ಹಾವೇರಿ: ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಸಭೆ-ಸಮಾರಂಭಗಳಿಗೆ ಶಿಷ್ಟಾಚಾರ ಪಾಲಿಸಬೇಕು. ಶಿಷ್ಟಾಚಾರ ಉಲ್ಲಂಘನೆಯಾದರೆ ಆಯಾ ಇಲಾಖಾ ಮುಖ್ಯಸ್ಥರೇ ಹೊಣೆಯಾಗಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಎನ್.ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸರ್ಕಾರದ ಸಭೆ ಸಮಾರಂಭಗಳ ಆಯೋಜನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಇಲಾಖೆಯ ಸಭೆ-ಸಮಾರಂಭಗಳನ್ನು ಆಯೋಜಿಸುವ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿಸಿದ ಸಚಿವರು, ಶಾಸಕರೊಂದಿಗೆ ಸಮಾಲೋಚಿಸಿ ಕಾರ್ಯಕ್ರಮ ನಿಗಪಡಿಸಬೇಕು. ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಮುನ್ನ ಕನಿಷ್ಟ ಏಳು ದಿವಸ ಸಮಯಾವಕಾಶಗಳನ್ನು ಪಡೆಯಬೇಕು. ಇಲಾಖೆ ಮುಖ್ಯಸ್ಥರೇ ಶಿಷ್ಟಾಚಾರದ ಮಾರ್ಗಸೂಚಿ ಅನುಸಾರ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಬೇಕು. ಸಂಬಂಧಿಸಿದ ಜನಪ್ರತಿನಿಧಿ ಗಳಿಗೆ ಕಾರ್ಯಕ್ರಮದ ಮುಂಚಿತವಾಗಿ ನೀಡಬೇಕು. ತರಾತುರಿ ಒತ್ತಡದಲ್ಲಿ ನಿಗತ ಕಾಲಾವಕಾಶವಿಲ್ಲದೆ ಶಿಷ್ಟಾಚಾರದಲ್ಲಿ ಒಳಪಡುವ ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡದೇ ಕಾರ್ಯಕ್ರಮ ನಿಗದಿಪಡಿಸಬಾರದು ಎಂದು ತಿಳಿಸಿದರು.
ಯಾವುದೇ ಸರ್ಕಾರಿ ಸಭೆ ಅಥವಾ ಕಾರ್ಯಕ್ರಮವನ್ನು ಖಾಸಗಿ ನಿವಾಸದಲ್ಲಿ ಆಯೋಜಿಸುವಂತಿಲ್ಲ. ಆಯಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಯಾ ಕ್ಷೇತ್ರದ ಶಾಸಕರೇ ವಹಿಸಬೇಕು. ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆ ಮುದ್ರಿಸುವ ಏಳು ದಿವಸಗಳ ಮುನ್ನ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳ ಅನುಮೋದನೆ ಪಡೆಯಬೇಕು. ವೇದಿಕೆ ಮೇಲೆ ಆನಸ ವ್ಯವಸ್ಥೆ ಮಾಡುವಾಗ ಮಾರ್ಗಸೂಚಿ ಅನುಸಾರವೇ ಆಸನ ವ್ಯವಸ್ಥೆ ಮಾಡಬೇಕು. ಶೀಲಾನ್ಯಾಸ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದ ಅದೇ ಆದ್ಯತೆಯಲ್ಲಿ ಮುದ್ರಿಸಬೇಕು ಎಂದು ಸೂಚಿಸಿದರು.
ಯಾವುದೇ ಸರ್ಕಾರಿ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಸರ್ಕಾರಿ ಅಧಿಕಾರಿಗಳು ಮಾಡುವಂತಿಲ್ಲ. ಅನಿವಾರ್ಯ ಸಂದರ್ಭ ಎದುರಾದಾಗ ಆಮಂತ್ರಿಸಿದ ಜನಪ್ರತಿನಿಧಿ ಗಳು ಭಾಗವಹಿಸದೇ ಇದ್ದಾಗ ಮಾತ್ರ ಅಭಿವೃದ್ಧಿ ಕಾಮಗಾರಿ ಹೊರತಾಗಿ ಜಯಂತಿ, ಉತ್ಸವ, ಅರಿವಿನ ಕಾರ್ಯಕ್ರಮಗಳನ್ನು ಮಾತ್ರ ಉದ್ಘಾಟಿಸಬಹುದು. ವಿರೋಧಪಕ್ಷದ ನಾಯಕರಿಗೂ ಸಹ ಅಧಿಕಾರಿಗಳ ಸಭೆ ಕರೆಯಲು ಅವಕಾಶವಿರುವುದಿಲ್ಲ. ಆದರೆ, ಅಗತ್ಯ ಮಾಹಿತಿಯನ್ನು ಕೇಳಿದಾಗ ಸೂಕ್ತವಾಗಿ ನೀಡಬಹುದು. ಸರ್ಕಾರಿ ಆದೇಶಗಳಲ್ಲಿ ಶಾಸಕರು, ಖಾಸಗಿ ಪ್ರಮುಖರ ಅಧ್ಯಕ್ಷತೆಯಲ್ಲಿ ಹಲವು ಸಮಿತಿಗಳನ್ನು ನೇಮಕ ಮಾಡಲಾಗಿದೆ. ಆಯಾ ಸಮಿತಿಯ ಕಾರ್ಯವ್ಯಾಪ್ತಿಗೆ ಒಳಪಟ್ಟು ಸಮೀಕ್ಷಣಾ ಸಭೆಗಳನ್ನು ನಡೆಸಬಹುದು ಎಂದು ತಿಳಿಸುತ್ತ ಸರ್ಕಾರದ ಸಭೆ-ಸಮಾರಂಭಗಳ ಆಯೋಜನೆಯ ಶಿಷ್ಟಚಾರದ ಮಾಹಿತಿಯನ್ನು ವಿವರವಾಗಿ ತಿಳಿಸಿದರು.
ಆಯಾ ಇಲಾಖಾ ಸಚಿವರುಗಳು ಜಿಲ್ಲೆಗೆ ಭೇಟಿ ನೀಡಿದಾಗ ಆಯಾ ಇಲಾಖಾ ಅಧಿಕಾರಿಗಳೇ ಶಿಷ್ಟಾಚಾರದ ಪ್ರಕಾರ ಆತಿಥ್ಯವನ್ನು ವಹಿಸಿಕೊಳ್ಳಬೇಕು. ಕೇವಲ ಕಂದಾಯ ಇಲಾಖೆಗೆ ಮಾತ್ರ ಶಿಷ್ಟಚಾರಪಾಲನೆ ಜವಾಬ್ದಾರಿ ಎಂಬ ಮನೋಭಾವ ಬೇಡ ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದ್ದರು.