ಶಿವಮೊಗ್ಗ: ಕೇಂದ್ರ ಸರ್ಕಾರ ಪೆಟ್ರೋಲ್- ಡೀಸೆಲ್, ಎಲ್‌ಪಿಜಿ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ತಳ್ಳುಗಾಡಿಗಳ ಮೇಲೆ ದ್ವಿಚಕ್ರವಾಹನಗಳನ್ನಿಟ್ಟು ಜಿಲ್ಲಾಧಿಕಾರಿ ಕಚೇರಿ ಎದುರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ದೈನಂದಿನ ಬೆಲೆ ಪರಿಷ್ಕರಣೆ ಜಾರಿಗೆ ಬಂದಾಗಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಚ್ಚೇ ದಿನ್ ಬರುತ್ತೆ ಎಂದು ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ನಾಲ್ಕು ವರ್ಷ ಕಳೆದರೂ ಅಚ್ಚೇ ದಿನ್ ತರಲೇ ಇಲ್ಲ, ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನ ದುಸ್ತರವಾಗುತ್ತಿದೆ ಎಂದು ದೂರಿದರು.
ಪದೇ ಪದೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವುದರಿಂದ ಸರಕು ಸಾಗಣೆ ವೆಚ್ಚ ದುಬಾರಿಯಾಗುತ್ತಿದ್ದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ನೋಟ್ ಬ್ಯಾನ್ ನಂತಹ ಕ್ರಮಗಳಿಂದ ಜನಸಮಾನ್ಯರ ಮೇಲೆ ಆರ್ಥಿಕ ಗದಾಪ್ರಹಾರ ನಡೆಸಿದ ಕೇಂದ್ರ ಸರ್ಕಾರ ಬೆಲೆ ಏರಿಕೆ ತಡೆಯುವಲ್ಲಿ ವಿಫಲವಾಗುವ ಮೂಲಕ ಜನರನ್ನು ಕಷ್ಟಕ್ಕೆ ದೂಡಿ ಹೊರೆ ಹೊರಿಸಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಆರ್ಥಿಕ ನೀತಿಗಳನ್ನು ಬದಲಿಸಿಕೊಳ್ಳಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದರು. ಉರುವಲು ಬದಲಿಗೆ ಎಲ್‌ಪಿಜಿ ಬಳಸಿ ಎಂದು ಪ್ರಚಾರ ಮಾಡುತ್ತಿರುವ ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯನ್ನು ಏರಿಕೆ ಮಾಡುತ್ತಿದೆ. ಗ್ಯಾಸ್‌ಗೆ ನೀಡುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸಲು ಮುಂದಾಗಿದೆ. ಇಂತಹ ಕ್ರಮವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ಹೆಗ್ಡೆ, ಕಾಶಿ ವಿಶ್ವನಾಥ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಎಚ್. ಎಸ್. ಬಾಲಾಜಿ, ರಾಜ್ಯ ಉಪಾಧ್ಯಕ್ಷ ಕೆ. ಚೇತನ್, ವಿಕಾಸ್ ನಾಡಿಗ್, ಪ್ರಮೋದ್, ವಿಜಯ್, ಧನಂಜಯ್ ಮತ್ತಿತರರು ಇದ್ದರು.