Advertisement

ಮೋಸಗಾರ ಹದ್ದು

09:40 AM Nov 22, 2019 | mahesh |

ವಿಶಾಲವಾದ ಕಡಲತೀರದಲ್ಲಿ ಕಾಗೆಯೊಂದು ಕಪ್ಪೆಚಿಪ್ಪಿನ ಹುಳುವೊಂದನ್ನು ಹಿಡಿದಿತ್ತು. ಅದನ್ನು ತಿನ್ನಲೆಂದು ಚಿಪ್ಪನ್ನು ತನ್ನ ಕೊಕ್ಕಿನಿಂದ ಜೋರಾಗಿ ಕುಕ್ಕುತ್ತಿತ್ತು. ಇಷ್ಟಾದರೂ ಪ್ರಯತ್ನ ಫ‌ಲಿಸಲಿಲ್ಲ. ಇದನ್ನೆಲ್ಲಾ ಗಮನಿಸಿದ ಅಲ್ಲೇ ಸಮೀಪದಲ್ಲಿಯೇ ಕುಳಿತಿದ್ದ ಹದ್ದೊಂದು ಕಾಗೆಯನ್ನು ಕುರಿತು “ಅಯ್ನಾ, ಕಾಗೆ. ಅದು ಬಲಿಷ್ಟವಾದ ಚಿಪ್ಪು. ನೀನು ಎಷ್ಟೇ ಪ್ರಯತ್ನ ಮಾಡಿದರೂ ನಿನ್ನ ಕೊಕ್ಕಿನಿಂದ ಅದನ್ನು ಒಡೆದು ಅದರೊಳಗಿರುವ ಹುಳುವನ್ನು ತಿನ್ನಲು ಸಾಧ್ಯವಿಲ್ಲ’ ಅಂತ ಬುದ್ಧಿವಾದ ಹೇಳಿತು.

Advertisement

ಹದ್ದಿನ ಮಾತನ್ನು ನಿಜವೆಂದು ಅರಿತ ಕಾಗೆ “ಹದ್ದು ಮಾಮ. ಹಾಗಾದರೆ ನಾನೀಗ ಇದನ್ನು ಒಡೆದು ಇದರೊಳಗಿರುವ ಹುಳುವನ್ನು ಹೇಗೆ ತಿನ್ನಲಿ?’ ಎಂದು ಮುಗ್ಧವಾಗಿ ಪ್ರಶ್ನಿಸಿತು. ಅದಕ್ಕೆ ಹದ್ದು “ಶಕ್ತಿಯಿಂದ ಆಗದ್ದನ್ನು ಯುಕ್ತಿಯಿಂದ ಮಾಡಬೇಕು’ ಎಂದು ಉತ್ತರಿಸಿತು. ಕಾಗೆಯು “ಅದು ಹೇಗೆ?’ ಎಂದಾಗ, ಹದ್ದು ಮುಂದುವರೆಸುತ್ತಾ “ಆ ಚಿಪ್ಪನ್ನು ಬಾಯಿಯಲ್ಲಿ ಕಚ್ಚಿಕೊಂಡು ಮೇಲಕ್ಕೆ ಹಾರು, ನಂತರ ಅದನ್ನು ನಾನು ಕುಳಿತಿರುವ ಈ ಬಂಡೆಯ ಮೇಲಕ್ಕೆ ಮೇಲಿನಿಂದ ಎತ್ತಿಹಾಕು. ಬಿದ್ದ ರಭಸಕ್ಕೆ ಚಿಪ್ಪು ಹೊಡೆದು ಹುಳು ಹೊರಬರುತ್ತದೆ. ಆಗ ಅದನ್ನು ಆರಾಮವಾಗಿ ತಿನ್ನು’ ಎಂದು ಹೇಳಿತು. ಕಾಗೆಗೂ ಹದ್ದಿನ ಉಪಾಯ ಸಮಂಜಸವೆನಿಸಿ ಅದು ಚಿಪ್ಪನ್ನು ಬಾಯಲ್ಲಿ ಕಚ್ಚಿ ಮೇಲಕ್ಕೆ ಹಾರಿ ಅದನ್ನು ಮೇಲಿನಿಂದ ಬಂಡೆಯ ಮೇಲಕ್ಕೆ ಹಾಕಿತು. ಹದ್ದು ಹೇಳಿದಂತೆಯೇ ಚಿಪ್ಪು ಒಡೆದು ಛಿದ್ರವಾಗಿ ಅದರೊಳಗಿದ್ದ ಹುಳು ಹೊರಕ್ಕೆ ಬಂದಿತು. ಇದೇ ಸಮಯಕ್ಕೆ ಹೊಂಚುಹಾಕುತ್ತಾ ಕುಳಿತಿದ್ದ ಹದ್ದು ಆ ಹುಳುವನ್ನು ಕಚ್ಚಿಕೊಂಡು ವೇಗವಾಗಿ ಹಾರಿತು. ತಾನು ಮೋಸಹೋದುದನ್ನು ತಿಳಿದ ಕಾಗೆ ಪೆಚ್ಚುಮೊರೆಹಾಕಿ ಮತ್ತೂಂದು ಕಪ್ಪೆಚಿಪ್ಪಿಗಾಗಿ ಹುಡುಕಾಡತೊಡಗಿತು.

– ಪ.ನಾ.ಹಳ್ಳಿ. ಹರೀಶ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next