Advertisement
ನಂತರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಜಾಬ್ ಕಾರ್ಡ್ ಹಾಗೂ ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ಒದಗಿಸಲಾಗುತ್ತದೋ ಇಲ್ಲವೋ ಎಂಬುದನ್ನು ಅಲ್ಲಿದ್ದ ಮಹಿಳೆಯರಿಗೆ ವಿಚಾರಿಸಿ ಮಾಹಿತಿ ಪಡೆದರು. ಸರ್ಕಾರಿ ಪ್ರೌಢಶಾಲೆಗೆ ಭೇಟಿನೀಡಿ ಬಿಸಿ ಊಟದ ವ್ಯವಸ್ಥೆ ಪರಿಶೀಲಿಸಿದರು. ಪ್ರತಿದಿನ ಏನೇನು ಊಟ ನೀಡಲಾಗುತ್ತದೆ. ಬೇಳೆಯಲ್ಲಿ ಯಾವ ತರಕಾರಿ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಹಾಗೂ ವಾರದಲ್ಲಿ ಎಷ್ಟು ತರಕಾರಿ ಉಪಯೋಗಿಸಲಾಗಿದೆ ಎಂಬುದರ ಕುರಿತು ಲಿಖೀತ ಮಾಹಿತಿ ಸಲ್ಲಿಸಲು ಮುಖ್ಯಶಿಕ್ಷಕರಿಗೆ ಸೂಚಿಸಿದರು. ನಂತರ ಡಿಸೆಟಿಂಗ್ ಕೆಲಸ ನಡೆಯುತ್ತಿರುವ ಪರತಾಪೂರ ಕೆರೆಗೆ ಭೇಟಿ ನೀಡಿದಾಗ, ಕಾರ್ಮಿಕರು ನರೇಗಾದಲ್ಲಿ ಸಮಯಕ್ಕೆ ಸರಿಯಾಗಿ ಕೂಲಿ ನೀಡುತ್ತಿಲ್ಲ ಎಂಬುದನ್ನು ಗಮನಕ್ಕೆ ತಂದರು. ಶೀಘ್ರವಾಗಿ ಕೂಲಿ ಹಣ ನೀಡುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆಯುರ್ವೇದಿಕ್ ಆಸ್ಪತ್ರೆಗೆ ಭೇಟಿ ನೀಡಿ, ಭೂ ಸೇನಾ ನಿಗಮದ ಅಧಕಾರಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸುವಂತೆ ಆದೇಶ ಮಾಡಿದರು. ಗುರುಭವನ ಸಮೀಪದ ಅಲೆಮಾರಿ ಕುಟುಂಬಗಳಿಗೆ ಮನೆ ಒದಗಿಸಬೇಕು ಎಂದು ಸಂಬಂಧಿತರಿಗೆ ಸೂಚಿಸಿದರು. ಹಾಗೂ ಹಾಳಾದ ಗುರುಭವನ ಕಟ್ಟಡ ಕಾಮಗಾರಿ ದಶಕಗಳಿಂದ ನೆನಗುದಿಗೆ ಬಿದ್ದಿರುವುದನ್ನು ವೀಕ್ಷಿಸಿ ಸಲಹೆ ನೀಡಿದರು. 2009 ರಲ್ಲಿ ಪ್ರಾರಂಭವಾದ ಕರ್ನಾಟಕ ಕಸ್ತೂರಿಬಾ ಬಾಲಕೀಯರ ವಸತಿ ಕಟ್ಟಡ ಪೂರ್ಣಗೊಂಡಿಲ್ಲ ಮತ್ತು ವಿದ್ಯುತ್, ನೀರಿನ ವ್ಯವಸ್ಥೆ ಇರದೆ ಮೂಲ ಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಮಕ್ಕಳು ಇಲ್ಲ. ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗೆ ಸ್ಥಳದಲ್ಲೆ ಕರೆಸಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಪಿ.ಎಸ್.ಮಡೋಳಪ್ಪ ಉಪಸ್ಥಿತರಿದ್ದರು.