ಮಹಾನಗರ: ಕಾಲುಗಳು ಸ್ವಾಧೀನ ಕಳೆದುಕೊಂಡದ್ದಲ್ಲದೆ, ಮಾನಸಿಕ ಅಸ್ವಸ್ಥಳಾಗಿ ಏಳು ವರ್ಷದಿಂದ ಹಾಸಿಗೆ ಹಿಡಿದಿರುವ ಪತ್ನಿ. ಸೂಕ್ತ ಚಿಕಿತ್ಸೆ ಕೊಡಿಸಲು ಬಡತನ ಅಡ್ಡಿಯಾದರೂ ಪ್ರೀತಿಯನ್ನು ಕಡಿಮೆ ಮಾಡದೇ ಪುಟ್ಟ ಮಗುವನ್ನು ಆರೈಕೆ ಮಾಡಿದಂತೆ ನೋಡಿಕೊಳ್ಳುತ್ತಿರುವ ಪತಿ.
ಆಸ್ಪತ್ರೆ ಖರ್ಚಿಗಾಗಿ ದಿಲ್ಲಿಯವರೆಗೂ ಮೊರೆ ಇಟ್ಟರೂ ಪ್ರಯೋಜನವಾಗಲಿಲ್ಲ. ಆದರೂ ಭರವಸೆಯನ್ನು ಕಳೆದುಕೊಂಡಿಲ್ಲ. ಪತ್ನಿಯನ್ನು ಉಳಿಸಿಕೊಳ್ಳುವ ಸಲುವಾಗಿ ನೆರವು ಕೋರಿ ಊರೂರು ಅಲೆಯುತ್ತಿದ್ದಾರೆ ಗದಗದ ಕಾಶೀನಾಥರು.
ನಗರದ ಉದಯವಾಣಿ ಕಚೇರಿಯಲ್ಲಿ ತಮ್ಮ ಕಷ್ಟವನ್ನು ಹೇಳಿಕೊಂಡ ಕಾಶೀನಾಥರ ಪತ್ನಿ ಗಂಗೂಬಾಯಿಗೆ 56 ವರ್ಷ. ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡು ಏಳು ವರ್ಷದಿಂದ ಮಲಗಿಯೇ ದಿನ ದೂಡುತ್ತಿದ್ದಾರೆ. ಕಾಶೀನಾಥರ ವಯಸ್ಸೂ 65. ಇಳಿವಯಸ್ಸಿನಲ್ಲಿ ಶಾಂತಿ-ನೆಮ್ಮದಿಯ ಬದುಕನ್ನು ಅನುಭವಿಸಬೇಕಿದ್ದ ಕಾಶೀನಾಥ ಚಿತ್ರಗಾರರಿಗೆ ಈಗ ಹಣ ಹೊಂದಿಸುವ ಚಿಂತೆ. ಆಸ್ಪತ್ರೆಯ ವೈದ್ಯರ ಪ್ರಕಾರ ಪತ್ನಿ ಎಂದಿನಂತೆ ನಡೆದಾಡಲು ಸಾಧ್ಯವಾಗಬೇಕಾದರೆ ಕನಿಷ್ಠ 4-5 ಲಕ್ಷ ರೂ. ಚಿಕಿತ್ಸೆಗೆ ಬೇಕು.
ದಿನದೂಟಕ್ಕೂ ಕಷ್ಟ ಪಡುತ್ತಿರುವ ಬಡಗಿ ವೃತ್ತಿ ನಿರ್ವಹಿಸುತ್ತಿರುವ ಕಾಶಿನಾಥರಿಗೆ ಇಷ್ಟೊಂದು ಹಣ ಹೊಂದಿಸುವುದು ಕಷ್ಟ. ಇದರೊಂದಿಗೆ ಪತ್ನಿ ಮಾನಸಿಕವಾಗಿ ನೊಂದು ಸ್ಥಿಮಿತ ಕಳೆದುಕೊಂಡಿರುವುದು ಕಷ್ಟದ ತೀವ್ರತೆಯನ್ನು ಹೆಚ್ಚಿಸಿದೆ. ‘ಇಹಲೋಕದ ಪರಿವೆ ಇಲ್ಲದೇ ಕೂಗಾಡುವುದು, ಅಸ್ಪಷ್ಟ ಧ್ವನಿ ಹೊರಡಿಸುವುದನ್ನೆಲ್ಲ ಮಾಡುತ್ತಿರುತ್ತಾರೆ. ಪತ್ನಿಯ ಈ ಪರಿಸ್ಥಿತಿಯನ್ನು ಕಣ್ಣಾರೆ ನೋಡುತ್ತಾ ಅಸಹಾಯಕನಾಗಿ ದಿನದೂಡುವಂತಾಗಿದೆ’ ಎಂದು ಕಣ್ಣೀರಿಡುತ್ತಾರೆ ಕಾಶೀನಾಥರು.
‘ಈಗಾಗಲೇ ಔಷಧಕ್ಕಾಗಿ ಸಾವಿರಾರು ರೂ. ಖರ್ಚಾಗಿದೆ. ನನ್ನ ಬಳಿ ಜಮೀನು, ಆಸ್ತಿ ಇಲ್ಲ. ಮೂವರು ಗಂಡು ಮಕ್ಕಳಲ್ಲಿ ಇಬ್ಬರಿಗೆ ಮದುವೆಯಾಗಿದ್ದು, ಕೊನೆಯ ಪುತ್ರ ಟಿಸಿಎಚ್ ಮಾಡಿದರೂ ನೌಕರಿ ಸಿಕ್ಕಿಲ್ಲ. ಮಕ್ಕಳು ಸಣ್ಣ ಪುಟ್ಟ ಕೆಲಸ ನಿರ್ವಹಿಸುತ್ತಿದ್ದು, ಅವರ ಖರ್ಚಿಗೇ ಕಷ್ಟ. ಮುಖ್ಯಮಂತ್ರಿ ಪರಿಹಾರ ನಿಧಿ ಕೋರಿ ಅರ್ಜಿ ಸಲ್ಲಿಸಿ ನಾಲ್ಕೈದು ತಿಂಗಳಾಯಿತು. ಆದರೆ ಇದುವರೆಗೆ ನೆರವು ದೊರಕಿಲ್ಲ’ ಎನ್ನುತ್ತಾರೆ ಅವರು.
ಇವರಿಗೆ ಸಹಾಯ ಮಾಡುವವರು
ಕಾಶಿನಾಥ ಗಣಪತರಾವ್ ಚಿತ್ರಗಾರ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಖಾತೆ ಸಂಖ್ಯೆ: 17194029499, ಐಎಫ್‌ಎಸ್‌ಸಿ ಕೋಡ್: kvgb0006311ಗೆ ನೆರವು ಹಣ ಜಮೆ ಮಾಡಬಹುದು.
ನೆರವಿನ ಮೊರೆಗೆ 50 ಸಾವಿರ ರೂ. ಖರ್ಚು!
ಪತ್ನಿಯ ಚಿಕಿತ್ಸೆಗೆ ನೆರವು ಕೋರಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಥಳೀಯ ಶಾಸಕರೂ ಸೇರಿದಂತೆ ವಿವಿಧ ಮುಖಂಡರಿಗೆ ಮನವಿ ನೀಡಿದ್ದಾರೆ.ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಅನಿವಾರ್ಯವಾಗಿ ಸಾರ್ವಜನಿಕರ ಮೊರೆ ಹೋಗಿದ್ದಾರೆ ಕಾಶೀನಾಥರು. ಸುಮಾರು ಆರು ತಿಂಗಳಿನಿಂದ ಹುಬ್ಬಳ್ಳಿ, ಗದಗ, ಮಂಗಳೂರು ಹೀಗೆ ಊರೂರು ಅಲೆಯುತ್ತಿದ್ದಾರೆ. ತಾವು ಗಳಿಸಿದ ಹಣದಲ್ಲೇ 50 ಸಾವಿರ ರೂ. ಗಳನ್ನು ಈ ಓಡಾಟಕ್ಕೆ, ಮನವಿ ಸಲ್ಲಿಕೆಗೆ ವೆಚ್ಚ ಮಾಡಿದ್ದಾರೆ.
ಸಾರ್ವಜನಿಕರೇ ನೆರವು ನೀಡಿ
ನನ್ನ ಪತ್ನಿ ಮೊದಲಿನಂತಾಗಬೇಕು ಸರಕಾರ ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ನಮ್ಮಂಥ ಬಡವರಿಗೆ ಸಿಗುತ್ತಿಲ್ಲ. ಜನಪ್ರತಿನಿಧಿಗಳಲ್ಲಿ ಕಷ್ಟ ಹೇಳಿಕೊಂಡರೂ ಉಪಯೋಗವಾಗಿಲ್ಲ. ಸಾರ್ವಜನಿಕರಾದರೂ ಸಹಕರಿಸಿದರೆ ನನ್ನ ಪತ್ನಿ ಮತ್ತೆ ಮೊದಲಿನಂತಾಗಬಹುದು ಎಂಬ ಆಸೆಯಿದೆ.
–
ಕಾಶಿನಾಥ, ಚಿತ್ರಗಾರ,
ಗಂಗೂಬಾಯಿ ಅವರ ಪತಿ