ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ “ವರ್ಕ್ ಫ್ರಮ್ ಹೋಮ್’ನಿಂದಾಗಿ ದೂರವಾಣಿ ಮತ್ತು ಅಂತರ್ಜಾಲದ ಬಳಕೆ ಕೂಡ ಪ್ರಸ್ತುತ ಅಗತ್ಯ ಸೇವೆಗಳಲ್ಲೊಂದಾಗಿದೆ. ಆದರೆ, ಆ ಸೇವೆ ಪೂರೈಸುವುದು ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ಸಿಬ್ಬಂದಿಗೆ ಸವಾಲಾಗಿದೆ.
ಒಂದೆಡೆ ಬಳಕೆ ಮತ್ತು ಬೇಡಿಕೆ ಹೆಚ್ಚಿದ್ದರಿಂದ ಸಂಪರ್ಕ ಜಾಲದ ಮೇಲೆ ಒತ್ತಡ ಬಿದ್ದಿದೆ. ಪರಿಣಾಮ ವೇಗ ಆಗಾಗ್ಗೆ ತುಸು ಕಡಿಮೆ ಆಗುತ್ತಿದೆ. ಈ ಸಂಬಂಧ ನಿತ್ಯ ನೂರಾರು ಕರೆಗಳು ನಿಗಮಕ್ಕೆ ಬರುತ್ತಿವೆ. ಮತ್ತೂಂದೆಡೆ ಕೇಬಲ್ ಅಳವಡಿಕೆ, ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವುದು, ಸಾಮರ್ಥ್ಯ ಹೆಚ್ಚಿಸುವುದು ಸೇರಿದಂತೆ ಹಲವು ಸೇವೆಗಳ ಅಗತ್ಯತೆ ಎಂದಿಗಿಂತ ಹೆಚ್ಚಿದೆ. ಈ ದೂರುಗಳನ್ನು ಪರಿಹರಿಸಲು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡುವುದು ಅನಿವಾರ್ಯ. ಆದರೆ, ಕೆಲವೆಡೆ ಪೊಲೀಸರು ಇದಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಅತ್ತ “ಕಂಪ್ಲೇಂಟ್ ಅಟೆಂಡ್’ ಮಾಡದಿದ್ದರೆ, ಗ್ರಾಹಕರು ಕರೆ ಮಾಡಿ, ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದು ಬಿಎಸ್‌ಎನ್‌ಎಲ್‌ಗೆ ತಲೆನೋವಾಗಿದೆ.
ಬೇಕಿವೆ ಇನ್ನಷ್ಟು ಸುರಕ್ಷತಾ ಕ್ರಮಗಳು: ನಗರದಲ್ಲೇ 3.60ಲಕ್ಷ ಲ್ಯಾಂಡ್‌ಲೈನ್‌ಗಳು, ಒಂದು ಲಕ್ಷ ಬ್ರಾಡ್ ಬ್ಯಾಂಡ್ ಸಂಪರ್ಕಗಳು ಹಾಗೂ 30 ಲಕ್ಷಕ್ಕೂ ಅಧಿಕ ಮೊಬೈಲ್ ಸಂಪರ್ಕ ಹೊಂದಿದ ಬಿಎಸ್‌ಎನ್‌ಎಲ್ ಗ್ರಾಹಕರಿದ್ದಾರೆ. ನಿತ್ಯ ನಗರದಲ್ಲೇ ಸಾವಿರಕ್ಕೂ ಅಧಿಕ ವಿವಿಧ ಪ್ರಕಾರದ ದೂರುಗಳು ಬರುತ್ತವೆ. ಕೆಲವು ಸಲ ಸೋಂಕಿತ ಅಥವಾ ಸೋಂಕು ಲಕ್ಷಣಗಳಿರುವ ಮತ್ತು ಕ್ವಾರಂಟೈನ್ ಆಗಿರುವ ಮನೆಗಳಿಂದಲೇ ದೂರುಗಳು ಬರುತ್ತಿವೆ. ಅವುಗಳನ್ನು ಸಮರ್ಪಕವಾಗಿ ಅಟೆಂಡ್ ಮಾಡಲು ಆಗುತ್ತಿಲ್ಲ. ಅಟೆಂಡ್ ಮಾಡಲು ಸಾಧ್ಯವಾದರೂ, ಆ ಸ್ಥಳಗಳಲ್ಲಿ ನಿಗಮದ ಸಿಬ್ಬಂದಿಯ ಸುರಕ್ಷತೆಗೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂಬ ಒತ್ತಾಯ ನಿಗಮದ ಸಿಬ್ಬಂದಿಯಿಂದ ಕೇಳಿಬರುತ್ತಿದೆ.
ಮನೆ ಮನೆಗೆ ಹೋಗಿ ಸಮಸ್ಯೆ ಬಗೆಹರಿಸಲು ಸ್ವಲ್ಪ ಮಟ್ಟಿನ ಸಮಸ್ಯೆಯಾಗುತ್ತಿದೆ. ಸರ್ಕಾರ ನೀಡಿರುವ ಪಾಸ್ ಮತ್ತು ಬಿಎಸ್‌ಎನ್‌ಎಲ್ ಶಿಫ್ಟ್ ಆಧಾರದಲ್ಲಿ ಸೇವೆಗಳನ್ನು ಸಲ್ಲಿಸುತ್ತಿದ್ದೇವೆ. ತಾಂತ್ರಿಕವಾಗಿ ಎಲ್ಲ ರೀತಿಯ ಸಮಸ್ಯೆಗಳನ್ನು ತಕ್ಷಣ ಸರಿಪಡಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ, ಬಿಎಸ್‌ಎನ್‌ಎಲ್ ಸೇವೆಯನ್ನೂ ಅಗತ್ಯ ಮತ್ತು ತುರ್ತು ಸೇವೆ ಎಂದು ಪರಿಗಣಿಸಿ, ಪಾಸುಗಳ ಸಂಖ್ಯೆ ಹೆಚ್ಚಿಸಬೇಕು. ಅಥವಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಬಿಗಿಯನ್ನು ತುಸು ಸಡಿಲಿಕೆ ಮಾಡುವ ಅವಶ್ಯಕತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪರಿಣಾಮಕಾರಿ ಸೇವೆಗೆ ಅಡ್ಡಿ : ವರ್ಕ್ ಫ್ರಮ್ ಹೋಮ್‌ನಿಂದಾಗಿ ಗ್ರಾಹಕರ ಬಳಕೆ ಮತ್ತು ಬೇಡಿಕೆ ಹೆಚ್ಚಿದೆ. ಈಗಿರುವ ಕಠಿಣ ಪರಿಸ್ಥಿತಿಯಲ್ಲೂ ಬಿಎಸ್‌ಎನ್‌ಎಲ್ ನೌಕರರು ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತಿದೆ. ಖಾಸಗಿ ಕಂಪನಿಗಳಿಗೆ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸುತ್ತಿದೆ. ಕೆಲವು ಪಾಸುಗಳನ್ನೂ ನೀಡಿದ್ದಾರೆ. ಇನ್ನು ಹಲವರಿಗೆ ಪಾಸುಗಳೇ ಇಲ್ಲ. ಅಲ್ಲಲ್ಲಿ ಕೆಲವು ನಿರ್ಬಂಧಗಳಿದ್ದು, ಇದರಿಂದ ಪರಿಣಾಮಕಾರಿ ಸೇವೆ ಸಲ್ಲಿಸಲು ಇದು ಅಡ್ಡಿಯಾಗುತ್ತದೆ. ಆದ್ದರಿಂದ ಅಗತ್ಯಸೇವೆಯಾಗಿ ಪರಿಗಣಿಸುವ ಅವಶ್ಯಕತೆ ಇದೆ ಎಂದು ಸಂಚಾರ ನಿಗಮ ಅಧಿಕಾರಿಗಳ ಸಂಘಟನೆ ವಲಯ ಕಾರ್ಯದರ್ಶಿ ಎಸ್.ಪಿ. ಜಗದಾಳೆ ಹೇಳಿದರು.