Advertisement
ಏನಿದು ‘ಹಿಡಿ ಅಕ್ಕಿ’?ಜಮಾತ್ ಅಥವಾ ಮೊಹಲ್ಲಾದಲ್ಲಿರುವ ಪ್ರತೀ ಮನೆಯಿಂದಲೂ ಮಸೀದಿ/ಮದ್ರಸಗಳಿಗೆ ‘ಹಿಡಿ ಅಕ್ಕಿ’ ಕೊಡುತ್ತಿದ್ದರು. ಮನೆಯಲ್ಲಿ ನಿತ್ಯವೂ ಅನ್ನಕ್ಕೆ ನೀರಿಟ್ಟು, ಅಕ್ಕಿ ತೊಳೆಯುವ ಮೊದಲು ಒಂದು ಹಿಡಿ ಅಕ್ಕಿಯನ್ನು ಮಣ್ಣಿನ ಕುಡಿಕೆಯಲ್ಲಿ ಹಾಕಿ ಇಡುತ್ತಿದ್ದರು. ಹಿರಿಯರು ರೂಪಿಸಿದ್ದ ಈ ಸಂಪ್ರದಾಯ ಒಂದು ಶತಮಾನದಿಂದಲೂ ನಡೆದು ಬಂದಿದೆ. ಜನರೂ ಅನ್ನಕ್ಕೆ ಎಸರಿಡುವ ಮುನ್ನ ಚಾಚೂ ತಪ್ಪದೆ ಹಿಡಿ ಅಕ್ಕಿ ತೆಗೆದಿಡುತ್ತಿದ್ದರು. ತಿಂಗಳಿಗೊಮ್ಮೆ ಮಸೀದಿಯಿಂದ ಬರುವ ಮುಕ್ರಿ ಅದನ್ನು ಮನೆ ಮನೆಯಿಂದ ಸಂಗ್ರಹಿಸಿ, ಮಸೀದಿಗೆ ತಲುಪಿಸುತ್ತಿದ್ದರು.
Related Articles
ಅಂದಿನ ಕಾಲದಲ್ಲಿ ಬಡತನ ಇತ್ತು. ಮಸೀದಿ/ಮದ್ರಸಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬಂದಿಗೆ ಸಂಬಳ ನೀಡಲು ಹಣ ಇರುತ್ತಿರಲಿಲ್ಲ. ಬಹುತೇಕ ಮಸೀದಿಗಳಲ್ಲಿ ತಿಂಗಳಿಗೊಮ್ಮೆ ಸಂಗ್ರಹವಾದ ಅಕ್ಕಿಯನ್ನೇ ನೀಡುತ್ತಿದ್ದರು. ಅಕ್ಕಿಯೇ ಸಿಬಂದಿಯ ಮೂಲ ವರಮಾನವೂ ಆಗಿತ್ತು. ಅಲ್ಪಸ್ವಲ್ಪ ಆದಾಯ ಇರುವ ಮಸೀದಿಗಳಲ್ಲಿ ಅಕ್ಕಿಯನ್ನು ಏಲಂ ಮಾಡಿ ಅದರ ದುಡ್ಡನ್ನು ಸಿಬಂದಿಗೆ ನೀಡುತ್ತಿದ್ದರು. ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವ ಗುರುಗಳಿಗೂ ಅಕ್ಕಿಯೇ ವೇತನವಾಗಿತ್ತು. ಅಂದಿನ ಹಿರಿಯರು ಮಕ್ಕಳ ಶಿಕ್ಷಣಕ್ಕಾಗಿ ಅಕ್ಕಿಯನ್ನು ದಿನಂಪ್ರತಿ ಹಿಡಿ ರೂಪದಲ್ಲಿ ಸಂಗ್ರಹಿಸಿ ದಾನ ನೀಡಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲಿಸುವ ಉದ್ದೇಶವೂ ಇದರ ಹಿಂದಿತ್ತು.
Advertisement
ಸಂಪ್ರದಾಯ ಪುನಶ್ಚೇತನಗೊಳ್ಳಬೇಕಿದೆಇದು ಅತ್ಯಂತ ಹಳೆಯ ಸಂಪ್ರದಾಯ. ಹಿಡಿ ಅಕ್ಕಿ ಸಂಗ್ರಹದಿಂದಲೇ ಒಂದು ಮಸೀದಿಯಲ್ಲಿ ಇಬ್ಬರು ಸಿಬಂದಿಯನ್ನು ನೇಮಿಸಿ ಅದರಿಂದಲೇ ಅವರಿಗೆ ವೇತನವನ್ನು ನೀಡಲಾಗುತ್ತಿತ್ತು. ಶ್ರದ್ಧೆಯಿಂದ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದರು. ಕಾಲಕ್ರಮೇಣ ಸಮುದಾಯ ಆರ್ಥಿಕ ಸಬಲರಾದಂತೆ ಸಂಪ್ರದಾಯಕ್ಕೆ ಕೊನೆ ಹಾಡಲಾಯಿತು. ಈ ಸಂಪ್ರದಾಯ ರೆಂಜಲಾಡಿ ಬದ್ರಿಯಾ ಜಮಾತ್ ಕಮಿಟಿಯಲ್ಲಿ ಇನ್ನೂ ಜೀವಂತವಾಗಿದೆ. ಸಮಸ್ತದ ನಾಯಕರು ಸೇರಿ ಮಾಡಿರುವ ಈ ನಿಯಮವನ್ನು ಪುನಶ್ಚೇತನಗೊಳಿಸುವ ಜವಾಬ್ದಾರಿ ಯುವಜನತೆ ಮೇಲಿದೆ.
– ಹುಸೈನ್ ದಾರಿಮಿ ರೆಂಜಲಾಡಿ
ಧಾರ್ಮಿಕ ವಿದ್ವಾಂಸರು, ಪುತ್ತೂರು ಪ್ರವೀಣ್ ಚೆನ್ನಾವರ