Advertisement

ಸಿದ್ದುಗೆ “ಅನುದಾನ’ಹಂಚಿಕೆ ಸವಾಲು

11:16 PM Oct 13, 2019 | Team Udayavani |

ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಕ್ತ ಸವಾಲು ಮಾಡುವುದಾದರೆ ಮಾಡಲಿ. ನನ್ನದು ಕೂಡ ಮುಕ್ತ ಸವಾಲು ಆಗಿದ್ದು, ಯಾವ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ ಎಂಬುದನ್ನು ಅವರೇ ಹೇಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ರಾಜ್ಯಕ್ಕೆ ಹೆಚ್ಚು ಹಣ ಕೊಟ್ಟಿದ್ದಾರೆ ಎಂಬುದರ ಕುರಿತು ಸಿದ್ದರಾಮಯ್ಯಗೆ ಅಂಕಿ-ಅಂಶಗಳ ಮೂಲಕ ಉತ್ತರ ಕೊಡಿ ಎಂದಿದ್ದೆ.

Advertisement

ಆದರೆ, ಅವರಿಗೆ ಒಂದು ವೇದಿಕೆಯಲ್ಲಿಯೂ ಉತ್ತರ ನೀಡಲು ಸಾಧ್ಯವಾಗಿಲ್ಲ. ಇದು ವಾಸ್ತವ. ಇದನ್ನು ಯಾರಿಂದಲೂ ಬದಲಾವಣೆ ಮಾಡಲು ಆಗೋದಿಲ್ಲ ಎಂದರು. ಸಿದ್ದರಾಮಯ್ಯ ಅವರಿಗೆ ಜ್ಞಾಪಕ ಶಕ್ತಿ ಇದೆ ಎಂದುಕೊಂಡಿರುವೆ. ಆದರೆ, ಒಂದು ವೇಳೆ ಜ್ಞಾಪಕ ಶಕ್ತಿ ಇಲ್ಲವಾದರೆ ಕೇಂದ್ರ ಸರ್ಕಾರದ ಗೃಹ ಕಚೇರಿ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಅಥವಾ ರಾಜ್ಯ ಸರ್ಕಾರದ ಗೃಹ ಕಚೇರಿಯಲ್ಲಿ ಮಾಹಿತಿ ಸಿಗುತ್ತದೆ, ಪಡೆದುಕೊಳ್ಳಬೇಕು.

ನಂತರ, ಟೀಕೆ ಮಾಡಿದರೆ ಅವರ ಹಿರಿತನಕ್ಕೆ ಒಂದು ಗೌರವ ಬರಲಿದೆ ಎಂದರು. ಹತ್ತು ವರ್ಷದ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕ 44,542 ಕೋಟಿ ರೂ.ಅನುದಾನ ಕೇಳಿತ್ತು. ಆದರೆ, ಕೊಟ್ಟಿದ್ದು 4,462 ಕೋಟಿ ಮಾತ್ರ. ಸದ್ಯ ಕರ್ನಾಟಕ 27,208 ಕೋಟಿ ರೂ.ಕೇಳಿದ್ದು, ಆ ಪೈಕಿ ಈಗಿನ ಕೇಂದ್ರ ಸರ್ಕಾರ ಐದು ವರ್ಷದ ಅವಧಿಯಲ್ಲಿ 9,156 ಕೋಟಿ ರೂ.ನೀಡಿದೆ ಎಂದರು.

ಜನರ ಕಷ್ಟಕ್ಕೆ ಸ್ಪಂದಿಸದ ಎದೆ ಎಷ್ಟಿಂಚಿದ್ದರೇನು?: ಸಿದ್ದು
ಚಿಕ್ಕಮಗಳೂರು: “ನೂರು ಇಂಚು ಎದೆ ಇದ್ದರೆ ಉಪಯೋಗವಿಲ್ಲ. ಬಡವರು, ರೈತರ ಬಗ್ಗೆ ಕಾಳಜಿ, ಅನುಕಂಪ ಅದಕ್ಕೂ ಮಿಗಿಲಾಗಿ ತಾಯಿ ಹೃದಯ ಇರಬೇಕು’ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿಯವರು ಪದೇಪದೆ ತಮಗೆ 56 ಇಂಚಿನ ಎದೆ ಎಂದು ಹೇಳಿಕೊಳ್ಳುತ್ತಾರೆ.

ಎದೆ ಎಷ್ಟು ಇಂಚಿನದಾದರೆ ಏನು ಪ್ರಯೋಜನ. ಅವರಿಗೆ ಬಡವರು, ರೈತರ ಬಗ್ಗೆ ಕಾಳಜಿ ಇಲ್ಲ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದರೂ ಒಮ್ಮೆಯೂ ಭೇಟಿ ನೀಡಲಿಲ್ಲ. ಬಡವರು, ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಇಷ್ಟರೊಳಗೇ ಅವರು ಇಲ್ಲಿಗೆ ಭೇಟಿ ನೀಡಿ, ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು ಎಂದರು. ಬಿಜೆಪಿಯವರಿಗೆ ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಪ್ರಧಾನಿ ಮೋದಿಗೂ ಇಲ್ಲ.

Advertisement

ಅಮಿತ್‌ ಶಾ ಬಗ್ಗೆ ಹೇಳುವಂತೆಯೇ ಇಲ್ಲ, ಆರ್‌ಎಸ್‌ಎಸ್‌ಗೆ ಮೊದಲಿನಿಂದಲೂ ಇವುಗಳ ಬಗ್ಗೆ ಗೌರವವಿಲ್ಲ. ಇಂತಹವರಿಂದ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ಬಿಜೆಪಿಯವರು ಯಡಿಯೂರಪ್ಪ ಅವರನ್ನು ಒಲ್ಲದ ಮನಸ್ಸಿನಿಂದಲೇ ಸಿಎಂ ಮಾಡಿದ್ದಾರೆ. ಹಾಗಾಗಿಯೇ ರಾಜ್ಯಕ್ಕೆ ಕೇಂದ್ರದಿಂದ ಯಾವುದೇ ನೆರವು ದೊರೆಯುತ್ತಿಲ್ಲ. ಈ ಮಾತನ್ನು ನಾನು ಹೇಳುತ್ತಿಲ್ಲ. ಅವರದೇ ಪಕ್ಷದ ಕೇಂದ್ರದ ಮಾಜಿ ಸಚಿವ ಯತ್ನಾಳ್‌ ಹೇಳಿದ್ದಾರೆ. ಇನ್ನು ಈ ಬಗ್ಗೆ ನಾವೇನೂ ಹೇಳುವ ಅವಶ್ಯಕತೆ ಇಲ್ಲ ಎಂದರು.

ಸಿದ್ದರಾಮಯ್ಯನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ರಾಜಕಾರಣ ಮಾಡುವುದಕ್ಕೆ ಬೇರೆ ವಿಷಯಗಳು ಬಹಳ ಇವೆ. ಸಿದ್ದರಾಮಯ್ಯ ಹತ್ತು ಬಾರಿ ಬಜೆಟ್‌ ಮಂಡಿಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿ ಹಲವಾರು ಖಾತೆ ನಿಭಾಯಿಸಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈಗ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ಸಿದ್ದರಾಮಯ್ಯ ಟೀಕೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದು, ಒಳ್ಳೆಯ ಕೆಲಸಗಳನ್ನು ಅವರು ಹೇಳಬೇಕು. ಆದರೆ, ಬೆಳಗ್ಗೆಯಿಂದ ಸಂಜೆವರೆಗೆ ಟೀಕೆ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಅರ್ಥವಿಲ್ಲ. ಟೀಕೆ ಮೂಲಕ ಬರೀ ರಾಜಕಾರಣ ಮಾಡುತ್ತಿದ್ದಾರೆ ಅಷ್ಟೆ.
-ಜಗದೀಶ ಶೆಟ್ಟರ್‌, ಕೈಗಾರಿಕೆ ಸಚಿವ

ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಾರ್ಯ ಕೈಗೊಂಡಿದೆ. ಇದನ್ನು ಸಹಿಸಿಕೊಳ್ಳಲಾಗದೆ ಸಿದ್ದರಾಮಯ್ಯ ಆರೋಪ ಮಾಡುತ್ತ ಒಡಾಡುತ್ತಿದ್ದಾರೆ.
-ಶ್ರೀರಾಮುಲು, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next