Advertisement

ಸರ್ಕಾರ ಪತನಕ್ಕೆ ಬಹಿರಂಗ ಸವಾಲ್‌

07:07 AM Dec 27, 2018 | |

ಸಂಪುಟ ಪುನಾರಚನೆ ಬೆನ್ನಲ್ಲೇ, ಸಚಿವ ಪದವಿ ವಂಚಿತರ ಅಸಮಾಧಾನದ ನಡುವೆ, ಮೈತ್ರಿ ಸರ್ಕಾರ ಉರುಳಿಸುವ ಕುರಿತು ಬಿಜೆಪಿ ಹಿರಿಯ ಶಾಸಕ ಉಮೇಶ್‌ ಕತ್ತಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನಡುವೆ ಸವಾಲು ಹಾಗೂ ಪ್ರತಿಸವಾಲು ನಡೆದಿದೆ. ಇದಕ್ಕೆ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಕೂಡ ಧ್ವನಿಗೂಡಿಸಿದ್ದು, ಈ ನಡುವೆ ಆಪರೇಷನ್‌ ಕಮಲದ ಅಗತ್ಯವಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

Advertisement

24 ತಾಸಲ್ಲಿ ಸಮ್ಮಿಶ್ರ ಸರ್ಕಾರ ಪತನ: ಕತ್ತಿ
ಬೆಳಗಾವಿ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರಕಾರ ಮುಂದಿನ 24 ಗಂಟೆಗಳಲ್ಲೇ ಪತನವಾಗಲಿದೆ. ಇನ್ನೊಂದು
ವಾರದಲ್ಲಿ ಬಿಜೆಪಿ ಸರಕಾರ ಅಸ್ವಿತ್ವಕ್ಕೆ ಬರಲಿದೆ ಎಂದು ಬಿಜೆಪಿ ಶಾಸಕ ಉಮೇಶ ಕತ್ತಿ ಹೊಸ ಬಾಂಬ್‌ ಸಿಡಿಸಿದ್ದಾರೆ. 

ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ. ಸಂಪುಟ ಪುನಾರಚನೆ ನಂತರ ಅಸಮಾಧಾನ ಇನ್ನಷ್ಟು ತೀವ್ರವಾಗಿದೆ. ಇದು ಸರಕಾರದ ಪತನಕ್ಕೆ ಕಾರಣವಾಗಲಿದೆ. ಕಾಂಗ್ರೆಸ್‌ನ 15 ಶಾಸಕರು ಈಗಾಗಲೇ ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ಈಗ ಯಾರ ಹೆಸರನ್ನೂ ಬಹಿರಂಗಪಡಿಸುವುದಿಲ್ಲ. ಈ ಶಾಸಕರು ತಾವಾಗಿಯೇ ಬಿಜೆಪಿ ಜೊತೆ
ಕೈಜೋಡಿಸಲಿದ್ದು, ಮುಂದಿನ ಒಂದು ವಾರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂದು ಹೇಳಿದರು.

ಸರಕಾರದ ಪತನದ ವಿಷಯವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಅವರು ನನಗೆ ತಾಕತ್ತಿನ ಸವಾಲು ಹಾಕಿದ್ದಾರೆ. ರಾಜಕೀಯದಲ್ಲಿ ಅವರು ನನಗಿಂತ ಕಿರಿಯರು. ಎಲ್ಲಿ, ಯಾವಾಗ ತಾಕತ್ತು ತೋರಿಸಬೇಕು ಎಂಬುದು ತಮಗೆ ಗೊತ್ತಿದೆ. ಒಂದು ವಾರದಲ್ಲಿ ಸರ್ಕಾರ ಬೀಳಿಸಿ, ನಮ್ಮ ತಾಕತ್ತು ಏನು ಎಂಬುದನ್ನು ತೋರಿಸುತ್ತೇವೆ. ನಾವು ಸರ್ಕಾರ ರಚಿಸಿದರೆ, ದಿನೇಶ್‌
ಗುಂಡೂರಾವ್‌ ತಮ್ಮ ಖಾತೆಗೆ ರಾಜೀನಾಮೆ ನೀಡುತ್ತಾರಾ ಎಂದು ತಿರುಗೇಟು ನೀಡಿದರು.

ರಮೇಶ ಜಾರಕಿಹೊಳಿ ನಮ್ಮಆತ್ಮೀಯ ಮಿತ್ರರು. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಆದರೆ, ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಜೊತೆ ಇದುವರೆಗೆ ರಮೇಶ ಜಾರಕಿಹೊಳಿ ಯಾವ ಸಭೆಯನ್ನೂ ನಡೆಸಿಲ್ಲ. ಬಿಜೆಪಿ ಸೇರ್ಪಡೆಯಾಗುವ ವಿಚಾರವಾಗಿ ರಮೇಶ ಜಾರಕಿಹೊಳಿಯವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿದರೆ ತಪ್ಪೇನಿಲ್ಲ ಎಂದರು.

Advertisement

ತಾಕತ್ತಿದ್ದರೆ ಸರ್ಕಾರ ಬೀಳಿಸಲಿ: ದಿನೇಶ್‌
ಬೆಂಗಳೂರು: ಉಮೇಶ್‌ ಕತ್ತಿ ಸವಾಲಿಗೆ ಪ್ರತಿ ಸವಾಲು ಹಾಕಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, 24 ಗಂಟೆಯಲ್ಲಿ ಸರ್ಕಾರ ಪತನವಾಗದಿದ್ದರೆ, ಉಮೇಶ್‌ ಕತ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ತಾಕತ್‌ ಇದ್ದರೆ ಸರ್ಕಾರವನ್ನು ಉರುಳಿಸಲಿ. 24 ಗಂಟೆಯಲ್ಲಿ ಸರ್ಕಾರ ಉರುಳಿಸಲು ಆಗದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬರಲಿ ಎಂದು ಸವಾಲು ಹಾಕಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಉಮೇಶ್‌ ಕತ್ತಿ ಹಿರಿಯ ಶಾಸಕರಾಗಿದ್ದು, ಅವರ ಹೇಳಿಕೆಗೆ ಏನಾದರೂ ದಾಖಲೆ ಇದೆಯಾ?. ಸುಮ್ಮನೆ ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿಸಲು ಈ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ. ಅವರು ಯಾವ ಆಧಾರದ ಮೇಲೆ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು,.

ಶೀಘ್ರ ಬಿಜೆಪಿ ಸರ್ಕಾರ ರಚನೆ: ಈಶ್ವರಪ್ಪ
ಬಾಗಲಕೋಟೆ/ವಿಜಯಪುರ: ರಾಜ್ಯ ಸಮ್ಮಿಶ್ರ ಸರ್ಕಾರ ಕೆಡವಲು ನಾವು ಆಪರೇಷನ್‌ ಮಾಡಬೇಕಿಲ್ಲ. ಸಚಿವ ಸ್ಥಾನ ವಂಚಿತರಿಂದ ಅಭದ್ರಗೊಂಡು ಶೀಘ್ರವೇ ತಾನಾಗಿಯೇ ಪತನವಾಗಲಿದೆ. ಅಲ್ಲದೆ ಕೆಲ ದಿನಗಳಲ್ಲಿ ಬಿಜೆಪಿ ಸರ್ಕಾರ ಅ ಧಿಕಾರಕ್ಕೆ ಬರಲಿದೆ ಎಂದು
ಮೇಲ್ಮನೆ ಸದಸ್ಯ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಬುಧವಾರ ವಿಜಯಪುರ ಜಿಲ್ಲೆಯ ಕಗ್ಗೊಡ ಗ್ರಾಮದಲ್ಲಿ ಸುದ್ದಿಗಾರರ
ಜತೆ ಮಾತನಾಡಿ, ಮೈತ್ರಿ ಸರ್ಕಾರ ರಚನೆ ಆದ ಬಳಿಕ ಸಚಿವ ಸ್ಥಾನಕ್ಕೆ ಕಿತ್ತಾಟ ನಡೆದಿದ್ದು, ಇದೀಗ ಖಾತೆ ಹಂಚಿಕೆಗೆ
ಕಿತ್ತಾಡಿಕೊಳ್ಳುತ್ತಿದ್ದಾರೆ. ಮತ್ತೂಂದೆಡೆ ಸಚಿವ ಸ್ಥಾನ ಸಿಗದ ಅತೃಪ್ತರಿಂದ ಈ ಸರ್ಕಾರ ತಾನಾಗಿಯೇ ಪತನವಾಗಲಿದೆ. ಈ ಅಪವಿತ್ರ
ಮೈತ್ರಿಯ ಸರ್ಕಾರ ಪತನವಾಗುತ್ತಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಆಪರೇಷನ್‌ ಕಮಲದ ಅಗತ್ಯವಿಲ್ಲ: ಬಿಎಸ್‌ವೈ
ಬೆಳಗಾವಿ/ಹುಬ್ಬಳ್ಳಿ: ರಾಜ್ಯದಲ್ಲಿ ನಮಗೆ “ಆಪರೇಷನ್‌ ಕಮಲ’ ಮಾಡುವ ಅವಶ್ಯಕತೆ ಇಲ್ಲ. ವಿರೋಧ ಪಕ್ಷದಲ್ಲೇ ಕುಳಿತುಕೊಳ್ಳಲು
ಸಿದ್ಧರಾಗಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತೂಮ್ಮೆ ಸ್ಪಷ್ಟಪಡಿಸಿದರು. ಸುದ್ದಿಗಾರರ ಜೊತೆ ಮಾತನಾಡಿ,
ಸರಕಾರ ರಚನೆ ಮಾಡುವ ಯಾವುದೇ ವಿಷಯ ಪ್ರಸ್ತಾಪ ಆಗಿಲ್ಲ ಎಂದರು. ಕಾಂಗ್ರೆಸ್‌ನ ಒಳಬೇಗುದಿ ಎಲ್ಲಿಯವರೆಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ ಎಂದರು. ಅಲ್ಲದೇ ರಮೇಶ ಜಾರಕಿಹೊಳಿಯನ್ನು ಭೇಟಿಯಾಗಲ್ಲ ಎಂದು ಇದೇ
ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ನಮ್ಮ ಜೊತೆ ಇದ್ದಾರೆ.
ಬಿಜೆಪಿಯವರು ಕಳೆದ ಆರು ತಿಂಗಳಿಂದ ಆಪರೇಷನ್‌ ಕಮಲದ ಮಾತು ಆಡುತ್ತಲೇ ಇದ್ದಾರೆ. ಯಾರೂ ಪಕ್ಷವನ್ನು ಬಿಡುವುದಿಲ್ಲ.

 ●ಸತೀಶ ಜಾರಕಿಹೊಳಿ, ಸಚಿವ
 

Advertisement

Udayavani is now on Telegram. Click here to join our channel and stay updated with the latest news.

Next