Advertisement

ಕನಸುಗಳ ಬೆನ್ನತ್ತಿ … 

12:08 PM Nov 17, 2018 | Team Udayavani |

ಕನಸು ಯಾರ ಆಸ್ತಿಯಲ್ಲ, ನಮ್ಮ ಅಪ್ಪನ ಆಸ್ತಿಯೂ ಅಲ್ಲ … ಹೀಗೆ ಹೇಳುತ್ತಲೇ “ಜೀರ್ಜಿಂಬೆ’ ಚಿತ್ರ ಮಕ್ಕಳ ಬಾಲ್ಯ, ಕನಸು, ನಂಬಿಕೆ, ಆಚರಣೆ, ಮೂಢನಂಬಿಕೆ ಎಲ್ಲವನ್ನು ತೆರೆದುಕೊಳ್ಳುತ್ತಾ ಹೋಗುತ್ತದೆ. ಮೇಲ್ನೋಟಕ್ಕೆ ಚಿತ್ರ ಶಾಲಾ ಮಕ್ಕಳ ಆಟ, ಸೈಕಲ್‌ ಕನಸಿನ ಸುತ್ತ ಸುತ್ತಿದಂತೆ ಭಾಸವಾದರೂ ಅದರಾಚೆಗಿನ ಒಂದು ಲೋಕವನ್ನು ತೆರೆದಿಡುತ್ತಾ ಹೋಗುವ ಮೂಲಕ ಕಥೆಯ ಆಶಯವನ್ನು ಈಡೇರಿಸುವಲ್ಲಿ ನಿರ್ದೇಶಕರ ಯಶಸ್ವಿಯಾಗಿದ್ದಾರೆ.

Advertisement

“ಜೀರ್ಜಿಂಬೆ’ ಒಂದು ಹಳ್ಳಿಯಲ್ಲಿ ನಡೆಯುವ ಕಥೆ. ಹೈಸ್ಕೂಲ್‌ ವಿದ್ಯಾರ್ಥಿನಿಯರ ಸುತ್ತ ಸಾಗುವ ಈ ಸಿನಿಮಾದಲ್ಲಿ ಆರಂಭದಲ್ಲಿ ಶಾಲೆಯಲ್ಲಿ ಉಚಿತ ಸೈಕಲ್‌ ವಿತರಣೆ ಹಾಗೂ ಆ ನಂತರ ವಿದ್ಯಾರ್ಥಿನಿಯರ ಜಿದ್ದಾಜಿದ್ದಿ, ಗುಂಪು ರಾಜಕೀಯವನ್ನು ಬಿಂಬಿಸುತ್ತದೆ. ಜೊತೆಗೆ ವಿದ್ಯಾರ್ಥಿನಿಯೊಬ್ಬಳ ಸೈಕಲ್‌ ಪ್ರೀತಿ, ಅದನ್ನು ಕಲಿಯುವ ಬಯಕೆ, ಆಕೆ ಕಾಣುವ ಕನಸನ್ನು ಬಿಚ್ಚಿಡುತ್ತಾ ಸಾಗುವ ಸಿನಿಮಾ ಒಂದು ಹಂತಕ್ಕೆ ತೀವ್ರವಾಗುತ್ತಾ ಹೋಗುತ್ತದೆ. ಅದು ಬಾಲ್ಯವಿವಾಹ ಹಾಗೂ ಅದರ ಪರಿಣಾಮವನ್ನು ಬಿಚ್ಚಿಡುವ ಮೂಲಕ.

ಅನೇಕ ಹಳ್ಳಿಗಳಲ್ಲಿ ಸದ್ದಿಲ್ಲದೇ ನಡೆಯುತ್ತಿರುವ ಬಾಲ್ಯವಿವಾಹ ಹಾಗೂ ಅದರಿಂದ ಹೆಣ್ಣುಮಕ್ಕಳು ಮಾನಸಿಕವಾಗಿ ಕುಗ್ಗುವ ಜೊತೆಗೆ ಅವರ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳಾಗುತ್ತವೆ ಎಂಬುದನ್ನು ತೋರಿಸುತ್ತಲೇ ಬಾಲ್ಯವಿವಾಹದ ಕುರಿತಾದ ಕಾನೂನಿನ ಅರಿವು ಮೂಡಿಸುತ್ತಾ ಚಿತ್ರ ಸಾಗುತ್ತದೆ. ಹೆಣ್ಣುಮಗಳೊಬ್ಬಳು ತನ್ನ ಜೀವನದ ಪ್ರತಿ ಹಂತದಲ್ಲೂ ಎದುರಾಗುವ ಸವಾಲುಗಳನ್ನು ಎದುರಿಸಿ ಹೇಗೆ ತನ್ನ ಗುರಿ ಮುಟ್ಟುತ್ತಾಳೆ ಎಂಬುದು ಇಡೀ ಸಿನಿಮಾದ ಸಾರಾಂಶ.

ನಿರ್ದೇಶಕರು ಕಥೆಯ ಆಶಯ ಬಿಟ್ಟು ಹೋಗಿಲ್ಲ. ಹಾಗಾಗಿಯೇ ನಿಮಗೆ ಇಡೀ ಕಥೆ ಯಾವುದೋ ಪಕ್ಕದ ಹಳ್ಳಿಯಲ್ಲಿ ನಡೆದಂತೆ ಭಾಸವಾಗುತ್ತದೆ. ಆ ತರಹದ ನೈಜವಾದ ಪರಿಸರದಲ್ಲಿ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಅದಕ್ಕೆ ಪೂರಕವಾದ ಪಾತ್ರವರ್ಗ ಕಥೆಗೆ ವೇಗ ಹೆಚ್ಚಿಸಿದೆ. ಮುಖ್ಯವಾಗಿ ಈ ಸಿನಿಮಾದಲ್ಲಿ ಹಳ್ಳಿಯ ಮುಗ್ಧ ಜನರ ಮೂಢನಂಬಿಕೆ, ಅದಕ್ಕೆ ಬಲಿಯಾಗುವ ಮಕ್ಕಳು ಇವೆಲ್ಲವನ್ನು ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ.

ಯಾವುದೇ ಅಬ್ಬರವಿಲ್ಲದೇ ಸಾಗುವ ಈ ಸಿನಿಮಾದಲ್ಲಿ ನಿಮಗಾಗುವ ಕಷ್ಟ, ಅನ್ಯಾಯವನ್ನು ಸಹಿಸಿಕೊಂಡು ಕೂರಬೇಡಿ, ಮುಖ್ಯವಾಹಿನಿಗೆ ಬಂದು ಸಮಸ್ಯೆಯನ್ನು ಹೇಳಿಕೊಂಡು ಪರಿಹಾರ ಪಡೆಯಿರಿ ಎಂಬ ಸಂದೇಶವನ್ನು ಹೇಳಲಾಗಿದೆ. ಜೊತೆಗೆ ದೇಶದಲ್ಲಿ ನಡೆದ ಸಾಕಷ್ಟು ನೈಜ ಘಟನೆಗಳನ್ನು ಉದಾಹರಿಸುತ್ತಲೇ ಸಿನಿಮಾ ಮುಗಿದು ಹೋಗುತ್ತದೆ. ಚಿತ್ರದಲ್ಲಿ ನಟಿಸಿರುವ ಸಿರಿ ವಾನಳ್ಳಿ, ಮಾಸ್ಟರ್‌ ವಿಶ್ವಾಸ್‌, ಸುಮನ್‌ ನಗರ್‌ಕರ್‌ ಸೇರಿದಂತೆ ಪ್ರತಿಯೊಬ್ಬರ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಚರಣ್‌ರಾಜ್‌ ಸಂಗೀತ ಚಿತ್ರದ ಆಶಯಕ್ಕೆ ತಕ್ಕುದಾಗಿದೆ. 

Advertisement

ಚಿತ್ರ: ಜೀರ್ಜಿಂಬೆ
ನಿರ್ಮಾಣ: ಪುಷ್ಕರ್‌ ಫಿಲಂಸ್‌
ನಿರ್ದೇಶನ: ಕಾರ್ತಿಕ್‌ ಸರಗೂರು
ತಾರಾಗಣ: ಸಿರಿ ವಾನಳ್ಳಿ, ಮಾಸ್ಟರ್‌ ವಿಶ್ವಾಸ್‌, ಸುಮನ್‌ ನಗರ್‌ಕರ್‌ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next