Advertisement

ಬದಲಾಗುವ ಜಗತ್ತು ಬದಲಾಗದ ಮನಸ್ಸು

06:00 AM Jun 24, 2018 | |

ಹಂಪಿಯನ್ನು “ವಿಶ್ವ ಪರಂಪರೆಯ ತಾಣ’ವೆಂದು ಪರಿಗಣಿಸಿದ ಮೇಲೆ ಅಲ್ಲಿ ಹಲವಾರು ಬದಲಾವಣೆಗಳನ್ನು ನೀವು ಗಮನಿಸಿರಬಹುದು. ಅಂತಾರಾಷ್ಟ್ರೀಯ ಸಂಸ್ಥೆಯಿಂದ ಸಾಕಷ್ಟು ಹಣವು ಬಂದಿರುವುದರಿಂದ, ಹಂಪಿಯನ್ನು ಸ್ವತ್ಛಗೊಳಿಸುವುದು ನಡೆದಿದೆ. ವಿಜಯನಗರ ಕಾಲದಲ್ಲಿ ಹೇಗಿದ್ದಿರಬಹುದೋ ಅದೇ ರೂಪಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಅಳಿದ ಸ್ಮಾರಕಗಳಿಗೆ ಸಾಧ್ಯವಾದಷ್ಟು ಕಾಯಕಲ್ಪ ನಡೆಸಿ, ಸಾಧ್ಯವಾದಷ್ಟು ಸುಸ್ಥಿತಿಗೆ ತರುವ ಪ್ರಯತ್ನಗಳು ಕಾಣುತ್ತಿವೆ. ಅದರ ಅಂಗವಾಗಿ ಪಂಪಾಪತಿ ದೇವಸ್ಥಾನದ ಮುಂದಿರುವ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಿ, ಕೇವಲ ಕಲ್ಲು ಮಂಟಪಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.

Advertisement

ಮೊನ್ನೆ ಸಂಜೆ ಪಂಪಾಪತಿ ದೇವಸ್ಥಾನದ ಮುಂದಿರುವ ಪಂಪಾಬಜಾರಿನಲ್ಲಿ ನಾನು ವಾಕಿಂಗ್‌ ಮಾಡುತ್ತಿದ್ದೆ. ಆ ಹೊತ್ತಿನಲ್ಲಿ ಇಬ್ಬರು ಹಳ್ಳಿಯ ಹೆಂಗಸರು ಆಡುತ್ತಿದ್ದ ಮಾತುಗಳು ನನ್ನ ಕಿವಿಗೆ ಬಿದ್ದವು. “”ಎಲ್ಲಾರೂ ಸೇರಿ ನಮ್ಮ ಪಂಪಾಪತಿ ಗುಡೀನ್ನ ಹೆಂಗೆ ಹಾಳು ಮಾಡಿಬಿಟ್ರವ್ವಾ! ದೇವಸ್ಥಾನಕ್ಕೆ ಬಂದ್ರೂ ಒಂದು ಕುಂಕುಮದ ಅಂಗಡಿ ಇಲ್ಲಾ, ಒಂದು ಬಳಿ ಅಂಗಡಿ ಇಲ್ಲಾ, ಹೋಗಲಿ ಮಕ್ಕಳಿಗೆ ಪೀಪಿ ಕೊಡಸಾಣ ಅನಕಂಡ್ರೆ ಅದೂ ಇಲ್ಲ. ಬರೀ ಬೋಳು ಬೋಳು ಕಲ್ಲಿನ ಮಂಟಪ ಉಳಿಸಿ ಬಿಟ್ಟಾರೆ. ಯಾರಿಗೆ ಇಂಥಾ ಕೆಟ್ಟಬುದ್ಧಿ ಬಂದಿದ್ದೀತು ಅಂತೀನಿ! ನಾನು ಸಣ್ಣಾಕಿ ಇದ್ದಾಗ ಹಂಪಿ ಏನ್‌ ಕಳೆಕಳೆಯಾಗಿ ಇತ್ತು ಅಂತೀಯಾ…” ಎಂದು ಅವರಿಬ್ಬರೂ ಅತ್ಯಂತ ವಿಷಾದದಿಂದ ಹೇಳಿಕೊಳ್ಳುತ್ತಿದ್ದರು. ಅವರ ಮಾತುಗಳು ಮೊದಲು ನನಗೆ ನಗು ತರಿಸಿದರೂ, ಅನಂತರ ಮನಸ್ಸು ಗಂಭೀರವಾಗಿ ಯೋಚಿಸಲಾರಂಭಿಸಿತು.

ಪಂಪಾಪತಿ ಕ್ಷೇತ್ರ ಅತ್ಯಂತ ಹಳೆಯದು, ವಿಜಯನಗರ ಸಾಮ್ರಾಜ್ಯದ ಉದಯಕ್ಕೂ ಬಹು ಹಿಂದಿನದು. ಮೊದಲನೆಯ ಮತ್ತು ಎರಡನೆಯ ಶತಮಾನದಲ್ಲಿಯೇ ಈ ಪವಿತ್ರಕ್ಷೇತ್ರವನ್ನು ಗುರುತಿಸಿದ ಹಲವಾರು ಕುರುಹುಗಳು ನಮಗೆ ಇತಿಹಾಸದಲ್ಲಿ ಕಂಡು ಬರುತ್ತವೆ. ಅಂದಮೇಲೆ ಅನಾದಿಯಿಂದಲೂ ನಮ್ಮ ಜನರು ಈ ಕ್ಷೇತ್ರಕ್ಕೆ ಬರುತ್ತಲೇ ಇದ್ದಾರೆ. ಪುಣ್ಯಕ್ಷೇತ್ರವೆಂದ ಮೇಲೆ ಬಳೆ, ಕುಂಕುಮ, ಕಾಯಿ-ಹಣ್ಣು ಇತ್ಯಾದಿಗಳನ್ನು ಕೊಳ್ಳುವ ಸಂಪ್ರದಾಯ ಎಲ್ಲಾ ಕಾಲಕ್ಕೂ ಇದ್ದಿರಲೇಬೇಕು. ಜನರಿಗೆ ವಿಜಯನಗರ ವೈಭವಕ್ಕಿಂತಲೂ ಮುಖ್ಯವಾದದ್ದು ಪಂಪಾಪತಿಯ ವೈಭವ. ಆದ್ದರಿಂದಲೇ ನಿರಂತರವಾಗಿ ಬದಲಾಗುತ್ತ ತನ್ನದೇ ಹೊಸ ರೂಪವನ್ನು ಪಡೆದುಕೊಂಡಿದ್ದ ಈ ಕ್ಷೇತ್ರಕ್ಕೆ ಇದ್ದಕ್ಕಿದ್ದಂತೆಯೇ ದೊಡ್ಡ ಬದಲಾವಣೆ ಬಂದಿರುವುದನ್ನು ಸಹಿಸಲು ಕಷ್ಟವಾಗಿದೆ. ಮನುಷ್ಯ ಯಾವತ್ತೂ ದಿಢೀರ್‌ ಬದಲಾವಣೆಯನ್ನು ಸಹಿಸಲಾರ. ಅ ಕಾರಣಕ್ಕಾಗಿಯೇ ಹಳ್ಳಿಯ ಹೆಂಗಸರ ಬಾಯಲ್ಲಿ ಹೀಗೆ ವಿಷಾದ ಹೊರಟಿರುವುದು.

ಮಹಾಸಾಮ್ರಾಜ್ಯಕ್ಕಿಂತಲೂ ಮಹಾದೈವಗಳಿಗೆ ಹೆಚ್ಚು ಮಹತ್ವ ಕೊಟ್ಟ ನಾಡಿದು. ಆದ್ದರಿಂದಲೇ ನಮ್ಮವರು ಮಹಾಸಾಮ್ರಾಜ್ಯವನ್ನು ಸುಲಭವಾಗಿ ಮರೆತು ಮುನ್ನಡೆದು ಬಿಡುತ್ತಾರೆ. ಆದರೆ ಮಹಾದೈವವನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಅದು ಈ ನೆಲದ ಗುಣ. ಗತವೈಭವ, ವರ್ತಮಾನವೈಭವಕ್ಕೂ ಹೆಚ್ಚು ಮುಖ್ಯವಾದದ್ದು ಅವರಿಗೆ ದೈವವೈಭವವೇ ಆಗಿದೆ. ಅದನ್ನು ಸ್ಪಷ್ಟವಾಗಿ ಗ್ರಹಿಸಲು ಒಂದು ಸಮರ್ಪಕವಾದ ಉದಾಹರಣೆಯನ್ನು ಕೊಡುತ್ತೇನೆ. ಅಕ್ಕನ ಮನೆ ಹೊಸಪೇಟೆಯಲ್ಲಿರುವುದರಿಂದ ನಾನು ವರ್ಷದ ಬಹುತೇಕ ದಿನಗಳನ್ನು ಇಲ್ಲಿಯೇ ಕಳೆಯುತ್ತೇನೆ. ಸಂಜೆಯ ಹೊತ್ತು ಹಂಪಿಗೆ ಹೋಗಿ ಅಡ್ಡಾಡುವುದು ನನಗೆ ಇಷ್ಟದ ಹವ್ಯಾಸ. ಆದ್ದರಿಂದಲೇ ಅಲ್ಲಿ ನಡೆಯುವ ವಿದ್ಯಾಮಾನಗಳು ನನಗೆ ಕಾಣುತ್ತಿರುತ್ತವೆ. 

ಕಳೆದ ವರ್ಷ ಹಂಪಿ ಉತ್ಸವಕ್ಕೆ ಅಷ್ಟೇನೂ ಜನರು ಸೇರಿರಲಿಲ್ಲ. ನನ್ನ ಬಾಲ್ಯದ ಗೆಳೆಯನೊಬ್ಬ ಅದರ ಕೆಲಸ-ಕಾರ್ಯಗಳಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದ. ಊರಿನ ಶ್ರೀಮಂತ ರಾಜಕೀಯ ಮುಖಂಡನೊಬ್ಬ ಈ ಉತ್ಸವದ ರೂವಾರಿ ಆಗಿದ್ದರಿಂದ ಜನರನ್ನು ಸಾಕಷ್ಟು ಸಂಖ್ಯೆಯಲ್ಲಿ ಸೇರಿಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ ಜನರು ಅವರ ಕೋರಿಕೆಗೆ ಸೊಪ್ಪು ಹಾಕಿರಲಿಲ್ಲ.  ಈ ಸಲ ಮಳೆ-ಬೆಳೆ ಸರಿಯಾಗಿ ಆಗಿದೆ ಮಾರಾಯ. ಒಬ್ಬೊಬ್ಬರಿಗೆ ಇನ್ನೂರು ರೂಪಾಯಿ ಕೊಡ್ತೀವಿ ಅಂದ್ರೂ ಬರಲಿಕ್ಕೆ ತಯಾರಿಲ್ಲ, ಐನೂರು ಕೊಡ್ತೀವಿ ಅಂದ್ರೂ ಬರಲಿಕ್ಕೆ ತಯಾರಿಲ್ಲ. ಅಂತಹ ದೊಡ್ಡ ವಿಜಯನಗರ ಸಾಮ್ರಾಜ್ಯ ನಡೆದ ಜಾಗದಲ್ಲಿ ಅದನ್ನು ವರ್ಷಕ್ಕೊಮ್ಮೆ ಜ್ಞಾಪಿಸಿಕೊಳ್ಳುವುದಕ್ಕೂ ಜನರಿಗೆ ಉತ್ಸಾಹ ಇಲ್ಲ ಅಂದ್ರೆ ಬ್ಯಾಸರ ಆಗ್ತದೆ ಎಂದು ಕಷ್ಟವನ್ನು ಹೇಳಿಕೊಂಡ.

Advertisement

ಚೈತ್ರ ಹುಣ್ಣಿಮೆಯಂದು ಹಂಪಿಯ ಜಾತ್ರೆ. ಆ ವರ್ಷದ ಜಾತ್ರೆಗೆ ಜನರು ಕಿಕ್ಕಿರಿದು ತುಂಬಿದ್ದರು. ಕಾಲಿಡಲೂ ಸ್ಥಳವಿಲ್ಲದಂತೆ ಎಲ್ಲಡೆಯೂ ಜನರು ಮುಕರಿದ್ದರು. ಯಥಾಪ್ರಕಾರ ನನ್ನ ಬಾಲ್ಯದ ಗೆಳೆಯ ಈ ಜಾತ್ರೆಯಲ್ಲಿಯೂ ಕಾರ್ಯಕರ್ತನಾಗಿ ದುಡಿಯುತ್ತಿದ್ದ. ಅವನಿಗೆ ಮತ್ತೆ ನಾನು ಅಚ್ಚರಿಯಿಂದ ಪ್ರಶ್ನೆ ಮಾಡಿದೆ. 

“”ಈ ವರ್ಷ ಸಿಕ್ಕಾಪಟ್ಟೆ ಮಳೆ-ಬೆಳೆ ಆಗ್ಯದಲ್ಲಾ ಮಾರಾಯ, ಜನರ ಕೈಯಲ್ಲಿ ಕಾಸು ಕುಣೀತಾ ಅವೆ. ಅದಕ್ಕೇ ಇಷ್ಟೊಂದು ಮಂದಿ ಸೇರ್ಕೊಂಡಾರೆ” ಎಂದು ಸಮಜಾಯಿಷಿ ಕೊಟ್ಟ. “”ನೀವು ಐನೂರು ರೂಪಾಯಿ ಕೊಡ್ತೀನಿ ಅಂದ್ರೂ ಬರದವರು, ಈಗ್ಯಾಕೆ ಹಿಂಗೆ ನೊಣ ಮುತ್ತಿದಾಂಗೆ ಮುತ್ತಿದಾರೆ?” ಎಂದು ಕೇಳಿದೆ. ಅವನು ಮುಲಾಜಿಲ್ಲದೆ ಒಂದು ವಿಶೇಷ ಉತ್ತರವನ್ನು ಕೊಟ್ಟ. “”ಮನುಷ್ಯರು ಆಹ್ವಾನ ಕೊಡೋದಕ್ಕೂ, ಆ ಪಂಪಾಪತಿನೇ ಆಹ್ವಾನ ಕೊಡೋದಕ್ಕೂ ವ್ಯತ್ಯಾಸ ಇರಂಗಿಲ್ಲೇನು?” ಎಂದ. ಅವನ ಮಾತಿಗೆ ತಲೆದೂಗಿದ ನಾನು, “”ಬರಗಾಲ ಬಂತು ಅಂದ್ರೆ ಜಾತ್ರಿಗೆ ಜನ ಕಡಿಮಿ ಆಗ್ತಾರೇನು?” ಎಂದು ಕೇಳಿದೆ. “”ಹಂಗೇನೂ ಇಲ್ಲ. ಮುಂದಿನ ವರ್ಷ ಸರಿಯಾಗಿ ಮಳಿ-ಬೆಳಿ ಆಗಲಿ ಅಂತ ಬೇಡ್ಕೊಳ್ಳೋದಕ್ಕೆ ಹೆಚ್ಚೇ ಜನ ಸೇರ್ತಾರೆ” ಎಂದು ಹೇಳಿದ. ಅಂತೂ ದೈವದ ಜೊತೆಗೆ ಮನುಷ್ಯ ಯಾವತ್ತೂ ಸ್ಪರ್ಧೆ ನೀಡಲಾರ.

ಈಗ ಮತ್ತೂಮ್ಮೆ ನಮ್ಮ ಹಳ್ಳಿಯ ಹೆಂಗಸರಿಬ್ಬರ ಹಳಹಳಿಕೆಗೆ ವಾಪಸಾಗೋಣ. ಅಲ್ಲಿ ನಿಜವಾಗಿಯೂ ಇರುವ ಸಮಸ್ಯೆ ಏನು ಎಂದು ಸ್ವಲ್ಪ ಬಿಡಿಸಿ ನೋಡೋಣ. ಅಂತಾರಾಷ್ಟ್ರೀಯ ಪರಂಪರೆಯ ತಾಣಗಳನ್ನು ನಿರ್ವಹಿಸುವವರಿಗೆ, ಯಾವುದೋ ಒಂದು ಕಾಲಘಟ್ಟವನ್ನು ಅತ್ಯಂತ ಶ್ರೇಷ್ಠ ಎಂದು ಭಾವಿಸುವ ಮನೋಭಾವವಿದೆ. ಅಂದರೆ, ಸುವರ್ಣ ಯುಗ ಎನ್ನುತ್ತೇವಲ್ಲ, ಅಂತಹುದು. ಹಂಪಿಯು ಅತ್ಯಂತ ಸೊಗಸಾಗಿದ್ದದ್ದು ವಿಜಯನಗರ ಕಾಲದಲ್ಲಿಯೇ ಎಂದು ಅವರು ಖಚಿತವಾಗಿ ನಂಬುತ್ತಾರೆ. ಆದ್ದರಿಂದಲೇ ಅದನ್ನು ಪುನಃ ಸ್ಥಾಪಿಸಲು ಪ್ರಯತ್ನಿಸುತ್ತಾರೆ. ಆದರೆ ಹಳ್ಳಿಯ ಹೆಂಗಸರಿಲ್ಲಿ ಹಂಪಿಯನ್ನು ತಮ್ಮ ಕಾಲಮಾನಕ್ಕೆ ಅನ್ವಯಿಸಿಕೊಂಡು ನೋಡುತ್ತಿ¨ªಾರೆ. ಅವರಿಗೆ ಸ್ಪಷ್ಟವಾಗಿಯೇ ವಿಜಯನಗರ ಸಾಮ್ರಾಜ್ಯದ ವೈಭವದ ಕಲ್ಪನೆಯಿಲ್ಲ. 

ಆದರೆ, ತಮ್ಮ ಬಾಲ್ಯದಲ್ಲಿ ಅಪ್ಪ-ಅಮ್ಮನ ಜೊತೆಯಲ್ಲಿ, ಬಂಧು-ಬಳಗದ ಜೊತೆಯಲ್ಲಿ, ಶಾಲೆಯ ಸಹಪಾಟಿಗಳ ಜೊತೆಯಲ್ಲಿ ಹಂಪಿಗೆ ಬಂದ ನೆನಪು ದಟ್ಟವಾಗಿದೆ. ಬಾಲ್ಯದ ಕಣ್ಣುಗಳಿಗೆ ಜಗತ್ತನ್ನು ಅರಿದಿರುವುದಕ್ಕಿಂತಲೂ ಹೆಚ್ಚು ಸುಂದರವಾಗಿ ಕಾಣುವ ಶಕ್ತಿಯಿರುತ್ತದೆ. ಅದು ಬಾಲ್ಯವೆನ್ನುವ ದಿವ್ಯವಾದ ಮತ್ತು ನಿಷ್ಕಲ್ಮಷವಾದ ಸ್ಥಿತಿಯ ಕಾರಣದಿಂದಾಗಿ ಸಾಂದ್ರಗೊಂಡ ಅವಸ್ಥೆ. ಆ ಕಾರಣದಿಂದಾಗಿಯೇ ಈ ಹಳ್ಳಿಯ ಹೆಂಗಸರಿಗೆ ತಮ್ಮ ಬಾಲ್ಯದ ಆ ಅನುಭವವೇ ಸುವರ್ಣ ದಿನಗಳಾಗಿವೆಯೇ ಹೊರತು ಗತದ ವಿಜಯನಗರ ವೈಭವವಲ್ಲ. ಆದ್ದರಿಂದಲೇ ಅವರು ಆ ದಿನಗಳನ್ನು ಕಾಣಲು ಬಯಸುತ್ತಿದ್ದಾರೆ. ಹಾಗಿದ್ದರೆ ಇಲ್ಲಿ ಯಾರು ಹೆಚ್ಚು ಸತ್ಯ? ಇದು ಉತ್ತರಿಸಲು ಬಹಳ ಕಷ್ಟವಾದ ಸವಾಲು. ಸಾಮಾನ್ಯವಾಗಿ ಯಾರಿಗೆ ಹಣ-ಅಧಿಕಾರ ಹೆಚ್ಚು ಇರುತ್ತದೆಯೋ, ಅವರ ನಂಬಿಕೆಗಳೇ ಪರಮ ಸತ್ಯವಾಗಿಯೂ, ಅಕಳಂಕಿತ ನ್ಯಾಯವಾಗಿಯೂ ಕಾರ್ಯರೂಪಕ್ಕೆ ಬರುತ್ತವೆ. ಅಲ್ಪ ಸಂಖ್ಯಾತರ ಮತ್ತು ನಿಶ್ಯಕ್ತ ಜೀವದ ನಂಬಿಕೆಗಳಿಗೆ ಯಾವತ್ತೂ ಹೆಚ್ಚಿನ ಮಹತ್ವ ಇರುವುದಿಲ್ಲ. ಇದು ಈ ಕ್ರೂರ ಜಗತ್ತಿನ ನಿಯಮಾವಳಿ.

ಹಾಗಿದ್ದರೆ ಮನುಷ್ಯರಿಗೆ ಬದಲಾವಣೆಯೇ ಬೇಡವೆ? ಇರುವ ಸ್ಥಿತಿಯನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಲು ಇಷ್ಟ ಪಡುತ್ತಾನೆಯೆ? ಎಂಬ ಪ್ರಶ್ನೆಗಳು ಏಳುತ್ತವೆ. ಇದಕ್ಕೆ ಉತ್ತರ ಸಂಕೀರ್ಣವಾದದ್ದಾಗಿರುತ್ತದೆ. ಇದ್ದ ಸ್ಥಿತಿಯನ್ನೇ ಸ್ವತ್ಛಗೊಳಿಸುವುದಕ್ಕೋ, ಸುಂದರಗೊಳಿಸುವುದಕ್ಕೋ ಯಾರೂ ಅಡ್ಡಿ ಪಡಿಸುವುದಿಲ್ಲ. ಉದಾಹರಣೆಗೆ ವಾರಾಣಸಿಯ ಗಂಗೆಯನ್ನು ಸ್ವತ್ಛ ಮಾಡುತ್ತೇನೆಂದು ಮೋದಿಯವರು ಹೇಳಿದಾಗ, ಎಲ್ಲರೂ ಉತ್ಸಾಹದಿಂದಲೇ ಅಹುದಹುದೆಂದರು. ಮತ್ತೂಬ್ಬ ರಾಜಕಾರಣಿಯೊಬ್ಬರು ಬೆಂಗಳೂರಿನ ರಸ್ತೆಗಳನ್ನು ಹೇಮಾಮಾಲಿನಿ ಕೆನ್ನೆಯಂತೆ ಮಾಡುತ್ತೇವೆಂದರೂ ಯಾರೂ ಬೇಡವೆನ್ನಲಿಲ್ಲ. ಆದರೆ, ಹೊಂದಿಕೊಂಡ ಒಂದು ಸನ್ನಿವೇಶವನ್ನು ಮತ್ತೂಂದು ಬೇರೆಯೇ ಸ್ಥಿತಿಗೆ ಬದಲಾಯಿಸಲು ಹೊರಟಾಗ ಮಾತ್ರ ಮನುಷ್ಯ ಸಾಕಷ್ಟು ವಿರೋಧಿಸುತ್ತಾನೆ. ಹೊಸ ಸನ್ನಿವೇಶ ಅವನಿಗೆ ಹೆಚ್ಚು ಅನುಕೂಲವೋ, ಅನನುಕೂಲವೋ ಎಂದು ಸ್ವಲ್ಪ ಕಾದು ನೋಡುವ ವ್ಯವಧಾನ ಅವನಿಗಿರುವುದಿಲ್ಲ. ದಿಢೀರ್‌ ಎಂದು ಸಿನೆಮಾದ ದೃಶ್ಯದಂತೆ ಬದಲಾಗುವ ವಾಸ್ತವದ ಬದುಕಿಗೆ ಮಾನವ ಹೆದರಿಕೊಳ್ಳುತ್ತಾನೆ. ಅದು ಅವನ ಕಡುವಿರೋಧದಲ್ಲಿ ವ್ಯಕ್ತವಾಗುತ್ತದೆ. ಅದಕ್ಕೊಂದು ಸೊಗಸಾದ ಉದಾಹರಣೆಯನ್ನು ನನ್ನ ಬಾಲ್ಯದಿಂದ ಹೆಕ್ಕಿ ಕೊಡಬಲ್ಲೆ.

ದ್ರೌಪದಮ್ಮ ಎನ್ನುವಾಕೆ ಅಮ್ಮನ ಗೆಳತಿ, ದೂರದಿಂದ ಸಂಬಂಧಿಯೂ ಹೌದು. ಆಕೆಯ ಬಾಯಿ ದೊಡ್ಡದು. ಜೊತೆಗೆ ವಿಪರೀತ ಸಿಡಿಮಿಡಿಗೊಳ್ಳುವ ಸ್ವಭಾವ. ನಾಲ್ಕು ಜನ ಮಕ್ಕಳು ಮತ್ತು ಗಂಡನನ್ನು ಯಥೇತ್ಛವಾಗಿ ಬೈಯುತ್ತಲೇ ದಿನವೊಂದಕ್ಕೆ ತೆರೆದುಕೊಳ್ಳುತ್ತಿದ್ದಳು. ಆಕೆ ಮನೆಯಲ್ಲಿ ಮಾತಾಡಿದರೆ, ಬೀದಿಯ ತುದಿಯವರೆಗೂ ಕೇಳಿಸುತ್ತಿತ್ತು. ಆದ್ದರಿಂದ ಅವರ ಮನೆಯಲ್ಲಿ ಯಾವುದೂ ಗೌಪ್ಯವೆನ್ನುವುದೇ ಇಲ್ಲದಾಗಿತ್ತು. ಹತ್ತು ನಿಮಿಷ ತಡವಾಗಿ ಮಕ್ಕಳು ಸ್ನಾನ ಮಾಡಿದರೂ ಕೂಗುವುದು, ಒಲೆಯ ಮೇಲಿನ ಹಾಲು ಚೂರು ಉಕ್ಕಿದರೂ ಕೂಗುವುದು, ಗಂಡ ತಂದ ಸಂತೆಯ ಸರಕಲ್ಲಿ ಒಂದೆರಡು ಬದನೆಕಾಯಿ ಕೊಳೆತಿದ್ದರೂ ಕೂಗುವುದು- ಒಟ್ಟಾರೆ ಆಕೆಯ ಸಿಟ್ಟಿನ-ಸಿಡಿಮಿಡಿ ಮಾತುಗಳು ನಮಗೆ ಕೇಳಿಸುತ್ತಲೇ ಇರುತ್ತಿದ್ದವು. ಇದು ಕೆಲವೊಮ್ಮೆ ವಿಪರೀತವೆನ್ನಿಸಿ ದೂರದ ಮನೆಯ ನಮಗೇ ತಲೆಚಿಟ್ಟು ಹಿಡಿಸುತ್ತಿತ್ತು.

ಆಕೆ ಗೆಳತಿಯಾದರೂ ಅಮ್ಮನಿಗಿಂತಲೂ ವಯಸ್ಸಿನಲ್ಲಿ ಚಿಕ್ಕವಳಿದ್ದಳು. ಆದ್ದರಿಂದ ಅಮ್ಮನ ಮಾತನ್ನು ಕೇಳುವ ಸ್ವಭಾವ ಆಕೆಗಿತ್ತು. ಆ ಮನೋಭಾವವನ್ನು ಉಪಯೋಗಿಸಲು ನಿರ್ಧರಿಸಿದ ಅಮ್ಮ, “”ಅಲ್ಲೇ ದ್ರೌಪದಿ, ಈ ಪರಿ ಗಟ್ಟಿ ಗಟ್ಟಿ ಮಾತಾಡಿ ಯಾವಾಗ್ಲೂ ಸಿಟ್ಟು ಸಿಟ್ಟು ಮಾಡಿಕೊಂಡಿದ್ರೆ ಮಕ್ಕಳು-ಗಂಡನ್ನ ಗತಿಯೇನೆ? ಬೆಳೆಯೋ ಮಕ್ಕಳ ಮೇಲೆ ಇಂಥಾವು ಪ್ರಭಾವ ಬೀರ್ತಾವೆ. ಸ್ವಲ್ಪ ಮೆತ್ತಗೆ ಮಾತಾಡೋದು ರೂಢಿಸ್ಕೊ… ಚೂರಾದ್ರೂ ನಯ-ನಾಜೂಕು ಅನ್ನೋದು ಇರಬೇಕವ್ವಾ. ಕಷ್ಟಪಟ್ಟು ನಾವಾಗಿ ರೂಢಿಸಿಕೊಳ್ಳದಿದ್ದರೆ ಅವು ನಮಗೆ ದಕ್ಕಂಗಿಲ್ಲ” ಅಂತ ಒಂದು ದಿನ ಆಕೆಗೆ ಹೆರಳು ಹೆಣೆಯುತ್ತ, ಉದುರಿದ ಕೂದಲನ್ನು ಎಡಗೈಯ ತೋರುಬೆರಳಿಗೆ ಸುತ್ತಿಕೊಳ್ಳುತ್ತ, ಆಕೆಯ ಮನಸ್ಸಿಗೆ ತಾಕುವಂತೆ ಹೇಳಿ, ತಲೆಯನ್ನು ಮೆತ್ತಗೆ ಮೊಟಕಿದ್ದಳು. ಅಮ್ಮನ ಮಾತು ಆಕೆಯ ಮೇಲೆ ಪರಿಣಾಮ ಬೀರಿತು. “”ಹಂಗೇ ಆಗಲಿ ಬಿಡ್ರಿ. ಈವತ್ತಿನಿಂದಲೇ ಕಡಿಮೆ ಮಾತಾಡ್ತೀನಿ” ಎಂದು ಪ್ರಮಾಣ ಮಾಡಿ ಹೋದಳು.

ಎರಡು ದಿನ ಅವರ ಮನೆ ನಿಶ್ಯಬ್ದವಾಗಿತ್ತು. ಅಮ್ಮನಿಗೆ ಏನನ್ನೋ ಸಾಧಿಸಿದ ಸಂಭ್ರಮವಿತ್ತು. ಹೇಳ್ಳೋ ರೀತಿಯಲ್ಲಿ ಹೇಳಿದ್ರೆ ಮನುಷ್ಯಗೆ ಮಾತು ನಾಟ¤ವೆ ಎಂದು ನಮ್ಮ ಮುಂದೆ ಜಂಭ ಕೊಚ್ಚಿದಳು. ಆದರೆ, ಅವೆೆಲ್ಲವೂ ಮೂರನೆಯ ದಿನ ಠುಸ್‌Õ ಎಂದವು. ದ್ರೌಪದಮ್ಮನ ಮನೆಯಿಂದ ಯಥಾಪ್ರಕಾರ ಆಕೆಯ ಗಟ್ಟಿ ಧ್ವನಿ ಕೇಳಿಸಲು ಶುರುವಾಯ್ತು. ಚೌರದಲ್ಲಿ ಕಡಿಮೆ ಕೂದಲನ್ನು ಕತ್ತರಿಸಿಕೊಂಡು ಬಂದ ಮಗನನ್ನು ಬಯ್ಯುವುದು, ಮತ್ತೆಮತ್ತೆ ಕನ್ನಡಿ ನೋಡಿಕೊಳ್ಳುವ ಹರೆಯದ ಮಗಳನ್ನು ದಬಾಯಿಸುವುದು, ಗಪ್‌ಚುಪ್‌ ಆಗಿ ಹೊಟೇಲಿನಲ್ಲಿ ಜಾಮೂನು ತಿಂದು ಬಂದ ಗಂಡನನ್ನು ತರಾಟೆಗೆ ತೆಗೆದುಕೊಳ್ಳುವುದು – ಎಲ್ಲವೂ ಢಾಣಾಢಂಗುರವಾಗಿ ಕೇಳಿಸಿದವು. ಸೋಲನ್ನು ಒಪ್ಪಿಕೊಳ್ಳದ ಅಮ್ಮ ನಾಯಿ ಬಾಲ ಡೊಂಕೇ ಎಂದು ಹೇಳಿ ಸುಮ್ಮನಾದಳು.

ಆ ದಿನ ಮಧ್ಯಾಹ್ನ ಊಟವಾದ ಮೇಲೆ ಹರಟೆಗೆ ಬಂದ ದ್ರೌಪದಮ್ಮನ ಮುಂದೆ ಅಮ್ಮ ತನ್ನ ಅಸಮಾಧಾನವನ್ನು ಹೊರಹಾಕಿಯೇ ಬಿಟ್ಟಳು. “”ಎರಡು ದಿನ ಎಷ್ಟು ಚಂದ ಅನ್ನಿಸಿತ್ತು. ಬಂಗಾರದಂಥ ಸಂಸಾರ ಅನ್ನಿಸಿ ಎಲ್ಲಿ ನನ್ನ ದೃಷ್ಟಿ ತಾಕ್ತದೋ ಅಂತ ಅನ್ನಿಸಿಬಿಟ್ಟಿತ್ತು. ಮೂರನೆಯ ದಿನಕ್ಕೆ ಬಾಲ ಬಿಚ್ಚಿಬಿಟ್ಟೆಯಲ್ಲೇ ದ್ರೌಪದಿ” ಎಂದು ಹೇಳಿದಳು.

“”ಅಯ್ಯೋ ಏನು ಹೇಳ್ತೀರಾ ಆ ಕಥೆಯ… ನಿಮಗೇನೋ ನಮ್ಮ ಸಂಸಾರ ಚಂದಾಗಿ ಕಂಡಿರಬೋದು, ನಮ್ಮ ಮನೆಯೊಳಗಿನ ಮಂದೀಗೆ ಸಂಕಟ ಆಗಿ ಹೋಗಿತ್ತು. ಯಾಕಮ್ಮಾ ಒಂಥರಾ ಇದ್ದೀ ಅಂತ ಮಕ್ಕಳು ಕೇಳ್ತಾನೇ ಇದ್ರು. ಆಸ್ಪತ್ರೆಗೆ ಕರಕೊಂಡು ಹೋಗಲೇನೆ ಅಂತ ಗಂಡನೂ ವಿಚಾರಿಸ್ಕೊಂಡ. ಮಾತು ಕಮ್ಮಿ ಮಾಡಿದ್ದಕ್ಕೆ ಒಬ್ಬರನ್ನಾ ಒಂದು ಒಳ್ಳೆ ಮಾತು ಹೇಳಲಿಲ್ಲ. ಅದಕ್ಕೆ ಮೂರನೇ ದಿನ ಯಥಾಪ್ರಕಾರ ಆದೆ. ಈಗ ಮನೆಯಾಗೆ ಎಲ್ಲಾ ಸರಿ ಹೋಗ್ಯದೆ” ಎಂದು ವಿವರಿಸಿದಳು.

ಬದಲಾವಣೆ ಜಗದ ನಿಯಮ ಎಂದು ಹೇಳುತ್ತೇವೆ. ಆದರೆ, ಅದಕ್ಕೆ ಹೊಂದಿಕೊಳ್ಳುವುದು ಅಂತಹ ಸುಲಭದ ಸಂಗತಿಯಂತೂ ಅಲ್ಲ.

ವಸುಧೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next