Advertisement
ಮಳೆ ಶುರುವಾದ ತಕ್ಷಣ ಅಣೆಕಟ್ಟೆಗಳು ಭರ್ತಿಯಾಗಿವೆ. ಹಲವರಿಗೆ ಇದು ಖುಷಿಯ ಸಂಗತಿಯಾಗಿರಬಹುದು. ಆದರೆ ಮಳೆ ನೀರಿನ ಹರಿವಿಗೆ ವೇಗ ಬಂದ ಅಪಾಯದ ಸೂಚನೆ ಇದು. ಯÞವುದೇ ಜಲಾಶಯವಾಗಿರಲಿ, ಅದರಲ್ಲಿ ಬೇಗ ನೀರು ತುಂಬಿದಷ್ಟೂ ಆ ವರ್ಷ ಹೆಚ್ಚು ಹೂಳು ಜಮೆಯಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಮಳೆ, ನದಿ ಗಾತ್ರದ ಜಾಗದಲ್ಲಿ ಸುರಿದು ಹರಿದು ಬಂದಿಲ್ಲ. ಲಕ್ಷಾಂತರ ಹೆಕ್ಟೇರ್ ಪ್ರದೇಶದ ಗುಡ್ಡ, ಬೆಟ್ಟ, ಕೃಷಿ ನೆಲದಲ್ಲಿ ಬಿದ್ದು ಬಂದಿದೆ. ರಾಜ್ಯದ ಅಣೆಕಟ್ಟುಗಳು ಬೇಗ ತುಂಬುತ್ತಿರುವುದರ ಹಿಂದೆ ಮಳೆ ಅಬ್ಬರದ ಜೊತೆಗೆ ಅರಣ್ಯನಾಶದ ಕಾರಣಗಳಿವೆ.
Related Articles
Advertisement
ಚಿಕ್ಕ ಹುಲ್ಲುಗಳು ಅಬ್ಬರದ ಹನಿ ತಡೆಯುತ್ತವೆ. ನಾಲ್ಕು ತಿಂಗಳಲ್ಲಿ ಸುರಿಯುವ ಮಳೆ ನೀರನ್ನು ಜತನದಿಂದ ಹಿಡಿದು ವರ್ಷವಿಡೀ ತೊರೆಯಾಗಿ ಬೆಟ್ಟದಿಂದ ಹರಿಯಲು ನೆರವಾಗುವ ಕಣ್ಣಿಗೆ ಕಾಣದ ಹಲವು ಸೂಕ್ಷ್ಮಗಳಿವೆ. ನದಿಗಳಿಗೆ ಮರುಜೀವ ನೀಡುವುದೆಂದರೆ, ಯಂತ್ರಗಳಿಂದ ಮಣ್ಣು ಅಗೆದು, ಕೆರೆ ಮಾಡುವುದು, ಕಿಂಡಿತಡೆ ಅಣೆಕಟ್ಟು ನಿರ್ಮಿಸುವಷ್ಟು ಸರಳ ಕೆಲಸವಲ್ಲ.
ಅಪ್ಪ ಹಗೇವಿನಲ್ಲಿ ಕಾಳು ಕೂಡಿಟ್ಟರೆ ಬರಗಾಲದಲ್ಲಿ ಮಗ ಊಟ ಮಾಡಬಹುದು. ಬ್ಯಾಂಕಿನಲ್ಲಿ ಠೇವಣಿ ಇದ್ದರೆ ವಾರ್ಷಿಕ ಬಡ್ಡಿ ಹಣದಲ್ಲಿ ಆರಾಮ ಆಗಿ ಬದುಕಬಹುದು. ಕೂಡಿಡುವ ಎಚ್ಚರ ಮರೆತು ಕಣದ ಕಾಳನ್ನು, ಕೈಯ ಕಾಸನ್ನು ಖರ್ಚು ಮಾಡಿದರೆ ಬದುಕು ಕಷ್ಟ. ನದಿಗಳ ವಿಚಾರದಲ್ಲಿ ಇಂದು ಇದೇ ಆಗಿದೆ. ಮಳೆ ನೀರು ಭೂಮಿಗೆ ಇಂಗಿಸುವ ಕಾಡು, ಒರತೆ ಜಲದ ಮೂಲಕ ಇಡೀ ವರ್ಷ ನೀರು ಜಿನುಗಿಸುವ ಬೆಟ್ಟಗಳನ್ನು ನಾವು ದೋಚಿದ್ದರಿಂದ ನದಿಗಳ ಸಾವು ಸಂಭವಿಸಿದೆ. ಬೆಂಕಿ ಉರಿಸಿದ್ದೇವೆ. ಗಣಿಗಾರಿಕೆಯಿಂದ ಒಡಲು ಬಗೆದಿದ್ದೇವೆ. ಉದ್ಯಮ, ಕೃಷಿ, ನಿವೇಶನ, ರಸ್ತೆಗಳಿಗೆಂದು ಖಾಲಿಯಾಗಿಸಿದ್ದೇವೆ. ನದಿ ಬದುಕನ್ನು ಕಾಡಿನ ಒಟ್ಟೂ ಆವರಣದ ಮೂಲಕ ಸಮಗ್ರವಾಗಿ ಅರಿಯುವುದು ನದಿ ಸಂರಕ್ಷಣೆಯ ಮೊದಲ ಕೆಲಸವಾಗುತ್ತದೆ. ಮಳೆ ನೀರು ಹಿಡಿಯಲು ಕೆರೆ ಮಾಡುವುದು, ಇಂಗುಗುಂಡಿ ರಚಿಸುವುದು ಇವೆಲ್ಲಾ ಅಪಘಾತವಾದವರನ್ನು ಆಸ್ಪತ್ರೆಗೆ ಸೇರಿಸುವಂಥ ತುರ್ತು ಕೆಲಸ ಮಾತ್ರವಾಗಿದೆ. ಅರಣ್ಯ ಸಂರಕ್ಷಣೆಯಾದರೆ ನದಿ ಸುಸ್ಥಿರವಾಗಿ ಉಳಿಯುತ್ತದೆ.
ಪಶ್ಚಿಮ ಘಟ್ಟದಲ್ಲಿ ಅರಣ್ಯ ಸಂರಕ್ಷಣೆ ಹೆಸರಿನಲ್ಲಿ 80 ರ ದಶಕದೀಚೆಗೆ ಯೋಜನೆಗಳು ಜಾರಿಯಾಗಿವೆ. ಅಕೇಶಿಯಾ, ತೇಗ, ಕ್ಯಾಸುರಿನಾ, ನೀಲಗಿರಿ ಬೆಳೆಸಲು ಲಕ್ಷ ಲಕ್ಷ ಹಣ ಖರ್ಚಾಗಿದೆ. ಅರಣ್ಯದಲ್ಲಿ ಮುಂಚೆ ಯಾವ ಸಸ್ಯಗಳಿದ್ದವೆಂದು ಅರಿಯದವರು ಆಸ್ಟ್ರೇಲಿಯನ್ ಮೂಲದ ಅಕೇಶಿಯಾ ನೆಟ್ಟಿದ್ದಾರೆ. ಮನುಷ್ಯ, ಅರಣ್ಯೀಕರಣಕ್ಕೆ ಹೊರಟಾಗ ಇಂಥ ಎಡವಟ್ಟುಗಳಾಗುತ್ತವೆ. ಯಾವ ಬೀಜ ಸಂಗ್ರಹಿಸಿ ಸಸಿಗಳನ್ನು ಸುಲಭದಲ್ಲಿ ಬೆಳೆಸಿ ನಾಟಿ ಮಾಡಿ ರಕ್ಷಿಸಬಹುದೆಂಬುದನ್ನು ತಿಳಿಯಲು ಮಾತ್ರ ಮನುಷ್ಯ ಹೆಚ್ಚು ಲಕ್ಷ್ಯ ನೀಡುತ್ತಾನೆ. ಪರಿಣಾಮ, ಹುಲ್ಲುಗಾವಲು, ನಿತ್ಯಹರಿದ್ವರ್ಣ ಕಾಡಿನ ನೆಲೆಗಳು ನೆಡುತೋಪಿನ ಬೀಡಾಗಿವೆ. ಅಕೇಶಿಯಾ ಎಲೆಗಳು ಹ್ಯೂಮಸ್ ಆಗಿ ಮೂರು ವರ್ಷವಾದರೂ ಪರಿವರ್ತನೆಯಾಗುವುದಿಲ್ಲ, ಕಟಾವಾದ ಅಕೇಶಿಯಾ ಮರದ ಬೊಡ್ಡೆಗಳು 20 ವರ್ಷವಾದರೂ ಮಣ್ಣೊಳಗೆ ಕರಗುವುದಿಲ್ಲ. ಪಶ್ಚಿಮ ಘಟ್ಟದ ಅರಣ್ಯ ಸಂರಕ್ಷಣೆ ಎಂಬುದು ನೆಡುತೋಪಿನ ಪ್ರಹಸನವಾಗಿ, ಯಂತ್ರಗಳಿಂದ ಗುಡ್ಡ ಅಗೆತಕ್ಕೆ ಮೂಲವಾಗಿದೆ. ಭೂ ಸವಕಳಿಯಿಂದ ನೀರು ಒಣಗಲು ಕಾರಣವಾಗಿದೆ. ಬೇಗ ಕರಗಿ ಮಣ್ಣಿಗೆ ಶಕ್ತಿಯಾಗುವ ಸೂತ್ರವನ್ನೇ ನಾವೀಗ ಮರೆತಿದ್ದೇವೆ.
15 ವರ್ಷಗಳ ಹಿಂದೆ ರಾಜ್ಯದಲ್ಲಿ ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಯೋಜನೆ ಜಾರಿಯಾಗಿತ್ತು. 500 ಹೆಕ್ಟೇರ್ ಕೃಷಿ ಭೂಮಿ ಗುರುತಿಸಿ, ಕಿರು ಜಲಾನಯನ ಸಂರಕ್ಷಣೆಗಳು ನಡೆದವು. ಮಲೆನಾಡಿನಲ್ಲಿ ಸುಮಾರು 5000 ಹೆಕ್ಟೇರ್ ಅರಣ್ಯ ಭೂಮಿಯ ತಗ್ಗಿನಲ್ಲಿ ಈ ಪ್ರಮಾಣದ ಕೃಷಿ ಭೂಮಿ ದೊರೆಯಬಹುದು. ಅರಣ್ಯದಲ್ಲಿ ಯಾವ ಸಂರಕ್ಷಣಾ ಚಟುವಟಿಕೆ ಕೈಗೊಳ್ಳದೇ ನಾಲಾ ಬದು, ಕಿಂಡಿತಡೆ ಅಣೆಕಟ್ಟೆ, ತೋಟಗಾರಿಕಾ ಸಸ್ಯ ವಿತರಣೆ ನಡೆಯಿತು. ಗುಡ್ಡದಲ್ಲಿ ನೀರು ಉಳಿಸುವುದು ಜಲಾನಯನದ ಮೊದಲ ಕೆಲಸವಾಗಬೇಕು. ಆದರೆ ಹಳ್ಳಗಳಿಗೆ ಕಾಂಕ್ರೀಟ್ ತಡೆ ಹಾಕುವ ಕೆಲಸ ನಡೆಯಿತು.
ಫೆಬ್ರವರಿಯಲ್ಲಿ ಒಣಗುವ ಹಳ್ಳಗಳಿಗೆ ಒಡ್ಡು ನಿರ್ಮಿಸಿದ್ದರಿಂದ ಹಣ ಖರ್ಚಾಯಿತೇ ಹೊರತು ಫಲ ಸಿಗಲಿಲ್ಲ. ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ನೀರಾವರಿ, ಸಾರಿಗೆ ಸಂಪರ್ಕ, ಪಂಚಾಯತ್, ಸಮುದಾಯಗಳೆಲ್ಲ ಸೇರಿ ಯೋಜನೆಗಳು ರೂಪುಗೊಳ್ಳಬೇಕು. ಆದರೆ ನಮ್ಮ ಸರಕಾರಿ ಇಲಾಖೆಗಳಲ್ಲಿ ಪರಸ್ಪರ ಸಮನ್ವಯವಿಲ್ಲ. ಅರಣ್ಯ ಇಲಾಖೆಯ ನಿಯಮ ಸಾರಿಗೆ ಸಂಪರ್ಕಕ್ಕೆ ಹೊಂದುವುದಿಲ್ಲ, ಕೃಷಿ ಇಲಾಖೆಯ ಕಾರ್ಯ ತೋಟಗಾರಿಕೆಗೆ ಮುಖ್ಯವಲ್ಲ. ಒಂದೆಡೆ ಅಂತರ್ಜಲ ಕುಸಿತವೆಂದು ಜಿಲ್ಲಾಡಳಿತ ಬೊಬ್ಬೆ ಹೊಡೆಯುತ್ತಿದ್ದರೆ ಕಬ್ಬು, ಬಾಳೆ, ಅಡಿಕೆ ಬೆಳೆ ವಿಸ್ತೀರ್ಣಕ್ಕೆ ಇನ್ನೊಂದು ಇಲಾಖೆ ಕಾರ್ಯಕ್ರಮ ರೂಪಿಸುತ್ತದೆ. ಸಮಸ್ಯೆಯನ್ನು ಒಟ್ಟಾಗಿ ಚರ್ಚಿಸಿ, ಎದುರಿಸುವುದು ಆಡಳಿತ ಯಂತ್ರಕ್ಕೆ ಗೊತ್ತಿಲ್ಲ. ಸರಕಾರಕ್ಕೆ ಮಾದರಿಯ ಪಾಠ ಕಲಿಯುವ ಉತ್ಸಾಹವಿಲ್ಲ. ಇಲಾಖೆಗಳಿಗೆ ಸಂರಕ್ಷಣೆ, ಪುನಶ್ಚೇತನಗಳು ಹಣ ಖಾಲಿಯಾಗಿಸುವ ಕೆಲಸಗಳಾಗಿವೆಯೇ ವಿನಃ ಕಾಳಜಿಯಾಗಿಲ್ಲ.
ಅಚ್ಚರಿಯೆಂದರೆ, ಸಾರಾರು ಕೋಟಿ ಖರ್ಚು ಮಾಡುವ ಇಲಾಖೆಗಳಲ್ಲಿ ಇಂದಿಗೂ ಅಧಿಕಾರಿಗಳಿದ್ದಾರೆಯೇ ವಿನಃ ವಿಷಯ ತಜ್ಞರಿಲ್ಲ!
ನದಿ ಸಂರಕ್ಷಣೆಯ ಕಹಳೆ ಮೊಳಗಲಿರಾಜಸ್ಥಾನದ ಜೈಪುರ ಜಿಲ್ಲೆಯ ನಾಂಡುವಲಿ, ಸಕಟ್‌ವಾಲಿಯಾ ನದಿಗಳು ಕೇವಲ 500 ಮಿಲಿ ಮೀಟರ್ ಮಳೆ ಸುರಿಯುವಲ್ಲಿ ಪುನರುಜ್ಜೀವನಗೊಂಡ ಮಾತು ಕೇಳುತ್ತೇವೆ. 4000 ಮಿಲಿ ಮೀಟರ್ ಸುರಿಯುವ ಕರಾವಳಿ ನೆಲೆಯಲ್ಲಿ ನದಿ ಒಣಗುವ ಪರಿಸ್ಥಿತಿ ನಮ್ಮದಾಗಿದೆ. ಅಲ್ಲಿ ಸಾಧ್ಯವಾಗಿದ್ದು ಇಲ್ಲಿ ಏಕೆ ಆಗುತ್ತಿಲ್ಲ? ಪ್ರಶ್ನೆ ಮುಖ್ಯವಿದೆ. ಜನಮನಕ್ಕೆ, ಆಳುವ ಸರಕಾರಕ್ಕೆ ನದಿ ಕಣಿವೆಯನ್ನು ಸರಿಯಾಗಿ ನೋಡಲು ಕಲಿಸುವುದು ಸಂರಕ್ಷಣಾ ಆಂದೋಲನದ ಪ್ರಥಮ ಕೆಲಸವಾಗಬೇಕು. ನದಿ ಕಣಿವೆಗಳಲ್ಲಿ ಎಂಥ ಅರಣ್ಯ ಸಸ್ಯ ಬೆಳೆಸಬೇಕೆಂದು ಗೊತ್ತಿರಬೇಕು. ಕೋಲಾರದ ನದಿಗಳು 40 ವರ್ಷಗಳಲ್ಲಿ ಹೇಗೆ ಸಾವನ್ನಪ್ಪಿದವೆಂದು ನೆನಪಿಸಿಕೊಳ್ಳಬೇಕು. ನಂದಿ ಬೆಟ್ಟದಿಂದ ಹರಿಯುವ ಅರ್ಕಾವತಿ, ಪಾಲಾರ್, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ನದಿಗಳು ಕಾಡು, ಕಲ್ಲು, ಮರಳು ಕಳೆದುಕೊಳ್ಳುತ್ತ ಜೀವತ್ಯಾಗದ ಮಾಡಿದ ಕರುಣಕತೆ ಎಲ್ಲರಿಗೂ ಪಾಠವಾಗಬೇಕು. ಅವುಗಳ ಧಾರುಣ ಚಿತ್ರ ವಿಧಾನಸೌಧ , ಪಂಚತಾರಾ ಹೋಟೆಲ್, ರೆಸಾರ್ಟ್ ಗೋಡೆಯಲ್ಲಿ ಕಾಣಿಸಬೇಕು. ಸತ್ತ ನದಿಗಳ ಪಾಠ ನದಿ ಸಂರಕ್ಷಣೆಯ ಕಹಳೆಯಾಗಬೇಕು. ಮುಂದಿನ ಭಾಗ: ನದಿ ಸಂರಕ್ಷಣೆಗೆ ನಾವೇನು ಮಾಡೋಣ? – ಶಿವಾನಂದ ಕಳವೆ