ದಾವಣಗೆರೆ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಜ. 20 ರಂದು ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ 11ಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಪ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ನಡೆಸಿ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಠೊರ ಕಾಯ್ದೆಗಳ ಮೂಲಕ ದೇಶದ ಲಕ್ಷಾಂತರ ರೈತರು ಮತ್ತು ಕಾರ್ಮಿಕರ ಮರಣ ಶಾಸನ ಬರೆಯಹೊರಟಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ಜಾರಿಯಿಂದ ಲಕ್ಷಾಂತರ ರೈತರು, ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ರೈತ, ಕಾರ್ಮಿಕ ವಿರೋಧಿ ನೀತಿ ರದ್ದುಪಡಿಸಬೇಕು. ಅಲ್ಲಿಯವರೆಗೆ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಪಂಜಾಬ್, ಹರಿಯಾಣ, ಉತ್ತರಪ್ರದೇಶದ ರೈತರು ಕಳೆದ 53 ದಿನಗಳಿಂದ ನಿರಂತರವಾಗಿ ಕೊರೆಯುವ ಚಳಿಯಲ್ಲಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿದೆ. ರಾಜ್ಯದಲ್ಲೂ ರೈತರ ಪರ ಹೋರಾಟಕ್ಕೆ ಬೆಂಬಲಿಸಿ ಬುಧವಾರ ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ರೈತರು ದೇಶದ ಬೆನ್ನೆಲುಬು. ಆವರು ಇಲ್ಲದೇ ಹೋದರೆ ಯಾರು, ಏನೂ ಇಲ್ಲ. ಅಂತಹ ಆನ್ನದಾತರಿಗೆ ಮೋದಿ ಸರ್ಕಾರದಲ್ಲಿ ರಕ್ಷಣೆಯೇ ಇಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರವಧಿಯಲ್ಲಿ 72 ಸಾವಿರ ಕೋಟಿಯಷ್ಟು ಸಾಲ ಮನ್ನಾ ಮಾಡುವ ಮೂಲಕ 4 ಕೋಟಿ ರೈತ ಕುಟುಂಬಗಳಿಗೆ ನೆರವು ನೀಡಲಾಗಿತ್ತು. ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ಕನಿಷ್ಠ ಬೆಂಬಲ ಬೆಲೆ ನೀಡಲಿಲ್ಲ. ರೈತರಿಗೆ ವಿರುದ್ಧವಾಗಿ ಕರಾಳ ಕಾಯ್ದೆ ಜಾರಿಗೆ ತರುವ ಮೂಲಕ ಅಂಬಾನಿ, ಅದಾನಿಯಂತಹವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ದೂರಿದರು. ತಾವು ಅಧಿಕಾರಕ್ಕೆ ಬಂದಲ್ಲಿ ವರ್ಷಕ್ಕೆ 2 ಕೋಟಿ ಜನರಿಗೆ ಉದ್ಯೋಗ ಒದಗಿಸುವ ಬಗ್ಗೆ ಮೋದಿ ಭರವಸೆ ನೀಡಿದ್ದರು.
7 ವರ್ಷದಲ್ಲಿ 14 ಕೋಟಿ ಉದ್ಯೋಗ ನೀಡಬೇಕಿತ್ತು. ಉದ್ಯೋಗ ನೀಡಲಿಕ್ಕೂ ಆಗದೆ ಕರಾಳ ಶಾಸನಗಳ ಮೂಲಕ ರೈತರು, ಕಾರ್ಮಿಕರನ್ನು ಬೀದಿಗೆ ತಳ್ಳುವ ಕೆಲಸ ಮಾಡಲಾಗುತ್ತಿದೆ. ಏಕಾಏಕಿ ಕೆಲಸ ಕಳೆದುಕೊಂಡವರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಕೃಷಿಗೆ ಮಾರಕವಾದ ಕಾಯ್ದೆ ಹಿಂಪಡೆಯದಿದ್ದರೆ ರೈತರ ದಂಗೆ ಖಚಿತ : ಸರಕಾರಕ್ಕೆ ಸಿದ್ದು ಎಚ್ಚರಿಕೆ
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಸುಳಿವು ದೊರೆಯುತ್ತಿದ್ದಂತೆ ಪುಲ್ವಾಮ, ಸರ್ಜಿಕಲ್ ದಾಳಿ ಮೂಲಕ ಜನರ ದಿಕ್ಕು ತಪ್ಪಿಸಲಾಯಿತು. ಮೋದಿ ಆವರ ಸರ್ವಾಧಿಕಾರಿ ಧೋರಣೆ ಬಹಳ ದಿನನಡೆಯುವುದಿಲ್ಲ. ಕೊನೆಗೆ ಆದೇ ಅವರ ಆವನತಿಗೆ ಕಾರಣವಾಗುತ್ತದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ದಾವಣಗೆರೆಯ 1,500- 2 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಅಬ್ದುಲ್ ಜಬ್ಟಾರ್, ಮಾಜಿ ಶಾಸಕ ಎಚ್.ಪಿ. ರಾಜೇಶ್, ಜಿಪಂ ಸದಸ್ಯರಾದ ಕೆ.ಎಸ್. ಬಸವಂತಪ್ಪ, ಕೆ.ಎಚ್. ಓಬಳಪ್ಪ, ದಿನೇಶ್ ಕೆ. ಶೆಟ್ಟಿ, ಎ. ನಾಗರಾಜ್, ಅನಿತಾಬಾಯಿ, ಡಾ| ವೈ. ರಾಮಪ್ಪ, ಬಿ.ಎಚ್. ವೀರಭದ್ರಪ್ಪ ಇತರರು ಇದ್ದರು.