Advertisement

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

09:02 AM Apr 12, 2024 | Team Udayavani |

“ದುನಿಯಾ’ ವಿಜಯ್‌ ಪುತ್ರಿ ಸಿನಿಮಾ ರಂಗಕ್ಕೆ ಎಂಟ್ರಿಕೊಡುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ, ಯಾವಾಗ, ಯಾವ ಸಿನಿಮಾ ಮೂಲಕ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈಗ ಎಲ್ಲವೂ ಪಕ್ಕಾ ಆಗಿದೆ. ಗುರುವಾರ ಸಿನಿಮಾಕ್ಕೆ ಮುಹೂರ್ತ ನಡೆದಿದೆ. ವಿಶೇಷ ಎಂದರೆ ಅಪ್ಪ-ಮಗಳು ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Advertisement

ಈ ಮೂಲಕ ವಿಜಯ್‌ ಪುತ್ರಿ ಮೋನಿಕಾ ಗ್ರ್ಯಾಂಡ್‌ ಆಗಿ ಎಂಟ್ರಿಕೊಡುತ್ತಿದ್ದಾರೆ. ಅಂದಹಾಗೆ, ಮೋನಿಕಾ ಈಗ ಹೆಸರು ಬದಲಿಸಿಕೊಂಡಿದ್ದು ರಿತನ್ಯಾ ಆಗಿ ಎಂಟ್ರಿಕೊಟ್ಟಿದ್ದಾರೆ.

ಈ ಚಿತ್ರವನ್ನು ಜಡೇಶ್‌ ನಿರ್ದೇಶನ ಮಾಡುತ್ತಿದ್ದಾರೆ. “ಸಾರಥಿ’ ಚಿತ್ರವನ್ನು  ನಿರ್ಮಿಸಿದ್ದ ಕೆ.ವಿ.ಸತ್ಯಪ್ರಕಾಶ್‌ ಅವರು ಹನ್ನೆರಡು ವರ್ಷಗಳ ನಂತರ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಣಕ್ಕೆ ಸತ್ಯಪ್ರಕಾಶ್‌ ಅವರ ಪುತ್ರ ಸೂರಜ್‌ ಗೌಡ ಅವರು ಸಾಥ್‌ ನೀಡುತ್ತಿದ್ದಾರೆ.

ರಿತನ್ಯಾ ಸಿನಿಮಾಕ್ಕೆ ಬರುವ ಮುನ್ನ ನಟನೆ ಕುರಿತು ತರಬೇತಿ ಪಡೆದಿದ್ದಾರೆ. ಮುಂಬೈಯ ಅನುಪಮ್‌ ಖೇರ್‌ ಆ್ಯಕ್ಟಿಂಗ್‌ ಸ್ಕೂಲ್‌ನಲ್ಲಿ ಹಾಗೂ ನೀನಾಸಂ ಶಿಕ್ಷಕರೊಬ್ಬರಿಂದಲೂ ರಿತನ್ಯಾ ತರಬೇತಿ ಪಡೆದಿದ್ದಾರೆ. ಸಿನಿಮಾದಲ್ಲಿ ನಟಿಸಬಹುದು ಎಂಬ ವಿಶ್ವಾಸ ಬಂದ ನಂತರವೇ ಸಿನಿಮಾ ಒಪ್ಪಿಕೊಂಡಿದ್ದಾರೆ. ತಮ್ಮ ಎಂಟ್ರಿ ಬಗ್ಗೆ ಮಾತನಾಡುವ ರಿತನ್ಯಾ, “ತುಂಬಾ ಖುಷಿಯಾಗುತ್ತಿದೆ. ಈ ದಿನಕ್ಕಾಗಿ ಎದುರು ನೋಡುತಿದ್ದೆ. ನನ್ನ ತಂದೆಯೇ ನನಗೆ ದೊಡ್ಡ ಶಕ್ತಿ. ಅವರು ಜೊತೆಗಿದ್ದರೆ ಎಂತಹ ಸವಾಲಿನ ದೃಶ್ಯವನ್ನಾದರೂ ನಾನು ಮಾಡಲು ಸಿದ್ಧ’ ಎನ್ನುತ್ತಾರೆ.

ಮಗಳ ಚೊಚ್ಚಲ ಸಿನಿಮಾ ಲಾಂಚ್‌ ದಿನ ದುನಿಯಾ ವಿಜಯ್‌ ಕೂಡಾ ಭಾವುಕರಾಗಿದ್ದರು. “ಇದು ತುಂಬಾ ಭಾವುಕ ಕ್ಷಣ. ಒಬ್ಬ ತಂದೆಯಾಗಿ ಏನು ಕೊಡಬಹುದು ಎಂದರೆ ನಾನು ಮಾಡುವ ಸ್ಕ್ರಿಪ್ಟ್ನಲ್ಲಿ ಅರ್ಧ ನಿನಗೂ ಬಿಟ್ಟುಕೊಡಬಹುದು… ನಾನು 30 ವರ್ಷ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇನೆ. ಆದರೆ, ನಿನ್ನನ್ನು ಯಾವುದೇ ಕಷ್ಟವಿಲ್ಲದೇ ಸೀದಾ ಇಲ್ಲಿಗೆ ತಂದುಬಿಡುತ್ತಿದ್ದೇನೆ. ಕೆಲಸವನ್ನು ಶ್ರದ್ಧೆ,ಭಕ್ತಿ, ಪ್ರಾಮಾಣಿಕತೆಯಿಂದ ಮಾಡು.. ಕೊನೆವರೆಗೆ ನಿನ್ನನ್ನು ಕಾಪಾಡೋದು ಅದೇ’ ಎಂದು ಮಗಳಿಗೆ ಕಿವಿಮಾತು ಹೇಳಿದ ವಿಜಯ್‌, “ಈಗಷ್ಟೇ ಚಿತ್ರರಂಗಕ್ಕೆ ಬಂದಿದ್ದಾಳೆ. ತಪ್ಪು ಮಾಡಿದರೆ ಕೈ ಹಿಡಿದು ನಡೆಸಿಕೊಂಡು ಹೋಗಿ’ ಎಂದರು.

Advertisement

ಸಿನಿಮಾ ಬಗ್ಗೆ ಮಾತನಾಡಿದ ವಿಜಯ್‌, “ಜಡೇಶ್‌ ತುಂಬಾ ರೀಸರ್ಚ್‌ ಮಾಡಿ, ಓದಿಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಕಥೆ ತುಂಬಾ ವಿಭಿನ್ನವಾಗಿದೆ. ನನ್ನ ಕೆರಿಯರ್‌ನಲ್ಲಿ ತುಂಬಾ ಹೊಸದಾದ ಪಾತ್ರ ಎಂದರೆ ತಪ್ಪಲ್ಲ’ ಎಂದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಜಡೇಶ್‌, “ಇದು ನಾನು ಕಂಡ, ಕೇಳಿದ ಹಾಗೂ ನೋಡಿದ ನೈಜ ಕಥೆ ಎಂದು ಮಾತನಾಡಿದ ನಿರ್ದೇಶಕ ಜಡೇಶ ಕೆ ಹಂಪಿ, ಇದು ಕೋಲಾರ ಭಾಗದಲ್ಲಿ ನಡೆ ಯುವ ಕಥೆಯಾಗುವುದರಿಂದ ಕೋಲಾರದ ಭಾಷೆಯಲ್ಲೇ ಇರುತ್ತದೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ಅವರು ಕೋಲಾರದವರೆ ಆಗಿರುವುದು ವಿಶೇಷ. ಒಂದು ಹೊಸ ಬಗೆಯ ಸಿನಿಮಾವಾಗುವ ವಿಶ್ವಾಸವಿದೆ’ ಎಂದರು

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next