ಬೆಂಗಳೂರು: ರಾಜ್ಯದ ಅಕ್ರಮ ಗಣಿಗಾರಿಕೆ ಪ್ರಕರಣಗಳ ಸಂಬಂಧ ಇದುವರೆಗೂ ನಡೆಸಿರುವ ತನಿಖೆಯ ಸಂಬಂಧ ಲೋಕಾಯುಕ್ತ ವಿಶೇಷ ತನಿಖಾ ತಂಡ ಸುಪ್ರೀಂಕೋರ್ಟ್‌ಗೆ ಮಧ್ಯಂತರ ತನಿಖಾ ವರದಿಯನ್ನು ಸಲ್ಲಿಸಿದೆ.
ಸುಪ್ರೀಂಕೋರ್ಟ್ ನೀಡಿದ್ದ ಮೂರು ತಿಂಗಳ ಕಾಲವಕಾಶ ಹಿನ್ನೆಲೆಯಲ್ಲಿ, ಜಂತಕಲ್ ಅಕ್ರಮ ಗಣಿ ಪ್ರಕರಣ ಸೇರಿದಂತೆ ಮತ್ತಿತರ ಪ್ರಕರಣಗಳಲ್ಲಿ ಇದುವರೆಗೂ ನಡೆಸಿದ ವರದಿಯನ್ನು ಸಲ್ಲಿಸಲಾಗಿದೆ. ಹಿರಿಯ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಬಂಧನ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ವಿಚಾರಣೆ ಅಗತ್ಯತೆ, ಇದುವರೆಗೂ ವಿಚಾರಣೆಗೆ ಒಳಪಟ್ಟ ಅಧಿಕಾರಿಗಳ ಹೇಳಿಕೆಗಳು, ಸಾಕ್ಷ್ಯಾ ಸಂಗ್ರಹ, ಇತರೆ ಪ್ರಕರಣಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಜೊತೆಗೆ ಗಣಿ ಹಗರಣ ಪ್ರಕರಣಗಳಲ್ಲಿ ಮುಂದಿನ ದಿನಗಳಲ್ಲಿ ವಿಚಾರಣೆಗೊಳಪಡಿಸುವ ಹಿರಿಯ ಐಎಎಸ್ ಅಧಿಕಾರಿಗಳ ಹೆಸರನ್ನೂ ಸೇರಿಸಲಾಗಿದೆ. ಎಲ್ಲಾ ಪ್ರಕರಣಗಳ ಸಂಪೂರ್ಣ ತನಿಖೆಗೆ ಮೂರ್‍ನಾಲ್ಕು ತಿಂಗಳ ಕಾಲವಕಾಶ ವಿಸ್ತರಿಸುವಂತೆ ಮನವಿ ಮಾಡಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಮತ್ತೂಂದೆಡೆ ಗಣಿ ಪ್ರಕರಣಗಳಲ್ಲಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್, ಐಎಎಸ್ ಅಧಿಕಾರಿಗಳಾದ ಶಂಕರ ಲಿಂಗಯ್ಯ, ಅಯ್ಯರ್ ಪೆರುಮಾಳ್, ಜೀಜಾ ಹರಿಸಿಂಗ್ ಸೇರಿದಂತೆ ಹಲವು ಅಧಿಕಾರಿಗಳಿಗೂ ನೋಟೀಸ್ ನೀಡುವ ಸಾಧ್ಯತೆಯಿದ್ದು, ಅಗತ್ಯಬಿದ್ದರೆ ವಿಚಾರಣೆಗೊಳಪಡಿಸಲು ತೀರ್ಮಾನಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ಅಧಿಕಾರಿಗಳು.
ಮತ್ತೂಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪ ಮಾಡಿದ್ದ ಗಾಲಿ ಜನಾರ್ಧನ ರೆಡ್ಡಿ, ಈ ಹಿಂದೆ ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆ ಮಾಡಿದ್ದ ಬ್ಲಿರ್ ವಿಡಿಯೋವನ್ನೇ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.