ಬೆಂಗಳೂರು: ಉಪ ನಗರ ರೈಲು ಯೋಜನೆಗೆ 17 ಸಾವಿರ ಕೋಟಿ ರೂ. ನೀಡಿದ್ದೇವೆಂದು ಹೇಳಿರುವ ಕೇಂದ್ರ ಸರ್ಕಾರ ಕೇವಲ ಒಂದು ಕೋಟಿ ರೂ. ಮಂಜೂರು ಮಾಡುವ ಮೂಲಕ ಕನ್ನಡಿಗರ ಮೂಗಿಗೆ ತುಪ್ಪ ಸವರಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಆರಂಭಿಸಿರುವ ಯೋಜನೆಯ ಲಾಭ ಪಡೆಯಲು ಬಜೆಟ್‌ನಲ್ಲಿ ಘೋಷಣೆ ಮಾಡಿ ಹಣ ಬಿಡುಗಡೆ ಮಾಡದೇ ಕರ್ನಾಟಕವನ್ನು ನಿರ್ಲಕ್ಷಿಸಿ ಕನ್ನಡಿಗರಿಗೆ ಅವಮಾನ ಮಾಡಿದೆ ಎಂದು ದೂರಿದರು.
ರಾಜ್ಯದ ಯೋಜನೆ: ಉಪ ನಗರ ರೈಲು ಯೋಜನೆ ಆರಂಭಿಸುವ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ನೈರುತ್ಯ ರೈಲ್ವೆ ಜತೆ ಸೇರಿ, ರೈಟ್ಸ್ ಸಂಸ್ಥೆ ಮೂಲಕ ಸಮೀಕ್ಷೆ ನಡೆಸಿದೆ. ಅದರಂತೆ ಯೋಜನೆಗೆ 10,929 ಕೋಟಿ ರೂ. ಯೋಜನಾ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಹಾಗೇ ಯೋಜನೆಗಾಗಿ ಕಳೆದ ಬಜೆಟ್‌ನಲ್ಲಿ 345 ಕೋಟಿ ರೂ. ಮೀಸಲಿಟ್ಟಿರುವ ರಾಜ್ಯ ಸರ್ಕಾರ, ಈ ಬಾರಿಯೂ 350 ಕೋಟಿ ರೂ. ಮೀಸಲಿಡಲು ತೀರ್ಮಾನಿಸಿದೆ.
ಮೊದಲ ಹಂತದಲ್ಲಿ ರಾಜ್ಯ ಸರ್ಕಾರ 700 ಕೋಟಿ ರೂ. ನೀಟಲು ಸಿದ್ಧವಿದೆ. ಅದೇ ರೀತಿ 50:50ರ ಅನುಪಾತದಲ್ಲಿ ಕೇಂದ್ರ ಕೂಡ 700 ಕೋಟಿ ರೂ. ಬಿಡುಗಡೆ ಮಾಡಬೇಕು. ಆದರೆ, ಬಜೆಟ್‌ನಲ್ಲಿ 17 ಸಾವಿರ ಕೋಟಿ ರೂ. ಘೋಷಿಸಿ ಪ್ರಚಾರ ಪಡೆದ ಮೋದಿ ಸರ್ಕಾರ, ಈಗ ಕೇವಲ ಒಂದು ಕೋಟಿ ರೂ. ಮೀಸಲಿಟ್ಟು ರಾಜ್ಯದ ಜನರನ್ನು ಮೂರ್ಖರನ್ನಾಗಿಸಿದೆ ಎಂದು ದೂರಿದರು.
ಹಣ ನೀಡುವುದಾಗಿ ಸುಳ್ಳು ಹೇಳಿಕೆ: ಹಾಗೇ, “ರಾಜ್ಯ ಸರ್ಕಾರ ಬಯಸಿದರೆ ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ಹಣ ನೀಡುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುಳ್ಳು ಹೇಳಿದ್ದಾರೆ. ಬೆಳ್ಳಂದೂರು ಮತ್ತು ವರ್ತೂರು ಕೆರೆ ಅಭಿವೃದ್ಧಿಗೆ 559 ಕೋಟಿ ರೂ. ಪ್ರಸ್ತಾವನೆಯನ್ನು 2016ರ ಜನವರಿಯಲ್ಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿತ್ತು.
ಆದರೆ ತನ್ನಲ್ಲಿ ಹಣದ ಕೊರತೆ ಇರುವುದರಿಂದ ರಾಜ್ಯ ಸರ್ಕಾರವೇ ವೆಚ್ಚ ಭರಿಸಿಕೊಳ್ಳಬೇಕು ಎಂಧು ಅದೇ ವರ್ಷ ಫೆಬ್ರವರಿಯಲ್ಲಿ ಕೇಂದ್ರ ಪ್ರತಿಕ್ರಿಯಿಸಿದೆ,’ ಎಂದು ಆರೋಪಿಸಿದ ಸಚಿವ ಕೃಷ್ಣಭೈರೇಗೌಡ, ಈ ಕುರಿತು ನಡೆದ ಪತ್ರ ವ್ಯವಹಾರದ ದಾಖಲೆ ಬಿಡುಗಡೆ ಮಾಡಿದರು.
ಈ ಬೆಳವಣಿಗೆಯಿಂದಾಗಿ ಕೇಂದ್ರವನ್ನು ನಂಬಿಕೊಳ್ಳದೆ, ರಾಜ್ಯ ಸರ್ಕಾರ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಈಗಾಗಲೇ ತಾತ್ಕಾಲಿಕವಾಗಿ 50 ಕೋಟಿ ರೂ. ಮೀಸಲಿಟ್ಟಿದೆ. ಅಲ್ಲದೆ ಬೆಳ್ಳಂದೂರು ಕೆರೆ ಸೇರುವ ತ್ಯಾಜ್ಯ ನೀರು ಸಂಸ್ಕರಣೆಗೆ 1388 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದೆ. 2020ರ ವೇಳೆಗೆ ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ಬೆಂಗಳೂರು ದೇಶದ ಮೊದಲ ನಗರವಾಗಲಿದೆ ಎಂದು ಹೇಳಿದರು.