Advertisement

ಪಾಕಿಸ್ಥಾನ ಪದೇ ಪದೆ ಕದನ ವಿರಾಮ ಉಲ್ಲಂಘನೆ: ಸೇನೆಯ ಪ್ರತೀಕಾರ

06:00 AM Jan 16, 2018 | Team Udayavani |

ಜಮ್ಮು: ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಸಿ ದರ್ಪ ತೋರುತ್ತಿದ್ದ ಪಾಕಿಸ್ಥಾನಕ್ಕೆ ಸೋಮವಾರ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. ಜಮ್ಮು-ಕಾಶ್ಮೀರದ ಪೂಂಛ… ಜಿಲ್ಲೆಯಲ್ಲಿ ಭಾರತದ 

Advertisement

ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ಶೆಲ್‌ ದಾಳಿ ನಡೆಸಿದ ಪಾಕಿಸ್ಥಾನದ ವಿರುದ್ಧ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದ್ದು, ಪಾಕ್‌ ಪಡೆಯ ಮೇಜರ್‌ ಸಹಿತ 7 ಮಂದಿ ಸೈನಿಕರನ್ನು ಹತ್ಯೆಗೈದಿದೆ. ಅಷ್ಟೇ ಅಲ್ಲದೆ ಪಾಕಿಸ್ಥಾನದ ಸೇನಾ ಶಿಬಿರವೊಂದನ್ನೂ ಧ್ವಂಸಗೊಳಿಸಲಾಗಿದೆ.

ಸೋಮವಾರ ಬೆಳಗ್ಗೆ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂ ಸಿದ್ದ ಪಾಕ್‌ ಸೇನೆ, ಮೆಂಧಾರ್‌ ವಲಯದಲ್ಲಿನ ಮುಂಚೂಣಿ ನೆಲೆಗಳ ಮೇಲೆ ಭಾರೀ ಶೆಲ್‌ ದಾಳಿ ನಡೆಸಿತ್ತು. ಕೂಡಲೇ ಎಚ್ಚೆತ್ತ ಭಾರತೀಯ ಸೈನಿಕರು ಪ್ರತಿದಾಳಿ ಆರಂಭಿಸಿದರು. ನಿರಂತರವಾಗಿ ನಡೆದ ದಾಳಿಯಲ್ಲಿ ಪಾಕಿಸ್ಥಾನಿ ಸೇನೆಯ ಮೇಜರ್‌ ಸಹಿತ 7 ಮಂದಿ ಸೈನಿಕರನ್ನು ಹೊಡೆದುರುಳಿಸಲಾಯಿತು. ಜತೆಗೆ ನಾಲ್ವರು ಯೋಧರೂ ಗಾಯಗೊಂಡರು ಎಂದು ಸೇನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಶನಿವಾರವಷ್ಟೇ ರಜೌರಿಯಲ್ಲಿ ಪಾಕ್‌ನ ಗುಂಡಿನ ದಾಳಿಗೆ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದರು.

ಭಾರತೀಯ ಯೋಧರನ್ನೂ ಕೊಂದಿದ್ದೇವೆ ಎಂದ ಪಾಕ್‌: ಆದರೆ ಭಾರತದ ಪ್ರತೀಕಾರದ ಬೆನ್ನಲ್ಲೇ ಹೇಳಿಕೆ ನೀಡಿರುವ ಪಾಕ್‌ ಸೇನೆಯು “ಭಾರತ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದು ನಮ್ಮ ನಾಲ್ವರು ಯೋಧರಷ್ಟೆ,’ ಎಂದು ಹೇಳಿದೆ. ಅಷ್ಟೇ ಅಲ್ಲದೆ, ಪಾಕ್‌ ಸೇನೆ ನಡೆಸಿದ ಗುಂಡಿನ ದಾಳಿಗೆ ಮೂವರು ಭಾರತೀಯ ಯೋಧರೂ ಹತರಾಗಿದ್ದಾರೆ ಎಂದು ಹೇಳಿಕೊಂಡಿದೆ.

ಪ್ರಕ್ಷುಬ್ಧತೆ ಹಿನ್ನೆಲೆ ವ್ಯಾಪಾರ, ಸಂಚಾರ ಬಂದ್‌: ಪಾಕಿಸ್ಥಾನದ 7 ಸೈನಿಕರ ಹತ್ಯೆ ನಡೆದ ಬೆನ್ನಲ್ಲೇ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ತಲೆದೋರಿದೆ. ಜಮ್ಮು-ಕಾಶ್ಮೀರ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದ ನಡುವೆ ಸಂಚಾರ ಸ್ಥಗಿತಗೊಂಡಿದೆ. 

Advertisement

ಕಳೆದ ವರ್ಷವೂ ಎರಡೂ ದೇಶಗಳ ನಡುವೆ ವೈಮನಸ್ಸು ತೀವ್ರಗೊಂಡಿದ್ದಾಗ 4 ತಿಂಗಳ ಕಾಲ ಎಲ್‌ಒಸಿ ನಡುವಿನ ವ್ಯಾಪಾರ ವಹಿವಾಟು, ಸಂಚಾರ ಸ್ಥಗಿತಗೊಂಡಿತ್ತು. ಕಳೆದ ನವೆಂಬರ್‌ನಲ್ಲಷ್ಟೇ ಮತ್ತೆ ಇದು ಪುನರಾರಂಭಗೊಂಡಿತ್ತು. ಆದರೆ ಈಗ ಪಾಕಿಸ್ಥಾನ ಪಡೆಯ ಶೆಲ್‌ ದಾಳಿ, ಅದಕ್ಕೆ ಭಾರತದ ಪ್ರತೀಕಾರ ಮತ್ತಿತರ ಬೆಳವಣಿಗೆ ನಡೆದ ಹಿನ್ನೆಲೆಯಲ್ಲಿ ಸೋಮವಾರದಿಂದ ವ್ಯಾಪಾರ -ವಹಿವಾಟು ಸಂಪೂರ್ಣ ಸ್ತಬ್ಧಗೊಂಡಿದೆ ಎಂದು ಎಲ್‌ಒಸಿ ವ್ಯಾಪಾರ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಅಧಿಕಾರಿ ಮೊಹಮ್ಮದ್‌ ತನ್ವೀರ್‌ ಹೇಳಿದ್ದಾರೆ. 

2006ರಿಂದಲೂ ಇಲ್ಲಿ ಜಮ್ಮು-ಕಾಶ್ಮೀರ ಮತ್ತು ಪಿಒಕೆಯಲ್ಲಿನ ವಿಭಜಿತ ಕುಟುಂಬಗಳು ಪ್ರಯಾಣ, ವ್ಯಾಪಾರದಲ್ಲಿ ತೊಡಗಿಕೊಂಡಿದ್ದವು. ಇದನ್ನು ಎರಡೂ ದೇಶಗಳ ವಿಶ್ವಾಸ ವೃದ್ಧಿಯ ನಿಟ್ಟಿನಲ್ಲಿಟ್ಟ ಹೆಜ್ಜೆ ಎಂದೇ ಪರಿಗಣಿಸಲಾಗಿತ್ತು.

ಪಾಕಿಸ್ಥಾನಕ್ಕೆ ಜ| ರಾವತ್‌ ಎಚ್ಚರಿಕೆ
ಗಡಿಯಲ್ಲಿ ನಡೆದ ಬೆಳವಣಿಗೆಗಳ ನಡುವೆಯೇ ಪಾಕಿಸ್ಥಾನಕ್ಕೆ ಕಟು ಎಚ್ಚರಿಕೆ ನೀಡಿರುವ ಭೂಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌, “ನೆರೆರಾಷ್ಟ್ರವು ಈ ರೀತಿ ಒತ್ತಡ ಹೇರುತ್ತಿದ್ದರೆ ಉಗ್ರ ಸಂಘಟನೆಗಳ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಭಾರತ ಸನ್ನದ್ಧವಾಗಬೇಕಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ. ಸೇನಾ ದಿನದ ಪ್ರಯುಕ್ತ ಯೋಧರನ್ನು ಉದ್ದೇಶಿಸಿ ಮಾತನಾಡುವ ವೇಳೆ ಜ| ರಾವತ್‌ ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಪಾಕಿಸ್ಥಾನದ ಸೇನೆಯು ನಿರಂತರವಾಗಿ ಉಗ್ರರು ಭಾರತದೊಳಕ್ಕೆ ನುಸುಳಲು ಸಹಾಯ ಮಾಡುತ್ತಿದೆ. ಆದರೆ ದೇಶದ್ರೋಹಿ ಶಕ್ತಿಗಳ ಈ ಯತ್ನ ಸಫ‌ಲವಾಗಲು ನಾವು ಬಿಡುವುದಿಲ್ಲ. ಇದು ಹೀಗೇ ಮುಂದುವರಿದರೆ ಪಾಕ್‌ ವಿರುದ್ಧ ಸೇನಾ ಕಾರ್ಯಾಚರಣೆ ಮಾತ್ರವಲ್ಲದೆ “ಇತರ ಕ್ರಮ’ಗಳನ್ನು ಕೈಗೊಳ್ಳಲೂ ನಾವು ಸಿದ್ಧರಿದ್ದೇವೆ ಎಂದಿದ್ದಾರೆ. ಏತನ್ಮಧ್ಯೆ ಪಾಕ್‌ ಮತ್ತು ಭಾರತದ ನಡುವಿನ ಸಂಘರ್ಷದ ಅಪಾಯವು ಹೆಚ್ಚುತ್ತಿದೆ ಎಂದು ಪಾಕಿಸ್ಥಾನದ ಡಾನ್‌ ಪತ್ರಿಕೆ ವರದಿ ಮಾಡಿದೆ.

ರಾವತ್‌ ಹೇಳಿಕೆಗೆ ಚೀನ ಕಿಡಿ
ಭೂಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಎರಡು ದಿನಗಳ ಹಿಂದೆ ನೀಡಿದ ಹೇಳಿಕೆ ಚೀನದ ನಿದ್ದೆಗೆಡಿಸಿದೆ. “ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಚೀನ ಕಾಲು ಕೆರೆಯುತ್ತಿದ್ದು, ಭಾರತವು ಪಾಕಿಸ್ಥಾನದೊಂದಿಗಿನ ಗಡಿಗೆ ಬದಲಾಗಿ ಚೀನದೊಂದಿಗಿನ ಗಡಿಯತ್ತ ಗಮನ ಕೇಂದ್ರೀಕರಿಸಬೇಕು’ ಎಂದು ಜ| ರಾವತ್‌ ಹೇಳಿದ್ದರು. ಇದಕ್ಕೆ ಸೋಮವಾರ ಪ್ರತಿಕ್ರಿಯಿಸಿರುವ ಚೀನ, “ಜ| ರಾವತ್‌ ಅವರದ್ದು ರಚನಾತ್ಮಕವಲ್ಲದ ಹೇಳಿಕೆ. ಎರಡೂ ದೇಶಗಳ ನಾಯಕರು ಬಾಂಧವ್ಯವನ್ನು ಹಳಿಗೆ ತರಲು ಹಾಗೂ ಗಡಿಯಲ್ಲಿ ಶಾಂತಿ ನೆಲೆಸಲು ನಡೆಸಿದ್ದ ಮಾತುಕತೆಗೆ ಈ ಹೇಳಿಕೆ ವಿರುದ್ಧವಾಗಿದೆ. ಇದು ಗಡಿ ಯಲ್ಲಿನ ಶಾಂತಿಗೆ ಅಡ್ಡಿಯಾಗಲಿವೆ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next