ಹುಮನಾಬಾದ : ಬಾಗಿಲು ಮುಚ್ಚಿದ ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಏ. 21ರಂದು ಹೊಸ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಲ್ಲಿದ್ದು, ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಲಿರುವ ಬಿಜೆಪಿ ಹಿರಿಯ ಮುಖಂಡ ಸುಭಾಷ ಕಲ್ಲೂರ್ ಹತ್ತಾರು ವಿಘ್ನ ಎದುರಿಸಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲೇಬೇಕಾದ ಪ್ರಸಂಗ ಎದುರಾಗಿದೆ.
ಕಳೆದ ಏ. 6ರಂದು ಆಡಳಿತ ಮಂಡಳಿ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಸುಭಾಷ ಕಲ್ಲೂರ್ ಪೆನೆಲ್ ಜಯಗಳಿಸಿತ್ತು. ಇದೀಗ ನೂತನ ಅಧ್ಯಕ್ಷರಾಗಿ ಸುಭಾಷ ಕಲ್ಲೂರ್ ಆಯ್ಕೆಗೊಳ್ಳಲ್ಲಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಮಾಣಿಕಪ್ಪಾ ಖಾಶೆಂಪೂರೆ, ವಿಶ್ವನಾಥ ಪಾಟೀಲ, ಮಲ್ಲಿಕಾರ್ಜುನ ಮಾಟೀಲರ ಹೆಸರು ಕೇಳಿ ಬರುತ್ತಿವೆ. ಚುನಾವಣೆ ಮುಗಿದ ನಂತರ ಹೊಸ ಆಡಳಿತ ಮಂಡಳಿಗೆ ಹತ್ತಾರು ಸವಾಲುಗಳಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭವಾಗುತ್ತದೆ ಎಂದು ರೈತರು ನಂಬಿದ್ದರು.
ಆದರೆ, ರೈತರ ನಿರೀಕ್ಷೆ ಹುಸಿಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಸಂಸದರಾಗಲಿ ಮುಂದಾಗಿ ಸರ್ಕಾರದಿಂದ ಅನುದಾನ ತಂದು ಕಾರ್ಖಾನೆ ಪ್ರಾರಂಭಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ರೈತರು ಹಾಗೂ ಶಾಸಕ ರಾಜಶೇಖರ ಪಾಟೀಲರು ಅನೇಕ ಬಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಬಿಜೆಪಿಯವರೇ ಆಡಳಿತ ಮಂಡಳಿ ಅಧ್ಯಕ್ಷರಾಗುತ್ತಿದ್ದು, ಸರ್ಕಾರದ ಮನ ಹೇಗೆ ಒಪ್ಪಿಸಿ ಅನುದಾನ ತರುತ್ತಾರೆ ಎಂದು ನೌಕರರು ನಿರೀಕ್ಷೆಯಲಿದ್ದಾರೆ.
ಈ ಹಿಂದೆ ಅನುದಾನ ನೀಡುವಲ್ಲಿ ಹಿಂದೇಟ್ಟು ಹಾಕಿದ ಸರ್ಕಾರ, ಚುನಾವಣೆ ನಡೆಸದಂತೆ ತಡೆದ ಸರ್ಕಾರ ಕಾರ್ಖಾನೆ ಪ್ರಾರಂಭಕ್ಕೆ ಹೇಗೆ ಸ್ಪಂದಿಸುತ್ತದೆ ಎಂದು ಕಾದು ನೋಡಬೇಕಾಗಿದೆ. ಈ ಕುರಿತು ಸುಭಾಷ ಕಲ್ಲೂರ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ಗಮನ ಸೆಳೆದು ಕಾರ್ಖಾನೆ ಪ್ರಾರಂಭಕ್ಕೆ ಬೇಕಾದ ಅನುದಾನ ತರುತ್ತೇನೆ. ಪ್ರಾಮಾಣಿಕವಾಗಿ ಕಾರ್ಖಾನೆ ಪ್ರಾರಂಭಿಸುವ ಕೆಲಸ ಮಾಡುತ್ತೇನೆ. ಈ ಮೂಲಕ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ.
300 ಕೋಟಿ ಸಾಲ: ಸದ್ಯ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಮೇಲೆ ಸುಮಾರು 300 ಕೋಟಿಗೂ ಅಧಿಕ ಸಾಲದ ಹೊರೆಯಿದೆ. ಕಳೆದ ಕೆಲ ವರ್ಷಗಳಿಂದ ಹತ್ತಾರು ಕೋಟಿ ಕೇವಲ ಬಡ್ಡಿ ಪಾವತಿ ಮಾಡಬೇಕಾಗಿದೆ. ಒಂದು ಕೋಟಿಗೂ ಅಧಿಕ ವಿದ್ಯುತ್ ಬಿಲ್ ಇರುವ ಕಾರಣ ಕಾರ್ಖಾನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಸುಮಾರು 30 ಕೋಟಿಗೂ ಅಧಿಕ ಸಂಬಳ ಸೇರಿದಂತೆ ವಿವಿಧ ಸೌಲಭ್ಯಗಳು ಬಾಕಿ ಉಳಿದುಕೊಂಡಿವೆ. ಕಳೆದ ಕೆಲ ವರ್ಷಗಳಿಂದ ಕಾರ್ಖಾನೆ ಬಾಗಿಲು ಮುಚ್ಚಿದ ಕಾರಣ ಯಂತ್ರೋಪಕರಣ, ಪೀಠೊಪಕರಣ ಹಾಳಾಗಿವೆ. ಅವುಗಳ ದುರಸ್ತಿಗೆ ಕೋಟಿಗಳ ಲೆಕ್ಕದಲ್ಲಿ ಹಣದ ಅವಶ್ಯಕತೆಯಿದೆ.