ನಾವೆಲ್ಲ ಚಿತ್ರರಸಿಕರಾಗಿ ಚಿತ್ರಮಂದಿರಕ್ಕೆ ಹೋಗುತ್ತಿದ್ದಾಗ ಒಂದು ಜಾಗಕ್ಕೆ ಒಂದು ಸ್ಕ್ರೀನ್ ಇರೋದು, ಒಂದು ಸಮಯ ಇರೋದು.. ಮ್ಯಾಟ್ನಿ ಅಥವಾ ಮಾರ್ನಿಂಗ್ ಶೋ. ನಾವೆಲ್ಲ ಪ್ಲ್ರಾನ್ ಮಾಡಿಕೊಂಡು ಒಂದು ಗಂಟೆ ಮುಂಚೆನೇ ಹೋಗಿ ಹೌಸ್‌ಫುಲ್ ಆಗಬಾರದಪ್ಪ ಎಂದು ಪ್ರಾರ್ಥನೆ ಮಾಡಿ ಕ್ಯೂನಲ್ಲಿ ನಿಂತು ಟಿಕೆಟ್ ತಗೋತಾ ಇದ್ದೀವಿ. ಈಗ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದೆ. ಆ ಮೊಬೈಲ್‌ನಲ್ಲಿ ಲಕ್ಷಾಂತರ ವೀಡಿಯೋಗಳು… 30 ಸೆಕೆಂಡ್‌ಗಳಲ್ಲಿ ನಿಮಗೆ ಖುಷಿ ಕೊಡಬಲ್ಲ, ನಿಮ್ಮನ್ನು ಯೋಚನೆ ಹಚ್ಚುವಂತಹ ವೀಡಿಯೋಗಳು ನಿಮಗೆ ಸಿಗುತ್ತಿವೆ. ಅಷ್ಟೊಂದು ಆಯ್ಕೆಗಳಿರಬೇಕಾದರೆ, ಇಷ್ಟೊಂದು ತರಹ ಮನೋರಂಜನೆಗಳಿರಬೇಕಾದರೆ ದೂರದಲ್ಲಿ ಇರುವ ಥಿಯೇಟರ್‌ಗೆ ನಿಮ್ಮನ್ನು ಎಳೆದುಕೊಂಡು ಬಂದು, ನಿಮ್ಮ ಗಮನವನ್ನು ಎರಡೂವರೆ ಗಂಟೆ ಕಾಲ ಸೆಳೆಯಬಲ್ಲಂತಹ ಒಂದು ಕಥೆಯನ್ನು ಹೇಳುವುದೇ ಇವತ್ತು ಬಹಳ ದೊಡ್ಡ ಸವಾಲು.
ಎರಡನೇ ಸವಾಲು ಕನ್ನಡ ಚಿತ್ರಕ್ಕಿಂತ ಹತ್ತರಷ್ಟು ಪ್ರೊಡಕ್ಷನ್ ಬಜೆಟ್, ಮಾರ್ಕೆಂಟಿಂಗ್ ಬಜೆಟ್ ಇರುವಂತಹ ಬೇರೆ ಬೇರೆ ಭಾಷೆಯ ಚಿತ್ರಗಳ ಮುಂದೆ ಬರೀ ನಮ್ಮ ಐಡಿಯಾಗಳು, ಸೃಜನಶೀಲತೆಗಳು ನಮ್ಮ ಹತ್ತರಷ್ಟು ಬಜೆಟ್ ಇರುವವರ ಜತೆ ಗುದ್ದಾಡಬೇಕಾಗುತ್ತದೆ.
ಮೂರನೇ ಸವಾಲು ಸೋಶಿಯಲ್ ಮೀಡಿಯಾಕ್ಕೆ ಇರುವ ಅಪಾರವಾದ ಶಕ್ತಿಯಿಂದ ಬಹಳ ಸುಮಾರಾದ ಚಿತ್ರವನ್ನು ಕೂಡ ಬಹಳ ಅದ್ಭುತ ಚಿತ್ರ ಎಂದು ಜನ ಒಪ್ಪುವ ಹಾಗೆ ಒಂದು ಚಿತ್ರಣವನ್ನು ಸೃಷ್ಟಿ ಮಾಡಬಹುದಾದ ಕಾಲಘಟ್ಟದಲ್ಲಿದ್ದೀವಿ. ಹಾಗಾಗಿ ನಮ್ಮನ್ನು ನಾವೇ ಯಾಮಾರಿಸಿಕೊಳ್ಳುತ್ತಿದ್ದೀವಾ ಅಂತ ಅನ್ನಿಸುತ್ತಿದೆ. ಈಗ ನಾವೆಲ್ಲರೂ ಒಂದು ನೈಜ ಹಿಟ್, ಮನಸ್ಸಿನಿಂದ ರಸಿಕ ಒಪ್ಪುವಂತಹ, ಶಾಶ್ವತವಾಗಿ ಅವರ ಮನಸ್ಸಿನಲ್ಲಿ ಉಳಿಯುವಂತಹ ಚಿತ್ರವನ್ನು ಕೊಡಬೇಕು ಅನ್ನಿಸುತ್ತೆ. ನಮ್ಮ ಗಮನವೆಲ್ಲ ಒಂದು ಪ್ರಾಮಾಣಿಕವಾದ ಒಂದು ಹಿಟ್ ಕೊಡುವಂತ ಚಿತ್ರವನ್ನು ಮಾಡುವ ಕಡೆ ಹರಿಸಬೇಕಾಗಿದೆ. ಸದ್ಯಕ್ಕಂತೂ ಇಡೀ ಭಾರತದ ಗಮನವನ್ನು ಕನ್ನಡ ಚಿತ್ರರಂಗ ಸೆಳೆದಿದೆ. ಅಮೋಘವಾದ ಯಶಸ್ಸನ್ನು ನೋಡಿದ್ದೇವೆ. ಆದರೂ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಇನ್ನೂ ಒಳ್ಳೆಯ ರೀತಿಯಲ್ಲಿ, ಇನ್ನೂ ಕಡಿಮೆ ಸಮಯದಲ್ಲಿ, ಇನ್ನೂ ಸೃಜನಶೀಲವಾಗಿ, ಇನ್ನೂ ವೃತ್ತಿಪರವಾಗಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ನಾವೆಲ್ಲರೂ ಯೋಚನೆ ಮಾಡಬಹುದು.
ರಮೇಶ್ ಅರವಿಂದ್, ಚಿತ್ರನಟ