Advertisement
ಜೂನ್ 8ರ ಬಳಿಕ ಜಿಲ್ಲೆಯಲ್ಲಿ ಹೊಟೇಲುಗಳು ಬಾಗಿಲು ತೆರೆದುಕೊಳ್ಳಲಿವೆ. ಸರಕಾರ ಈಗಾಗಲೇ 5.0 ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಿದೆ. ಹೊಟೇಲುಗಳು ಪುನಾರಂಭಕ್ಕೆ ಸಜ್ಜಾಗುತ್ತಿವೆ. ಲಾಕ್‌ಡೌನ್ ತೆರವಾದರೂ ಹೊಟೇಲ್‌ಗಳನ್ನು ಮತ್ತೆ ಪ್ರಾರಂಭ ಮಾಡುವುದು, ಮೊದಲಿನಂತೆ ವ್ಯಾಪಾರ ವಹಿವಾಟು ನಡೆಸುವುದು ಹೊಟೇಲು ಉದ್ಯಮಿಗಳಿಗೆ ದೊಡ್ಡ ಸವಾಲೇ ಆಗಿದೆ. ಕೆಲ ಹೊಟೇಲುಗಳು ಬಾಗಿಲು ತೆರೆಯುವುದು ಕೂಡ ಅನುಮಾನವಾಗಿದೆ.
ಉಡುಪಿ ನಗರದಲ್ಲಿ 4 ಸಾವಿರದಷ್ಟು ಹೊಟೇಲುಗಳಿವೆ. 25 ಸ್ಟಾರ್ ಹೊಟೇಲುಗಳಿವೆ. ಸಾಮಾನ್ಯ ಹೊಟೇಲುಗಳು, ಮಿನಿ ಕ್ಯಾಂಟೀನ್‌ಗಳು ಇವೆ. ಹೊಟೇಲುಗಳು, ಉಪಾಹಾರ ಮಂದಿರಗಳು ನಷ್ಟದ ಹಾದಿಯಲ್ಲಿವೆ. ಲಾಕ್‌ಡೌನ್ ತೆರವಾದರೂ ಹಲವು ಮಾಲಕರು ಹೊಟೇಲು ನಡೆಸುವ ಆಸಕ್ತಿ ಹೊಂದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತು ಊಟ ವಿತರಿಸುವುದು ಇಂತಹ ಹಲವು ಸವಾಲಿನ ನಡುವೆ ಮತ್ತೆ ಈ ಹಿಂದಿನಂತೆ ವ್ಯಾಪಾರ ನಡೆಸುವ ಯಾವುದೇ ಸಾಧ್ಯತೆ ಕಂಡು ಬರುತ್ತಿಲ್ಲ. ಚೇತರಿಸಿಕೊಳ್ಳುವ ಲಕ್ಷಣ ಕಾಣಿಸ್ತಿಲ್ಲ
ನಗರದಲ್ಲಿ ಬಹುತೇಕ ಹೊಟೇಲುಗಳು ಉಪಾಹಾರ ಮಂದಿರಗಳು ಬಾಡಿಗೆ ಕಟ್ಟಡದಲ್ಲಿವೆ. ವ್ಯಾಪಾರದಲ್ಲಿ ಪೈಪೋಟಿ ಕೂಡ ಇದೆ. ದುಬಾರಿ ಬಾಡಿಗೆ ಕೊಟ್ಟು ವ್ಯಾಪಾರ ನಡೆಸುವುದು ಈಗಿನ ಪರಿಸ್ಥಿತಿಯಲ್ಲಿ ಕಷ್ಟ. ಲಾಕ್‌ಡೌನ್ ತೆರವಿನ ಬಳಿಕವೂ ಗ್ರಾಹಕರು ಈ ಹಿಂದಿನಂತೆ ಬರುವುದು ಅನುಮಾನ. ಇದರಿಂದ ಬಾಡಿಗೆ ಕಟ್ಟಲು ಕೂಡ ಕಷ್ಟ. ಮುಚ್ಚಿದ ಹೊಟೇಲುಗಳನ್ನು ತೆರೆದು ಮತ್ತೆ ವ್ಯಾಪಾರ ಹಿಡಿಯುವುದು ಬಹುದೊಡ್ಡ ಸವಾಲಿನ ಕಾರ್ಯ ಎಂದು ನಗರದಲ್ಲಿ ಹೊಟೇಲು ನಡೆಸುತ್ತಿರುವ ರಾಮಚಂದ್ರ ಹೇಳುತ್ತಾರೆ.
Related Articles
ನಗರದ ಪ್ರತಿಷ್ಠಿತ ಹೊಟೇಲುಗಳು, ಸಾಮಾನ್ಯ ಹೊಟೇಲುಗಳು ನಗರ ಹಾಗೂ ಸುತ್ತಮುತ್ತ ನಡೆಯುವ ವಿವಿಧ ಶುಭ ಸಮಾರಂಭಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದವು. ಆನ್‌ಲೈನ್ ಮೂಲಕವು ಆಹಾರ ಬುಕ್ಕಿಂಗ್ ಮಾಡಿ ಪೂರೈಸುತ್ತಿದ್ದವು. ಅದಕ್ಕೆಲ್ಲ ಈಗ ಬ್ರೇಕ್ ಬಿದ್ದಿದೆ. ಸದ್ಯದ ಸ್ಥಿತಿ ನೋಡಿದರೆ ಹೊಟೇಲು ಉದ್ಯಮ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.
Advertisement
ಹಳ್ಳಿ ಬದುಕು ಇಂಗಿತ, ತವರು ಸೇರಿದ ವಲಸೆ ಕಾರ್ಮಿಕರು
ಹೊಟೇಲು ಆರಂಭಿಸಿದರೂ ಮುಖ್ಯವಾಗಿ ಅದಕ್ಕೆ ಅಡುಗೆ ಸಹಾಯಕರು ಹಾಗೂ ಸಿಬಂದಿ ಸಮಸ್ಯೆ ತೀವ್ರವಾಗಿ ಕಾಡಲಿದೆ. ಈಗಾಗಲೆ ಹೊರ ರಾಜ್ಯಗಳ ಸಿಬಂದಿ ಕೋವಿಡ್-19 ಭಯಕ್ಕೆ ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ. ಅವರು ಕನಿಷ್ಠ ಒಂದೆರಡು ವರ್ಷ ಮರಳಿ ಬರುವುದಿಲ್ಲ. ಸ್ಥಳಿಯವಾಗಿ ಅಡುಗೆಯವರು ಸಿಗುವುದಿಲ್ಲ. ಹಲವರು ಹಳ್ಳಿಗಳಲ್ಲಿ ಬದುಕು ಕಟ್ಟಿಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತಿರುವ ಕಾರಣ ಸಿಬಂದಿ ಕೊರತೆ ಕಾಣಿಸಿಕೊಳ್ಳಲಿದೆ ಎಂಬುದು ಹೊಟೇಲ್ ಉದ್ಯಮಿಗಳ ಅಭಿಪ್ರಾಯ. ಸದಾ ತುಂಬಿ ತುಳು ಕುತ್ತಿದ್ದ ನೂರಾರು ಹೊಟೇಲುಗಳು ಸದ್ಯಕ್ಕಂತೂ ಮೊದಲಿನಂತೆ ಕಾಣುವುದಕ್ಕೆ ವರ್ಷವೇ ಬೇಕಾಗಬಹುದು ಎಂಬ ಆತಂಕವೂ ಇದೆ. ಆರ್ಥಿಕ ವ್ಯವಸ್ಥೆ ಚೇತರಿಕೆ
ಬಸ್, ರೈಲು, ವಾಹನ ಸಂಚಾರ ಆರಂಭವಾಗಿರುವುದರಿಂದ ಹೊಟೇಲುಗಳ ತೆರೆದುಕೊಳ್ಳುವುದು ಈಗ ಅವಶ್ಯಕ. ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಹೊಟೇಲುಗಳಿದ್ದು, 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಇದನ್ನೆ ನೆಚ್ಚಿ ಬದುಕು ಸವೆಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಇವರು ಆದಾಯವಿಲ್ಲದೆ ಅತಂತ್ರರಾಗಿದ್ದಾರೆ. ಹೊಟೇಲುಗಳ ಮರು ಪ್ರಾರಂಭದಿಂದ ಆರ್ಥಿಕ ವ್ಯವಸ್ಥೆಯೂ ಚೇತರಿಕೆ ಕಾಣುವ ಸಾಧ್ಯತೆಯಿದೆ. ಕೇಂದ್ರ ಗೃಹ ಇಲಾಖೆ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸಿ, ಸಾಮಾಜಿಕ ಅಂತರದ ನಿಯಮ ಪಾಲಿಸಿಕೊಂಡು ಹೊಟೇಲುಗಳು ತೆರೆದುಕೊಳ್ಳಲಿವೆ. ಸುಲಭವಲ್ಲ
ಸರಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಜೂ. 8 ರಿಂದ ಹೊಟೇಲುಗಳನ್ನು ತೆರೆಯಲು ನಿರ್ಧರಿಸಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಕಷ್ಟ. ಹೊಟೇಲು ನಡೆಸುವುದು ಇನ್ನು ಮುಂದಕ್ಕೆ ಅಷ್ಟು ಸಲೀಸಲ್ಲ. ಕಾರ್ಮಿಕರ ಕೊರತೆ, ಗ್ರಾಹಕರ ಕೊರತೆ ಕಾಡುವ ಸಾಧ್ಯತೆಗಳು ದಟ್ಟವಾಗಿವೆ.
-ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷ, ಹೊಟೇಲು ಮಾಲಕರ ಸಂಘ ಉಡುಪಿ