Advertisement

ಜಾತಿವಾರು ಸಮೀಕ್ಷೆ ಸೂಕ್ತ ವೇಳೆ ಬಹಿರಂಗ

01:14 PM Jun 20, 2017 | Team Udayavani |

ದಾವಣಗೆರೆ: ಜಾತಿವಾರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ತಿಳಿಸಿದ್ದಾರೆ. ನಗರದ ಹೊರವಲಯ  ದಲ್ಲಿರುವ ಸರ್ಕಿಟ್‌ ಹೌಸ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಜಾತಿವಾರು ಸಮೀಕ್ಷೆ ಬಹಿರಂಗಕ್ಕೆ ಯಾವುದೇ ಅಡ್ಡಿ, ಆತಂಕ ಇಲ್ಲ. ಪ್ರಭಾವವೂ ಇಲ್ಲ. ಎರಡೂ ಸದನಗಳಲ್ಲಿ ಪ್ರತಿಪಕ್ಷಗಳು ಸಹ ಜಾತಿವಾರು ಸಮೀಕ್ಷೆ ಬಹಿರಂಗಕ್ಕಾಗಿ ಒತ್ತಾಯಿಸಿವೆ. ಆದರೆ, ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಬೇಕು ಎಂಬುದು ಮುಖ್ಯಮಂತ್ರಿಗಳ ನಿರ್ಧಾರವಾಗಿದೆ ಎಂದರು. 

ಬಡವರು, ದಲಿತರು, ಎಲ್ಲಾ ಜಾತಿಗಳ ದುರ್ಬಲರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬ ನಮ್ಮ ಸರ್ಕಾರ ಉದ್ದೇಶ ಈಡೇರಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟನೆ ನೀಡಿದ ಅವರು, ಕೆಲ ದಲಿತ ನಾಯಕರು ಬೆಂಗಳೂರಿನಲ್ಲಿ ನನ್ನನ್ನು ಭೇಟಿ ಮಾಡಿ, ಈ ಕುರಿತು ಚರ್ಚೆ ನಡೆಸಿ, ಯಾವುದೇ ಒತ್ತಡಕ್ಕೆ ಒಳಗಾಗದೇ ಜಾತಿವಾರು ಸಮೀಕ್ಷೆ ಬಹಿರಂಗ ಮಾಡಿ ಎಂಬುದಾಗಿ ಆಗ್ರಹಿಸಿದ್ದರು.

ಅವರಿಗೂ ನಾನು ಇದನ್ನೇ ಹೇಳಿ ಕಳುಹಿಸಿದ್ದೇನೆ ಎಂದು ಸಚಿವರು ತಿಳಿಸಿದರು. 50 ಲಕ್ಷ ರೂ. ಒಳಗಿನ ಕಾಮಗಾರಿಗಳನ್ನು ನೇರವಾಗಿ ಎಸ್‌ಸಿ, ಎಸ್‌ಟಿಗಳಿಗೆ ಗುತ್ತಿಗೆ ನೀಡುವ ಕುರಿತು ನಮ್ಮ ಸರ್ಕಾರ ಮಂಡಿಸಿದ ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ಆಗಬೇಕಿದೆ. ಎರಡೂ ಸದನದಲ್ಲಿ ಆಂಗೀಕಾರವಾಗಿದ್ದ ಮಸೂದೆ ಇದೀಗ ರಾಷ್ಟ್ರಪತಿಗಳ ಅಂಗಳದಲ್ಲಿದೆ.

ಅವರನ್ನು ನಾನು ಭೇಟಿ ಮಾಡಿ, ಮನವಿ ಮಾಡಿದ್ದೇನೆ. ಅವರೂ ಸಹ ಸಮ್ಮತಿಸಿದ್ದಾರೆ. ಮುಂದೆ ಎಸ್‌ಸಿ, ಎಸ್‌ಟಿಗಳಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವುದು ಖಚಿತ. ಬಡವರೇ ಹೆಚ್ಚಿರುವ ಈ ವರ್ಗದವರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದು ನಮ್ಮ ಉದ್ದೇಶ. ಜೊತೆಗೆ ಮೀಸಲಾತಿ ಪ್ರಮಾಣವನ್ನು ಶೇ.70ಕ್ಕೆ ಏರಿಸುವುದು ಸಹ ನಮ್ಮ ಸರ್ಕಾರದ ಆಲೋಚನೆ ಎಂದು ಅವರು ಹೇಳಿದರು. 

Advertisement

ಗುತ್ತಿಗೆ ಪೌರ ಕಾರ್ಮಿಕರ ಖಾಯಮಾತಿಗೆ ನಾವು ಬದ್ಧರಾಗಿದ್ದೇವೆ. ರಾಜ್ಯದ ಪಾಲಿಕೆಗಳ ವ್ಯಾಪ್ತಿಯ 6000, ಪುರಸಭೆ, ನಗರ ಸಭೆ ವ್ಯಾಪ್ತಿಯ 4000 ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂ ಮಾಡುವುದು ಖಚಿತ. ಜೂ.20ರಂದು ಈ ಕುರಿತು ಚರ್ಚಿಸಲು ಪೌರ ಕಾರ್ಮಿಕ ಸಂಘಟನೆಗಳ ಮುಖಂಡರ ಸಭೆ ಕರೆಯಲಾಗಿದೆ ಎಂದು ಅವರು ಹೇಳಿದರು.

ಪೌರ ಕಾರ್ಮಿಕರಲ್ಲಿ ಜಾಗೃತಿ ಉಂಟಾಗಬೇಕು, ಹೊರ ದೇಶಗಳಲ್ಲಿ ಹೇಗೆ ಸ್ವತ್ಛತಾ ಕಾರ್ಯ ಕೈಗೊಳ್ಳುತ್ತಾರೆ ಎಂಬುದರ ಬಗ್ಗೆ ಮಾಹಿತಿ ಸಿಗುವಂತೆ ಆಗಬೇಕು ಎಂಬ ಉದ್ದೇಶದಿಂದ 1000 ಜನ ಪೌರ ಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುವ ಆಲೋಚನೆ ಇದೆ ಎಂದು ಅವರು ತಿಳಿಸಿದರು. 

ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆ ಪ್ರಧಾನ ಮಂತ್ರಿಗಳ ಆದರ್ಶ ಗ್ರಾಮದ ರೀತಿ ಬೋಗಸ್‌ ಆಗುವುದಿಲ್ಲ. ನಮ್ಮ ಯೋಜನೆಗೆ ನಾವು ಅನುದಾನ ಕೊಡಲಿದ್ದೇವೆ. 80 ಲಕ್ಷ ರೂ. ಎಸ್‌ಟಿಪಿ, ಟಿಎಸ್‌ಪಿ ಹಾಗೂ ಇತರೆ ಯೋಜನೆಯ 4 ಕೋಟಿ ರೂ. ಬಳಕೆಮಾಡಿಕೊಂಡು ಶೇ.50ಕ್ಕೂ ಎಸ್‌ಸಿ, ಎಸ್‌ಟಿಗಳು ವಾಸಿಸುವ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು ಎಂದು ಅವರು ಹೇಳಿದರು. 

ಜಿಪಂ ಸದಸ್ಯ ಕೆ.ಎಸ್‌. ಬಸವಂತಪ್ಪ, ದೂಡಾ ಅಧ್ಯಕ್ಷ ಎಚ್‌. ಜಿ. ರಾಮಚಂದ್ರಪ್ಪ, ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ. ಬಸವರಾಜ್‌, ಮಾವು ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಪಿ. ರಾಜಕುಮಾರ್‌ ಇತರರು ಈ ವೇಳೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next