Advertisement

ಮೀಸಲಾತಿ ತೆಗೆಯಲು ಕೇಂದ್ರದ ಹುನ್ನಾರ ಮಾಡುತ್ತಿದೆ : ಯು.ಟಿ ಖಾದರ್

07:26 PM Mar 07, 2021 | Team Udayavani |

ಬೀದರ್ : ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣ ಮಾಡುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ ಹಕ್ಕಾಗಿರುವ ಮೀಸಲಾತಿಯನ್ನು ರದ್ದು ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಆರೋಪಿಸಿದರು.

Advertisement

ನಗರದ ರಂಗ ಮಂದಿರದಲ್ಲಿ ರವಿವಾರ ಸಂವಿಧಾನ ಸಂರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಹಾಗೂ ಪ್ರಗತಿಪರ ಚಿಂತಕ ಬಸವರಾಜ ಮಾಳಗೆ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಂವಿಧಾನದ ಪ್ರಕಾರ ಮೀಸಲಾತಿಯನ್ನು ನೇರವಾಗಿ ರದ್ದುಗೊಳಿಸುವುದು ಆಗುವುದಿಲ್ಲ. ಹಾಗಾಗಿ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ವಹಿಸಿ ಪರೋಕ್ಷವಾಗಿ ಮೀಸಲಾತಿ ತೆಗೆಯಲು ಹೊರಟಿದೆ. ಸಾರ್ವಜನಿಕ ವಲಯ ಗಳನ್ನು ರಾಷ್ಟ್ರೀಕರಣ ಮಾಡಿದವರನ್ನು ರಾಷ್ಟ್ರ ದ್ರೋಹಿ, ಖಾಸಗೀಕರಣ ಮಾಡಿದವರನ್ನು ರಾಷ್ಟ್ರ ಪ್ರೇಮಿ ಎಂದು ಕರೆಯಲಾಗುತ್ತಿದೆ ಎಂದರು.

ಆಡಳಿತ ನಡೆಸುವ ಸರ್ಕಾರಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಂಡಲ್ಲಿ ಮಾತ್ರ ದೇಶ ನೆಮ್ಮದಿಯಿಂದ ಮುನ್ನಡೆಯಲು ಸಾಧ್ಯ. ವ್ಯಕ್ತಿ ಬದುಕಬೇಕಾದರೆ ಉಸಿರು ಅಗತ್ಯ ಇರುವಂತೆ ಭಾರತ ಬದುಕಬೇಕಾದರೆ ಸಂವಿಧಾನದ ಆಶಯ ಮತ್ತು ಜಾತ್ಯಾತೀತತೆ ಉಳಿಸಿ ಬೆಳೆಸುವುದು ಅಗತ್ಯ ಇದೆ. ಸಂವಿಧಾನ ಸಂರಕ್ಷಣೆ ಅಭಿಯಾನ ರಾಜ್ಯಾದ್ಯಂತ ವಿಸ್ತರಣೆ ಆಗಲಿ ಎಂದು ಸಲಹೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಭಾರತದ ಸಂವಿಧಾನವೇ ಪವಿತ್ರ ಗ್ರಂಥವಾಗಿದ್ದು, ಯಾರಿಂದಲೂ ಸಂವಿಧಾನವನ್ನು ದುರ್ಬಲ ಮಾಡಲು ಸಾಧ್ಯವಿಲ್ಲ. ಗ್ರಾ.ಪಂ ಸದಸ್ಯರಿಂದ ಲೋಕಸಭಾ ಸದಸ್ಯರು ಸಂವಿಧಾನವನ್ನು ಯಾವ ರೀತಿ ಎತ್ತಿ ಹಿಡಿಯುತ್ತಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದರ ಆಶಯಗಳಿಗೆ ವಿರುದ್ಧ ನಡೆದುಕೊಳ್ಳುವವರನ್ನು ಬುಡ ಸಮೇತ ಕಿತ್ತು ಹಾಕಿ, ಜನರ ಪರ ಕೆಲಸ ಮಾಡುವವರನ್ನು ಆಯ್ಕೆ ಮಾಡಬೇಕು. ಆಗ ಸಂವಿಧಾನಕ್ಕೆ ಧಕ್ಕೆ ಆಗುವ ಅನಿವಾರ್ಯತೆಯೇ ಬರುವುದಿಲ್ಲ ಎಂದು ಹೇಳಿದರು.

ಸ್ವಾತಂತ್ರ್ಯ ನಂತರ ಭಾರತ ಅಭಿವೃದ್ಧಿ ಸಾಧಿಸಿದರೆ ನಮ್ಮ ಸಂವಿಧಾನ ಮತ್ತು ಅದರ ಆಶಯಗಳನ್ನು ಅನುಷ್ಠಾನಗೊಳಿಸುತ್ತ ಬಂದಿರುವ ಕಾಂಗ್ರೆಸ್ ಪಕ್ಷವೇ ಕಾರಣ. ಜನ ಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಕಾಂಗ್ರೆಸ್ ಪ್ರತಿ ಕ್ಷೇತ್ರದಲ್ಲಿ ರಾಷ್ಟ್ರ ಪ್ರಗತಿ ಸಾಧಿಸಲು ದೊಡ್ಡ ಕೊಡುಗೆಯನ್ನು ನೀಡಿದೆ. ಆದರೆ, ಮೊನ್ನೆ ಅಧಿಕಾರಕ್ಕೆ ಬಂದವರು (ಬಿಜೆಪಿ) ಎಲ್ಲವನ್ನೂ ನಾವೇ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.

Advertisement

ಕೇಂದ್ರ ಬಿಜೆಪಿ ಸರ್ಕಾರ ಅಚ್ಛೇ ದಿನ ಹೆಸರಲ್ಲಿ ಜನರನ್ನು ಮರಳು ಮಾಡುತ್ತ ಬಂದಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಘೋಷಿಸುತ್ತಾರೆ ಮತ್ತೊಂದೆಡೆ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿ, ಸಾರ್ವಜನಿಕ ವಲಯದ ಉದ್ಯಮಿಗಳನ್ನು ಖಾಸಗೀಕರಣ ಮಾಡುವ ಮೂಲಕ ಕೇಂದ್ರ ಸರ್ಕಾರ ದೇಶದ ಜನರನ್ನು ಮತ್ತೆ ಗುಲಾಮಗಿರಿಗೆ ತಳ್ಳುತ್ತಿದೆ. ಸರ್ಕಾರದ ಸರ್ವಾಧೀಕರಣ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಹೋರಾಟದ ಮೂಲಕವೇ ಈ ಅನ್ಯಾಯಗಳನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಶಾಸಕ ರಹೀಮ್ ಖಾನ್, ಮಾಜಿ ಶಾಸಕ ಮಾರುತಿರಾವ ಮೂಳೆ, ಎಲ್‌ಐಸಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕಾ. ಎಂ. ರವಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ, ಸಮಿತಿ ಅಧ್ಯಕ್ಷ ಅಬ್ದುಲ್ ಮನ್ನಾನ ಸೇಠ್, ಪ್ರಮುಖರಾದ ಆನಂದ ದೇವಪ್ಪಾ, ರಮೇಶ ಡಾಕುಳಗಿ, ಬಾಬುರಾವ್ ಪಾಸ್ವಾನ್, ನಾರಾಯಣ ಗಣೇಶ ಮತ್ತಿತರರು ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಅಮೃತರಾವ ಚಿಮಕೋಡ ಸ್ವಾಗತಿಸಿ ಅಶೋಕಕುಮಾರ ಮಾಳಗೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next