ಕೆರೂರ: ಬೀಳಗಿ ಮತಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ನಾನು ಬದ್ಧ. ಇದು ಚುನಾವಣೆ ಭರವಸೆ ಅಲ್ಲ. ಕ್ಷೇತ್ರದ ನಾಗರಿಕರಿಗೆ ನನ್ನ ಅಧಿಕಾರದ ಅವಧಿಯ ಕಾರ್ಯಗಳು ಹಾಗೂ ಮಾಡಬೇಕಾದ ಕಾರ್ಯಗಳ ಪಟ್ಟಿಯನ್ನು ಸದ್ಯ ಅರ್ಪಿಸುತ್ತೇನೆಂದು ಕೈಗಾರಿಕೆ ಸಚಿವ ಡಾ| ಮುರುಗೇಶ ನಿರಾಣಿ ಹೇಳಿದರು.
ಕೈನಕಟ್ಟಿ ಗ್ರಾಮದಲ್ಲಿ ನರೇನೂರ-ಫಕೀರ ಬೂದಿಹಾಳ-ಕೈನಕಟ್ಟಿ ಎಸ್‌ಎಚ್.44 ಕ್ಕೆ ಕೂಡುವ ಜಿಲ್ಲಾ ಮುಖ್ಯರಸ್ತೆ ಹಾಗೂ ಕೈನಕಟ್ಟಿ ಗ್ರಾಮದ ಪಪಂ ಕಾಲೋನಿ ಮತ್ತು ಬಸ್ ನಿಲ್ದಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
125 ಲಕ್ಷ ಎಕರೆ ಜಮೀನುಗಳನ್ನು ನೀರಾವರಿಗೊಳಪಡಿಸಿದ್ದು, ಕಾರ್ಯಪ್ರಗತಿಯಲ್ಲಿದೆ. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ರೈತರ ಭೂಮಿಗಳು ಹಸಿರಾಗಿ ಕಂಗೊಳಿಸುತ್ತವೆ. ರೈತರಿಗೆ ಎದುರಾಗುವ ವಿದ್ಯುತ್ ತೊಂದರೆಯನ್ನು ಸರಿಪಡಿಸಲಾಗುತ್ತಿದೆ. 320ಕೋಟಿ ರೂ ಅನುದಾನ ತಂದಿದ್ದು, ಹೊಸ ಸ್ಟೇಶನ್ ಹಳೆ ಸರ್ವಿಸ್ ತೆಗೆದು ಹೊಸ ತಂತಿ ಜೋಡಣೆ ಮಾಡಿ ಸಂಪರ್ಕ ಒದಗಿಸಲಾಗುವುದು. ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ 400ಕೋಟಿ ರೂ. ಖರ್ಚು ಮಾಡಲಾಗಿದೆ.
ಅಗತ್ಯವಿದ್ದರೆ ಹೆಚ್ಚು ಅನುದಾನ ತರುತ್ತೇನೆ. ಕ್ಷೇತ್ರದ ಅನೇಕ ಗುಡಿಗುಂಡಾರಗಳು ದುರಸ್ತಿ ಆಗಬೇಕಿದ್ದು, ಈಗ 400 ಗುಡಿಗಳನ್ನು ಗುರುತಿಶಿದ್ದು, ಈಗಾಗಲೆ 12 ಗುಡಿಗಳಿಗೆ ತಲಾ 20 ಲಕ್ಷ ರೂ ಕೊಡಲಾಗಿದೆ ಎಂದರು.
Related Articles
ಆತಂಕ ಬೇಡ; ಅತಿವೃಷ್ಟಿಯಿಂದ ಬಿದ್ದ ಮನೆಗಳಿಗೆ ಅಧಿಕಾರಿಗಳ ಅರ್ಹತಾ ಪಟ್ಟಿಯ ನಿರ್ಧಾರದಂತೆ 35 ಸಾವಿರದಿಂದ 5ಲಕ್ಷ ರೂ. ವರೆಗೆ ಮನೆ ಕಟ್ಟಿಕೊಳ್ಳಲು ಅವಕಾಶವಿದೆ. ಬಿದ್ದ ಮನೆಯ ಕುಟುಂಬದ ಪರಿಸ್ಥಿತಿಗೆ ಅನುಗುಣವಾಗಿ 24 ಗಂಟೆಯೊಳಗೆ 10 ಸಾವಿರ ರೂ. ತುರ್ತು ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗಿದ್ದು ನಾಗರಿಕರಿಗೆ ಆತಂಕ ಬೇಡ ಎಂದರು.
ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಪ್ರಗತಿಯಲ್ಲಿದೆ. ಗ್ರಾಮಗಳ ಪ್ರಗತಿಗೆ ಪ್ರತಿ ಗ್ರಾಮ ಪಂಚಾಯಿತಿಗೆ 1 ಕೋಟಿ ರೂ ಒದಗಿಸಲು ಬದ್ಧ. ನಾಗರಿಕರು ಮೂಲಭೂತ ಸೌಕರ್ಯದಲ್ಲಿ ಅಡೆತಡೆಯಾದರೆ ಗ್ರಾಪಂಗೆ ಅರ್ಜಿ ಸಲ್ಲಿಸಬೇಕು. ವಿಳಂಬವಾದರೆ ಗಮನಕ್ಕೆ ತರಬೇಕು. ತಕ್ಷಣ ಸರಿಪಡಿಸುತ್ತೇನೆ ಎಂದರು. ಪ್ರಯಾಣಿಕರಿಗೆ ತಂಗಲು ಬಸ್ ನಿಲ್ದಾಣದ ಅವಶ್ಯಕತೆಯಿದ್ದು, ಕ್ಷೇತ್ರಕ್ಕೆ 60 ಬಸ್ ನಿಲ್ದಾಣ ಮಂಜೂರಿ ಮಾಡಿಸಿದ್ದು, ಪ್ರತಿ ಗ್ರಾಮದ ಆಯಕಟ್ಟಿನ
ಸ್ಥಳಗಳಲ್ಲಿ ಬಸ್ ನಿಲ್ದಾಣ ನಿರ್ಮಿಶಿಕೊಳ್ಳಲು ಅವಕಾಶವಿದೆ. ಪ್ರತಿ ಬಸ್ ನಿಲ್ದಾಣಕ್ಕೆ 10ಲಕ್ಷ ರೂ. ಒದಗಿಸುತ್ತೇನೆ. ಕ್ಷೇತ್ರದ ಕೆರೆಗಳನ್ನು ತುಂಬುವುದಕ್ಕೆ 107ಕೋಟಿ ರೂ. ತರಲಾಗಿದೆ. ಕ್ಷೇತ್ರದಲ್ಲಿ ಹಲವಾರು ಯೋಜನೆ ಹಮ್ಮಿಕೊಂಡು ಕೆಲಸ ಮಾಡುತ್ತಿರುವ ನಾಗರಿಕರ ಸಹಕಾರ ಬೇಕು. ಕ್ಷೇತ್ರದ ಅಭಿವೃದ್ದಿಗೆ ಅನುದಾನ ಕೊಡಿಸುವುದಾಗಿ ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಹೂವಪ್ಪ ರಾಠೊಡ, ಹನಮಂತಗೌಡ ಪಾಟೀಲ (ಹೊಸಕೋಟಿ) ಭೀಮನಗೌಡ ಪಾಟೀಲ, ಎಚ್,ಎಸ್,ಪಾಟೀಲ, ಬಸವರಾಜ ಕೆರಕಲಮಟ್ಟಿ, ರಮೇಶ ಕುಂದರಗಿ, ಬಾದಾಮಿ ತಹಶೀಲ್ದಾರ್ ಜೆ,ಬಿ.ಮಜ್ಜಗಿ, ಉಪತಹಶೀಲ್ದಾರ್ ರಾಜಶೇಖರ ಸಾತಿಹಾಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ, ಅಶೋಕ ತಿರಕಣ್ಣವರ, ಎಮ್,ಎಮ್ ,ಕಟಗೇರಿ, ಹೆಸ್ಕಾಂದ ಉದಯಕುಮಾರ ಮಾಶಿ, ಎಸ್.ಜಿ. ಪರಸಣ್ಣವರ, ಮಹಿಬೂಬ ಹುಲ್ಲಿಕೇರಿ, ಶ್ರೀಕಾಂತ ಹಿರೇಗೌಡ್ರ, ಪಿಎಸ್‌ಐ ಶಿವಾನಂದ ಲಮಾಣಿ, ಗುತ್ತಿಗೆದಾರರಾದ ಯಶವಂತ ನಲವಡೆ, ಮಂಜುನಾತ ಡೆಂಗಿ ಮೊದಲಾದವರಿದ್ದರು.