Advertisement

ಕೇಂದ್ರ ಸರ್ಕಾರ ವಚನ ಭ್ರಷ್ಟವಾಗದಿರಲಿ

12:09 PM Dec 03, 2018 | |

ವಿಜಯಪುರ: ಹಿಂದೂಗಳ ಹಿತರಕ್ಷಣೆಗಾಗಿಯೇ ಕೇಂದ್ರದಲ್ಲಿ ನಮ್ಮದೇ ಸರ್ಕಾರಕ್ಕೆ ಅಧಿಕಾರ ನೀಡಿದ್ದು, ರಾಮಮಂದಿರ ನಿರ್ಮಾಣದ ವಿಷಯದಲ್ಲಿ ಆಡಳಿತ ಸರ್ಕಾರ ವಚನ ಭ್ರಷ್ಟವಾಗದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಬೇಕು. ಇದಕ್ಕಾಗಿ ವಿಶೇಷ ಕಾನೂನು ಜಾರಿಗೆ ತರಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹಕ್ಕೊತ್ತಾಯ ಮಂಡಿಸಿದರು.

Advertisement

ಭಾನುವಾರ ನಗರದ ಶಿವಾಜಿ ವೃತ್ತದಲ್ಲಿ ನಡೆದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಕ್ಕೊತ್ತಾಯಕ್ಕಾಗಿ ಜನಾಗ್ರಹ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಎಂದರೆ ಅದು ಹಿಂದೂಗಳ ಭವ್ಯ ರಾಷ್ಟ್ರೀಯತೆಯ ಪುನರ್‌ ನಿರ್ಮಾಣವೂ ಹೌದು. ಆದರೆ ನ್ಯಾಯಾಲಯದ ಮೂಲಕ ಹಿಂದೂ ಸಮಾಜವನ್ನು ಕಟ್ಟಿ ಹಾಕುವ ಷಡ್ಯಂತ್ರಗಳು ಮಾತ್ರ ನಿರಂತರ ನಡೆಯುತ್ತಲೇ ಇದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧಿಶರಾಗಿದ್ದ ದೀಪಕ ಮಿಶ್ರಾ ರಾಮ ಮಂದಿರ ನಿರ್ಮಾಣದ ಪರವಾಗಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಮಹಾಭಿಯೋಗ ಬೆದರಿಕೆ ಹಾಕಿ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಅತ್ಯಾಧುನಿಕ ರಾಡಾರ್‌ ತಂತ್ರಜ್ಞಾನ ಬಳಸಿ ಜರ್ಮನ್‌ ತಂತ್ರಜ್ಞರು ಹಾಗೂ ಭಾರತೀಯ ಪುರಾತತ್ವ ಇಲಾಖೆ ಹಿಂದೂ-ಮುಸ್ಲಿಂ ಎರಡೂ ಧರ್ಮಗಳ ಸಮ್ಮುಖದಲ್ಲಿ ಉತ್ಖನನ ನಡೆಸಿದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಇದ್ದ ಬಗ್ಗೆ ಅವಶೇಷ ಪತ್ತೆಯಾಗಿದ್ದರೂ ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಅನಗತ್ಯ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎದರು. 

ರಾಮ ಮಂದಿರ ನಾಶ ಮಾಡಿ ಮಸೀದಿ ನಿರ್ಮಿಸಿದ್ದು, ಪ್ರತಿರೋಧ ತೋರಿದ ಹಿಂದೂ ಯುವಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಇದು ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡಕ್ಕಿಂತೂ ಘೋರವಾದ ಕೃತ್ಯ. ರಾಮಮಂದಿರ ನಿರ್ಮಾಣಕ್ಕಾಗಿ ಲಕ್ಷಾಂತರ ಜನರು ಶತಮಾನಗಳಿಂದ ಹೋರಾಟ ನಡೆಸಿ ರಕ್ತ ಹರಿಸಿದ್ದಾರೆ. ಈಗ ಬಲಿದಾನದ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತೇನೆ. ಒಂದು ವೇಳೆ ಅವಶ್ಯಕತೆ ಇದ್ದರೂ ಸಹ ಬಲಿದಾನಕ್ಕೂ ಸಿದ್ಧ ಎಂದು ಗುಡುಗಿದರು.

ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿಯೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಾಗಿದೆ. ರಾಮ ಮಂದಿರ ನಿರ್ಮಾಣ ಮಾತ್ರವಲ್ಲ, ಗೋಹತ್ಯೆ ನಿಷೇಧ ಮಾಡುವ ಜೊತೆಗೆ ಗೋ ಹಂತಕರಿಗೆ ಗಲ್ಲು ಶಿಕ್ಷೆ ಕಾಯ್ದೆ ಜಾರಿಯ ವಿಷಯದಲ್ಲಿ ಈ ಸರ್ಕಾರ ವಚನಭ್ರಷ್ಟತೆ ಮೆರೆಯದು ಎಂಬ ವಿಶ್ವಾಸವಿದೆ ಎಂದರು.  

Advertisement

ಇದೇ ವೇಳೆ ಸ್ಥಳದಲ್ಲಿದ್ದ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಿಂದೂಗಳ ಧಾರ್ಮಿಕ ಹಕ್ಕು. ಈ ಕುರಿತು ಇರುವ ಎಲ್ಲ ತೊಡಕುಗಳನ್ನು ನಿವಾರಿಸಿ ಕೇಂದ್ರ ಸರ್ಕಾರ ವಿಶೇಷ ಕಾನೂನು ಜಾರಿಗೆ ತರಬೇಕು. ಮುಸ್ಲಿಂ ಸಮಾಜ ಕೂಡ ಸ್ವಇಚ್ಛೆಯಿಂದ ಹಿಂದೂ ಸಮಾಜಕ್ಕೆ ರಾಮಜನ್ಮಭೂಮಿ ಸ್ಥಳವನ್ನು ನೀಡುವ ಮೂಲಕ ವಚನ ಪಾಲನೆ ಮಾಡಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ನೀಡಿರುವ ಪ್ರಮಾಣಪತ್ರದಂತೆ ನಡೆದುಕೊಳ್ಳಬೇಕು. ಈ ಸ್ಥಳದಲ್ಲಿ ಯಾವುದೇ ಮಸೀದಿ ಸೇರಿದಂತೆ ಇಸ್ಲಾಮಿಕ್‌ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಡಾ| ಮಹಾದೇವ ಶ್ರೀಗಳು, ಕೆಸರಟ್ಟಿಯ ಸೋಮಲಿಂಗ ಶ್ರೀಗಳು, ಯೋಗೇಶ್ವರಿ ಮಾತಾಜಿ, ಜ್ಞಾನಯೋಗಾಶ್ರಮದ ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮೇಲ್ಮನೆ ಸದಸ್ಯ ಅರುಣ ಶಹಾಪೂರ, ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸಯ್ಯ ಹಿರೇಮಠ, ವಿಜಗೌಡ ಪಾಟೀಲ, ಚಂದ್ರಶೇಖರ ಕವಟಗಿ, ರಾಜಶೇಖರ ಮಗಿಮಠ, ಕೃಷ್ಣಾ ಗುನ್ಹಾಳಕರ, ಶೀವರುದ್ರ ಬಾಗಲಕೋಟ, ಪ್ರಕಾಶ ಅಕ್ಕಲಕೋಟ ಇತರರು ಉಪಸ್ಥಿತರಿದ್ದರು. 

ಮತಾಂತರದಿಂದ ಶಬರಿಮಲೆ ವಿವಾದ ಸೃಷ್ಟಿ ಶಬರಿಮಲೆಯ ಅಯ್ಯಪ್ಪ ಭಕ್ತರ ಆತ್ಮಸ್ಥೈರ್ಯ ಕುಗ್ಗಿಸುವ ವಿವಾದ ಸೃಷ್ಟಿಯ ಹಿಂದೆ ಅಂತಾರಾಷ್ಟ್ರೀಯ ಮತಾಂತರಿಗಳ ಷಡ್ಯಂತ್ರದ ಪಿತೂರಿ ಇದೆ. ಶಬರಿಮಲೆಯ ಅಯ್ಯಪ್ಪ ದೇವಸ್ಥಾನ ಪ್ರವೇಶದ ವಿವಾದದ ಹಿಂದೆ ಮತಾಂತರಿ ಕ್ರಿಶ್ಚಿಯನ್‌ ತೃಪ್ತಿ ದೇಸಾಯಿ ಇರುವುದೇ ಇದಕ್ಕೆ ಜೀವಂತ ಸಾಕ್ಷಿ.
 ಕೇಶವ ಹೆಗಡೆ, ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ, ವಿಎಚ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next