಸಿದ್ದರೆ ಆ ಪ್ರಕರಣ ಇಷ್ಟು ಗಂಭೀರವಾಗುತ್ತಿರಲಿಲ್ಲ. ಏಕೆಂದರೆ ಅಂತಿಮವಾಗಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಪೊಲೀಸರ ಕೆಲಸ. ಅದಾಗ್ಯೂ ಸಂಬಂಧಪಟ್ಟವರ ಅನುಮತಿಯಿಲ್ಲದೆ ವಿವಿ ಕ್ಯಾಂಪಸ್‌ನೊಳಗೆ ನುಗ್ಗುವ ಅಧಿಕಾರ ಪೊಲೀಸರಿಗೂ ಇಲ್ಲ.
ಕೆಲವೇ ಮಂದಿಯಿಂದ ರಾಜಕೀಯಜೆಎನ್ಯು ಅಥವಾ ಇನ್ಯಾವುದೇ ವಿವಿಗೆ ಸೇರುವ ಹೆಚ್ಚಿನ ವಿದ್ಯಾರ್ಥಿಗಳಿಗೆ ರಾಜಕಿಯದಲ್ಲಿ ವಿಶೇಷವಾದ ಆಸಕ್ತಿಯಿರುವುದಿಲ್ಲ. ವಿದ್ಯಾರ್ಥಿಗಳು ಕಾಲೇಜು ಅಥವಾ ವಿವಿಗಳಿಗೆ ಸೇರುವುದು ಕಲಿಯಲೆಂದೇ ಹೊರತು ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಲು ಅಥವಾ ಕಲ್ಲು ತೂರಾಟ ಮಾಡಲು ಅಲ್ಲ. ಸಾಮಾನ್ಯವಾಗಿ ಪ್ರಾಯಮೀರಿದ ಬಳಿಕವೂ ವಿವಿಯನ್ನು ವಾಸಸ್ಥಾನವಾಗಿ ಮಾಡಿಕೊಂಡಿರುವ, ಕಲಿಯುವುದರಲ್ಲಿ ಆಸಕ್ತಿಯಿಲ್ಲದ ಕೆಲವೇ ವಿದ್ಯಾರ್ಥಿಗಳು ವಿದ್ಯಾರ್ಥಿ ನಾಯಕರಾಗಿ ಹೊರಹೊಮ್ಮುತ್ತಾರೆ.1950ರಲ್ಲಿ ಬನಾರಸ್ ವಿವಿ ಹಾಸ್ಟೆಲ್‌ಗಳಲ್ಲಿ ಖಾಯಂ ಮೊಕ್ಕಾ ಹೂಡಿದ್ದ ವಿದ್ಯಾರ್ಥಿ ಗೂಂಡಾಗಳಿಂದಾಗಿ ಕುಖ್ಯಾತವಾಗಿತ್ತು. ಕರ್ನಾಟಕದ ವಿಚಾರಕ್ಕೆ ಬರುವುದಾದರೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರು 1970ರಲ್ಲಿ ಹಿಂದಿ ವಿರೋಧಿ ಮತ್ತು ಎಕ್ಸ್‌ಪೋ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿ ನಾಯಕರೊಬ್ಬರನ್ನು ತನ್ನ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರನ್ನಾಗಿ ಮಾಡಿಕೊಂಡಿದ್ದರು. ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರಕಾರ ಎಂದೂ ತರಗತಿಗೆ ಹಾಜರಾಗದ ಕೆಲವು ವಿದ್ಯಾರ್ಥಿಗಳನ್ನು ಮತ್ತು ಬೋಧಿಸುವುದೊಂದನ್ನು ಬಿಟ್ಟು ಉಳಿದೆಲ್ಲ ಕೆಲಸಗಳನ್ನು ಮಾಡುತ್ತಿದ್ದ ಕೆಲವು ಉಪನ್ಯಾಸಕರನ್ನು ಜಪಾನ್‌ನಲ್ಲಿ ನಡೆದ ಔದ್ಯೋಗಿಕ ಮೇಳಕ್ಕೆ ಕಳುಹಿಸಿದ್ದು ಎಕ್ಸ್‌ಪೋ ಹೋರಾಟಕ್ಕೆ ಹೇತುವಾಗಿತ್ತು. ಆ ಮಾಜಿ ಸಚಿವ ಈಗ ರಾಜಕೀಯವಾಗಿ ಮೂಲೆಗುಂಪಾಗಿದ್ದಾರೆ. ಜೆಎನ್‌ಯುನಲ್ಲಿ ನಡೆದ ಗೂಂಡಾಗಿರಿಯನ್ನು ಖಂಡಿಸುತ್ತಲೇ ರಾಜಕೀಯ ಸಂಪರ್ಕಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರೇ ಈ ಸಮಸ್ಯೆಗಳನ್ನೆಲ್ಲ ಮೈಮೇಲೆ ಎಳೆದುಕೊಂಡದ್ದು ಎಂದು ಹೇಳಬೇಕಾಗುತ್ತದೆ.ಇವರಲ್ಲೂ ಎಡಪಂಥೀಯ ಒಲವು ಹೊಂದಿರುವವರು ಹೆಚ್ಚು ದೂಷಣೆಗೆ ಅರ್ಹರು. ಜೆಎನ್‌ಯು ಕ್ಯಾಂಪಸ್‌ನಲ್ಲಿ ಹಿಂಸಾಚಾರ ಹೊಸದಲ್ಲ. ಜೆಎನ್‌ಯು ವ್ಯವಹಾರಗಳನ್ನು 2016ರಲ್ಲಿ ಇಲ್ಲಿನ ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ದೇಶದ್ರೋಹದ ಪ್ರಕರಣಗಳ ದೃಷ್ಟಿಕೋನದಿಂದಲೇ ವ್ಯಾಖ್ಯಾನಿಸುವವರು ವಿವಿ ಆಡಳಿತ ಸದಾ ಒಂದು ವರ್ಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಂದ ಸಮಸ್ಯೆಗಳನ್ನು ನಿರೀಕ್ಷಿಸುತ್ತಾ ಇರುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 1972ರಲ್ಲಿ ಎಡಪಂಥೀಯ ವಿಚಾರಧಾರೆಯತ್ತ ಒಲವು ಬೆಳೆಸಿಕೊಂಡಿದ್ದ ಹಿಂದಿಯ ಜನಪ್ರಿಯ ಚಿತ್ರನಟ ಬಲರಾಜ್ ಸಾಹಿ° ಘಟಿಕೋತ್ಸವದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದು ಭಾರೀ ವಿವಾದಕ್ಕೊಳಗಾಗಿತ್ತು. ಅಂದಿನಿಂದ ಈ ವಿವಿಯಲ್ಲಿ ಘಟಿಕೋತ್ಸವ ನಡೆಯಲಿಲ್ಲ. ಅದು ಮರಳಿ ಶುರುವಾದದ್ದು 2018ರಲ್ಲಿ. ಪ್ರೊ| ಸೋಂಧಿಗೆ ನೀಡಿದ ಕಿರುಕುಳ
ಜೆಎನ್‌ಯುನ ಸಮಾಜ ವಿಜ್ಞಾನ ವಿಭಾಗದ ಎಡಪಂಥೀಯ ಉಪನ್ಯಾಸಕರ ದಬ್ಟಾಳಿಕೆ ಎಷ್ಟಿದೆ ಎಂದು ತಿಳಿಯಲು ಈ ಒಂದು ಘಟನೆ ಸಾಕು. ಭಾರತೀಯ ವಿದೇಶಾಂಗ ಸೇವೆಗಳ ಅಧಿಕಾರಿಯಾಗಿದ್ದ ಅನಂತರ ರಾಜಕಾರಣಿ ಮತ್ತು ಉಪನ್ಯಾಸಕರಾದ ದಿ.ಮನೋಹರ್ ಲಾಲ್ ಸೋಂಧಿ (ಪ್ರೊ| ಎಂ.ಎಲ್.ಸೋಂಧಿ) ಜೆಎನ್‌ಯುಗೆ ಉಪನ್ಯಾಸಕರಾಗಿ ಸೇರಿದ್ದರು. ಐಎಎಸ್ ಸೇರಿ ಹಲವು ಪರೀಕ್ಷೆಗಳಲ್ಲಿ ಅವರು ಉನ್ನತ ಸ್ಥಾನಗಳನ್ನು ಪಡೆದಿದ್ದರು. ದೇಶದ ವಿದೇಶಾಂಗ ನೀತಿಯ ಬಗ್ಗೆ ಭ್ರಮೆನಿರಸನಗೊಂಡು ಅವರು ಐಎಫ್ಎಸ್ ಸೇವೆಗೆ ರಾಜೀನಾಮೆ ನೀಡಿದ್ದರು. 1967ರಲ್ಲಿ ಜನಸಂಘದ ಟಿಕೇಟಿನಲ್ಲಿ ಅವರು ದಿಲ್ಲಿಯಿಂದ ಲೋಕಸಭೆಗೆ ಚುನಾಯಿತರಾಗಿದ್ದರು. 1967-71ರ ಸಂಸತ್ತಿನಲ್ಲಿ ಅವರು ಶ್ರೇಷ್ಠ ಸಂಸದೀಯ ಪಟುವಾಗಿದ್ದರು. 1970ರಲ್ಲಿ ಜೆಎನ್‌ಯುನ ಅಂತಾರಾಷ್ಟ್ರೀಯ ಸಂಬಂಧಗಳು ವಿಭಾಗಕ್ಕೆ ಉಪನ್ಯಾಸಕರಾಗಿ ಸೇರಿದ ಬಳಿಕ ಅವರು ಅನುಭವಿಸಿದ ಕಿರುಕುಳ ಅಷ್ಟಿಷ್ಟಲ್ಲ. ಕೆಲವು ಉಪನ್ಯಾಸಕರು, ಆಡಳಿತಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಅವರನ್ನು ತಮ್ಮ ಶತ್ರುವಿನಂತೆ ಕಾಣುತ್ತಿದ್ದರು. ಬಿಜೆಪಿಯ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಏಕಾಂಗಿಯಾಗಿಸಿದ್ದರು. ಅವರಿಗೆ ಬಡ್ತಿ ನಿರಾಕರಿಸಲಾಗಿತ್ತು ಕೆಲವು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಕ್ರಿಯ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಕ್ಕೆ ಬೆದರಿಕೆಯನ್ನೂ ಒಡ್ಡಲಾಗಿತ್ತು.ಬಿಜೆಪಿಯ ಈಗಿನ ಪೀಳಿಗೆಯ ನಾಯಕರಿಗೆ ಸೋಂಧಿ ಯಾರೆಂದು ತಿಳಿದಿರಲಿಕ್ಕಿಲ್ಲ. ನಮ್ಮ ವಿದೇಶಾಂಗ ನೀತಿಯಲ್ಲಿ ಆಗಿರುವ ಅನೇಕ ಬದಲಾವಣೆಗಳಿಗೆ ಸೋಂಧಿ ಮೂಲಕಾರಣಕರ್ತರು. ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅವರನ್ನು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಕೌನ್ಸಿಲ್‌ನ ಅಧ್ಯಕ್ಷರನ್ನಾಗಿ ನೇಮಿಸಿತ್ತು. ತಥಾಕಥಿತ ಟುಕ್ಡೆ ಟುಕ್ಡೆ ಗ್ಯಾಂಗ್ ಬಹಳ ಸಮಯದಿಂದ ಜೆಎನ್‌ಯುನಲ್ಲಿ ಸಕ್ರಿಯವಾಗಿದೆ. ಮೋದಿ ಸರಕಾರ ಪ್ರತಿರೋಧವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ 1975ರಲ್ಲಿ ಇಂದಿರಾ ಗಾಂಧಿ ಮತ್ತು ಅವರ ದ್ವಿತೀಯ ಪುತ್ರ ಸಂಜಯ್ ಗಾಂಧಿ ತುರ್ತು ಪರಿಸ್ಥಿತಿ ಹೇರಿಕೆಯನ್ನು ಪ್ರತಿಭಟಿಸಿದ ಅನೇಕ ಜೆಎನ್‌ಯು ವಿದ್ಯಾರ್ಥಿಗಳನ್ನು ಬಂಧಿಸಿದ ವಿಚಾರ ಗೊತ್ತಿರಲಿಕ್ಕಿಲ್ಲ. ಕಳೆದೆರಡು ದಶಕಗಳಿಂದ ಜೆಎನ್‌ಯು ಅನಪೇಕ್ಷಿತ ಕಾರಣಗಳಿಂದಾಗಿಯೇ ಸುದ್ದಿಯಲ್ಲಿದೆ. ಕೆಲವು ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕಾರ್ಗಿಲ್ ಯುದ್ಧ ಮಾಡಿದ್ದಕ್ಕೆ ವಾಜಪೇಯಿಯವರನ್ನು ಖಂಡಿಸಿ ಪಾಕಿಸ್ಥಾನ ಪರವಾಗಿ ಘೋಷಣೆ ಕೂಗಿದ್ದರು! ಇಂಥ ಘೋಷಾ ವಾಕ್ಯಗಳನ್ನು ವಿರೋಧಿಸಿದ್ದ ಸೇನೆಯ ಅಧಿಕಾರಿಗಳ ಮೇಲೆ ಕಾರ್ಯಕ್ರಮವೊಂದರಲ್ಲಿ ಜೆಎನ್‌ಯು ವಿದ್ಯಾರ್ಥಿಗಳು ಏರಿ ಹೋಗಿದ್ದರು. ಜೆಎನ್‌ಯು, ಜಾಧವಪುರ ವಿವಿ ಮತ್ತಿತರ ವಿವಿಗಳ ಈ ಸಮಸ್ಯೆಗೆ ದೂರಗಾಮಿ ಪರಿಹಾರವೆಂದರೆ ಸರಕಾರ ಅಥವಾ ಯುಜಿಸಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ ಶಿಕ್ಷಕರು ಮತ್ತು ಉಪನ್ಯಾಸಕರು ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ನಿಷೇಧಿಸುವುದು. ಕೆಲವರು ಕಾಲಕಾಲಕ್ಕೆ ಬಡ್ತಿಗಳನ್ನು ಪಡೆದುಕೊಳ್ಳುತ್ತಾರೆ, ಕೈತುಂಬ ಸಂಬಳ ಎಣಿಸುತ್ತಾರೆ. ಆದರೆ ಸಂಶೋಧನಾ ಕೆಲಸಗಳನ್ನು ಮಾತ್ರ ಮಾಡುವುದಿಲ್ಲ. ಸರಕಾರಿ ನೌಕರರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿರುವಾಗ ಉಪನ್ಯಾಸಕರಿಗೇಕೆ ಈ ಅವಕಾಶ ನೀಡಲಾಗಿದೆ. ವಿದ್ಯಾರ್ಥಿ ಸಂಘಟನೆಗಳನ್ನು ರಾಜಕೀಯದಿಂದ ಬೇರ್ಪಡಿಸಬೇಕೆಂದು ಹೇಳಿರುವ ಜೆ.ಎಂ.ಲಿಗೊª ವರದಿಯನ್ನು ಅನುಷ್ಠಾನಿಸಬೇಕು. ಲಿಂಗೊ ಮಾಜಿ ಮುಖ್ಯ ಚುನಾವಣಾ ಆಯುಕ್ತರು. – ಅರಕೆರೆ ಜಯರಾಮ್