Advertisement
ಜಾತಿ ಮತ್ತು ಪ್ರಾದೇಶಿಕತೆಯನ್ನು ಪ್ರಧಾನವಾಗಿ ಗಣನೆಗೆ ತೆಗೆದುಕೊಂಡರೂ ಅದರಲ್ಲೇ ಉತ್ತಮ ವರ್ಚಸ್ಸು, ದಕ್ಷತೆ, ಪ್ರಾಮಾಣಿಕ ಕಾರ್ಯ ನಿರ್ವಹಣೆ ಮೂಲಕ ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯ ಹೊಂದಿರುವವರಿಗೆ ಆದ್ಯತೆ ನೀಡಲು ಚಿಂತನೆ ನಡೆಸಿದೆ. ಜತೆಗೆ ಆಡಳಿತ ಯಂತ್ರಕ್ಕೂ ಚುರುಕು ಮುಟ್ಟಿಸುವತ್ತಲೂ ಗಮನ ಹರಿಸಿದೆ.
Related Articles
Advertisement
ಸಮುದಾಯ, ಪ್ರಾದೇಶಿಕತೆ ಆದ್ಯತೆ ಮುಖ್ಯ: ಲಿಂಗಾಯತ ಸಮುದಾಯ ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಅದರಲ್ಲೂ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿದೆ. ಚುನಾವಣೆಗಳು, ರಾಜಕೀಯ ಪ್ರಹಸನ ಸಂದರ್ಭದಲ್ಲೂ ಇದೇ ಸಮುದಾಯ ಗಟ್ಟಿಯಾಗಿ ಬಿಜೆಪಿ ಪರ ಅದರಲ್ಲೂ ಯಡಿಯೂರಪ್ಪ ಅವರ ಬೆನ್ನಿಗಿದೆ. ಹಾಗಾಗಿ ಸಂಪುಟದಲ್ಲಿ ಲಿಂಗಾಯತ ಪ್ರಾಧಾನ್ಯತೆ ಹೆಚ್ಚಿರಲಿದ್ದು, 7-8 ಸಚಿವ ಸ್ಥಾನ ನೀಡಿದರೂ ಅಚ್ಚರಿ ಇಲ್ಲ ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ ಬಿಜೆಪಿಗೆ ಭದ್ರ ನೆಲೆಯಿದ್ದರೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಇನ್ನೂ ಉತ್ತಮ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿಯೇ ಸರ್ಕಾರ ರಚನೆಗೆ ನಿರ್ಣಾಯಕವಾದ 10-15 ಶಾಸಕರ ಕೊರತೆಯಿಂದ ಬಿಜೆಪಿ ಈವರೆಗೆ ಸ್ವಂತಬಲದಲ್ಲಿ ಸರಳ ಬಹುಮತದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಅಲ್ಲದೇ ರಾಜೀನಾಮೆ ನೀಡಿ ಅನರ್ಹಗೊಂಡವರಲ್ಲೂ ನಾಲ್ಕು ಮಂದಿ ಒಕ್ಕಲಿಗ ಶಾಸಕರಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರ ಸಂಪುಟದಲ್ಲೂ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ಸಿಗುವ ನಿರೀಕ್ಷೆ ಇದೆ.
ಪರಿಶಿಷ್ಟ ಶಾಸಕರಿಗೂ ಒತ್ತು: ಇನ್ನು ರಾಜ್ಯ ವಿಧಾನಸಭೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾದ 53 ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿ 17 ಹಾಗೂ ಪರಿಶಿಷ್ಟ ಪಂಗಡದ 6 ಶಾಸಕರು ಆಯ್ಕೆಯಾಗಿದ್ದು, ಒಟ್ಟು 23 ಮಂದಿ ಬಿಜೆಪಿ ಶಾಸಕರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಐದು ಪರಿಶಿಷ್ಟ ಜಾತಿ ಹಾಗೂ ಎರಡು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲೂ ಬಿಜೆಪಿ ಜಯ ಗಳಿಸಿದ್ದು, ಎಲ್ಲ ಮೀಸಲು ಕ್ಷೇತ್ರದಲ್ಲೂ ಕಮಲ ಪಕ್ಷ ಗೆದ್ದಿದೆ. ಈ ಹಿಂದೆ ಕಾಂಗ್ರೆಸ್‌ನ ಪ್ರಮುಖ ಮತ ಬ್ಯಾಂಕ್ ಎನಿಸಿದ್ದ ಪರಿಶಿಷ್ಟ ಜಾತಿ, ಪಂಗಡದವರ ಕ್ರಮೇಣ ಬಿಜೆಪಿಯತ್ತ ಮುಖ ಮಾಡಿದಂತೆ ಸದ್ಯ ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗಾಗಿ ಈ ಸಮುದಾಯಗಳ ಶಾಸಕರಿಗೂ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕಿದೆ ಎಂದು ಮೂಲಗಳು ಹೇಳಿವೆ.
ಜನಪರ ಆಡಳಿತ ಮೊದಲ ಆದ್ಯತೆ: ಜನಪರ ಆಡಳಿತ ಬಿಜೆಪಿಯ ಮೊದಲ ಆದ್ಯತೆ. 3 ತಿಂಗಳೊಳಗೆ ಹೊಸ ಬಜೆಟ್ ಮಂಡಿಸಿ ಜನರ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಲಾಗುವುದು. ಸಮತೋಲಿತ ಸಂಪುಟವೂ ರಚನೆಯಾಗಲಿದೆ. ಜಾತಿ, ಪ್ರಾದೇಶಿಕತೆ, ಸಂಘಟನೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ರಚಿಸಲಾಗುವುದು. ಕೇಂದ್ರ ಸರ್ಕಾರದ ಯಶಸ್ವಿ ಪ್ರಯೋಗಗಳನ್ನು ಸಾಧ್ಯವಾದಷ್ಟು ಅನುಷ್ಠಾನಗೊಳಿಸಲು ಒತ್ತು ನೀಡಲಾಗುವುದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.
ಆಡಳಿತ ಯಂತ್ರಕ್ಕೆ ಚುರುಕು: ಮೈತ್ರಿ ಸರ್ಕಾರದ ನಾಯಕರಲ್ಲಿ ಆಂತರಿಕ ಕಲಹ, ಶಾಸಕರಲ್ಲಿ ಅತೃಪ್ತಿಯಿಂದಾಗಿ ಆಡಳಿತ ಯಂತ್ರ ಸ್ಥಗಿತವಾಗಿದೆ ಎಂದು ಬಿಜೆಪಿ ನಿರಂತರವಾಗಿ ಆರೋಪಿಸುತ್ತಾ ಬಂದಿತ್ತು. ಇದೀಗ ಬಿಜೆಪಿಯೇ ಅಧಿಕಾರದಲ್ಲಿದ್ದು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕಿದೆ. ಅಧಿವೇಶನ ಮುಗಿಯುತ್ತಿದ್ದಂತೆ ಸಂಭಾವ್ಯ ಸಚಿವರ ಪಟ್ಟಿಗೆ ವರಿಷ್ಠರ ಅನುಮತಿ ಪಡೆದು ಶೀಘ್ರವಾಗಿ ಸಂಪುಟ ರಚನೆಗೆ ಒತ್ತು ನೀಡಲಾಗುತ್ತದೆ. ದೈನಂದಿನ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯುವ ಜತೆಗೆ ಬರಪೀಡಿತ ಪ್ರದೇಶಗಳ ಜನರ ಸಮಸ್ಯೆ ನಿವಾರಣೆಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆದಿದೆ ಎಂದು ತಿಳಿಸಿವೆ.
* ಎಂ. ಕೀರ್ತಿಪ್ರಸಾದ್