ಹೊಸಪೇಟೆ: ಕಳೆದ ಒಂದು ತಿಂಗಳಿಂದ ಕಾಕುಬಾಳು ಸುತ್ತಮುತ್ತಲಿನ ಗ್ರಾಮಸ್ಥರನ್ನು ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬುಧವಾರ ಬೆಳಗಿನ ಜಾವ ಬೋನಿಗೆ ಬಿದ್ದಿದ್ದು, ಇದರ ಬೆನ್ನಲೇ ಮತ್ತೂಂದು ಚಿರತೆ ಪ್ರತ್ಯಕ್ಷವಾಗಿದೆ.
ಹತ್ತಾರು ಕುರಿ, ದನ-ಕರು, ನಾಯಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ, ತಾಲೂಕಿನ ಧರ್ಮಸಾಗರ-ಕಾಕುಬಾಳು ಗ್ರಾಮದ ಮಾರ್ಗ ಮಧ್ಯೆ ಅರಣ್ಯ ಇಲಾಖೆ ಅಧಿಕಾರಿಗಳು ಗುಬ್ಬಿಗುಡ್ಡದ ಬಳಿ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಕಳೆದ ಒಂದು ತಿಂಗಳಿಂದ ಗ್ರಾಮದಲ್ಲಿ ಆಗಾಗ ಪ್ರತ್ಯಕ್ಷ ಹಾಗೂ ಜಾನುವಾರುಗಳ ಮೇಲಿನ ಚಿರತೆ ದಾಳಿಗೆ ಬೇಸತ್ತ ಗ್ರಾಮಸ್ಥರು, ಅರಣ್ಯ ಇಲಾಖೆ ಮೊರೆ ಹೋಗಿದ್ದರು. ಕಂಪ್ಲಿ ತಾಲೂಕಿನ ದೇವಲಾಪುರ, ಸೋಮಲಾಪುರ ಸೇರಿದಂತೆ ಇತರೆ ಗ್ರಾಮಗಳ ಜನ-ಜಾನುವಾರಗಳ ಮೇಲೆ ಚಿರತೆ ದಾಳಿ ನಡೆಸಿದ ಹಿನ್ನ್ನೆಲೆಯಲ್ಲಿ ಕಾರ್ಯಪ್ರವತ್ತರಾಗಿರುವ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮದಲ್ಲಿ ಬೋನ್ ಇಟ್ಟಿದ್ದರು. ಇದೀಗ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
e ಕಾಕುಬಾಳು ಗ್ರಾಮದಲ್ಲಿ ಇಂದು ಬೆಳಗಿನ ಜಾವ ಚಿರತೆ ಸೆರೆಯಾಗಿ ಕ್ಷಣಾರ್ಧದಲ್ಲಿ ಮತ್ತೂಂದು ಚಿರತೆ ಗ್ರಾಮದ ಕುರಿಗಾಹಿಗಳಿಗೆ ಕಾಣಿಸಿಕೊಂಡಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಚಿರತೆ ನೋಡಿದ ಕುರಿಗಾಹಿ ಎರಡೋಣಿ ಈರಣ್ಣ ಮಾತನಾಡಿ, ನನಗೆ ಸೇರಿದ ಹತ್ತಕ್ಕೂ ಹೆಚ್ಚು ಕುರಿ, ಎರಡು ನಾಯಿಗಳನ್ನು ಚಿರತೆ ಕೊಂದು ಹಾಕಿವೆ. ಗ್ರಾಮದ ಸುತ್ತಮುಲಿನ ಗುಡ್ಡಗಾಡು ಪ್ರದೇಶದಲ್ಲಿ ಹತ್ತಾರು ಚಿರತೆ ಬೀಡುಬಿಟ್ಟಿವೆ. ಅವು ಕುರಿ ಮೇಲೆ ದಾಳಿ ಮಾಡಿದಂತೆ ಜನರ ಮೇಲೆ ದಾಳಿ ಮಾಡಬಹದು ಎಂಬ ಆತಂಕ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕುರಿಗಾಹಿ ಹಿತರಕ್ಷಣಾ ಸಮಿತಿ ಸಂಚಾಲಕ ಮಹೇಶ್, ಯರಿಸ್ವಾಮಿ, ಕಮಲಾಪುರ ನಾಗರಾಜ, ಕಾಕುಬಾಳು ಉಮೇಶ್ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
ಬುಧವಾರ ಬೆಳಗಿನ ಜಾವ ಕಾಕುಬಾಳು ಗ್ರಾಮದಲ್ಲಿ ಚಿರತೆ ಸೆರೆಯಾಗಿ ಕ್ಷಣಾರ್ಧದಲ್ಲಿ ಕುರಿಗಾಹಿಗಳಿಗೆ ಮತ್ತೂಂದು ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.