ಹುಬ್ಬಳ್ಳಿ: ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಫಾರ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಟೆಕ್ನಾಲಜಿ (ಸಿಪೆಟ್)ಸಂಸ್ಥೆಯನ್ನು ಈ ಭಾಗದಲ್ಲಿ ಸ್ಥಾಪಿಸಲು ಕೇಂದ್ರ ಸರಕಾರ ಸಿದ್ಧವಿದ್ದು, ಇದಕ್ಕೆ ಬೇಕಾದ ಸುಮಾರು 45 ಎಕರೆ ಜಮೀನು ರಾಜ್ಯ ಸರಕಾರದಿಂದ ಕೊಡಿಸುವ ಪ್ರಯತ್ನಗಳು ನಡೆಯಬೇಕು ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 89ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನವೀಕೃತ ಸಭಾಗೃಹ ಮತ್ತು ಆಡಳಿತ ಕಚೇರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಿದ್ದು, ಬೆಂಗಳೂರು-ಹುಬ್ಬಳ್ಳಿ-ಮುಂಬೈಗೆ ಸಾಕಷ್ಟು ಬೇಡಿಕೆಯಿದೆ.
ವಿಮಾನಯಾನ ಸಚಿವರನ್ನು ಭೇಟಿಯಾಗಿ ಇದಕ್ಕೆ ಅವಕಾಶ ಪಡೆಯುತ್ತೇನೆ. ಬೆಳಗಾವಿಯಿಂದ ಮುಂಬೈಗೆ ಒಂದು ವಿಮಾನದ ಸಮಯ ದೊರೆತಿದೆ. ಅದೇ ಸಮಯವನ್ನು ಬೆಂಗಳೂರು- ಹುಬ್ಬಳ್ಳಿ- ಬೆಳಗಾವಿ- ಮುಂಬೈಗೆ ನೀಡುವಂತೆ ಮನವಿ ಮಾಡುತ್ತೇನೆ.
1200 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಜಾಜೂರು-ಬೆಂಗಳೂರು ರೈಲ್ವೆ ಜೋಡಿ ಮಾರ್ಗದಲ್ಲಿ ವಿದ್ಯುದ್ದೀಕರಣ ಕೈಗೊಳ್ಳುವಂತೆ ರೈಲ್ವೆ ಸಚಿವ ಪಿಯೂಶ್ ಗೋಯಲ್‌ರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಹು-ಧಾ ಅಭಿವೃದ್ಧಿಗೆ ಕೇಂದ್ರ ಸರಕಾರ 10 ಸಾವಿರ ಕೋಟಿ ರೂ. ನೀಡಿದೆ.
ಆದರೆ ಕಾಮಗಾರಿಗಳನ್ನು ಗುತ್ತಿಗೆ ಪಡೆದವರೆಲ್ಲಾ ಹೊರ ರಾಜ್ಯದವರು. ಪರಿಸ್ಥಿತಿ ಹೀಗಿರುವಾಗ ಸ್ಥಳೀಯವಾಗಿ ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾಗುವುದಿಲ್ಲ. ಇದನ್ನು ಕೆಸಿಸಿಐ ಗಂಭೀರವಾಗಿ ಪರಿಗಣಿಸಿ ಔದ್ಯೋಗಿಕ ಸಾಮರ್ಥ್ಯ ನಿರ್ಮಿಸಲು ಶ್ರಮ ವಹಿಸಬೇಕು ಎಂದರು.
ಉದ್ಯಮಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಸ್ಥಳೀಯ ಉದ್ಯಮಿಗಳಾದ ಮುರಾರಿ ಎಸ್.ಬಿಡಸಾರಿಯಾ, ಜಿತೇಂದ್ರ ಮಜೇಥಿಯಾ, ವಿಜಯಪುರದ ರಾಜೇಂದ್ರ ತಾಳಿಕೋಟೆ, ಕಲಬುರಗಿಯ ರವೀಂದ್ರ ದೇವರಮನಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಸಂಸ್ಥಾಪನ ದಿನಾಚರಣೆ ಪ್ರಯುಕ್ತ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಸಂಸದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಮಹಾಪೌರ ಡಿ.ಕೆ.ಚವ್ಹಾಣ, ಮಾಜಿ ಸಂಸದ ಐ.ಜಿ. ಸನದಿ, ಕೆಸಿಸಿಐ ಅಧ್ಯಕ್ಷ ರಮೇಶ ಪಾಟೀಲ, ಉಪಾಧ್ಯಕ್ಷ ಎಸ್.ಜಿ. ಕೆಮತೂರ, ಶಿವಶಂಕರಪ್ಪ ಮೂಗಬಸ್ತ, ಶರಣಬಸಯ್ಯ ಕದ್ರಳ್ಳಿಮಠ, ಸಿದ್ದೇಶ್ವರ ಕಮ್ಮಾರ, ವಿನಯ ಜವಳಿ, ಎಂ.ವಿ. ಕರಮರಿ ಇತರರಿದ್ದರು.