ಪವಿತ್ರ ರಮ್ಜಾನ್ ತಿಂಗಳಲ್ಲಿ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆಗೆ ಷರತ್ತು ಬದ್ಧ ಕದನ ವಿರಾಮ ಘೋಷಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಒಂದು ಸ್ವಾಗತಾರ್ಹ ನಡೆ ಎಂದು ಹೇಳಬಹುದು. ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳತ್ತ ಕೇಂದ್ರ ಸರಕಾರ ಸಂವೇದನಾಶೀಲ ಸ್ಪಂದನೆಯನ್ನು ಹೊಂದಿದೆ ಎನ್ನುವುದನ್ನು ಈ ನಿರ್ಧಾರ ಸ್ಪಷ್ಟಪಡಿಸಿದೆ. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕದನ ವಿರಾಮ ಘೋಷಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಒಮ್ಮತಕ್ಕೆ ಬರುವಲ್ಲಿ ಮಿತ್ರಪಕ್ಷವಾದ ಬಿಜೆಪಿಯನ್ನು ಮನವೊಲಿಸಲು ಮೆಹಬೂಬ ಅವರ ಸಾಕಷ್ಟು ಪರಿಶ್ರಮವಿದೆ.
ಕದನ ವಿರಾಮ ಘೋಷಿಸುವುದಕ್ಕೆ ಬಿಜೆಪಿಯ ರಾಷ್ಟ್ರೀಯ ನಾಯಕರ ಪ್ರಬಲ ವಿರೋಧವಿತ್ತು. ಜತೆಗೆ ರಕ್ಷಣಾ ಇಲಾಖೆಯಂತೂ ಬಹಳ ದುಬಾರಿ ಆದೀತು ಎಂದು ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಸರಕಾರ ಪಕ್ಷದ ವಿರೋಧವನ್ನು ಲೆಕ್ಕಿಸದೆ ಕದನ ವಿರಾಮ ಘೋಷಿಸಿ ತನ್ನ ಆದ್ಯತೆ ಏನೆಂಬುದನ್ನು ಸ್ಪಷ್ಟಪಡಿಸಿದೆ. ರಾಜ್ಯ ಮತ್ತು ಕೇಂದ್ರದ ನಡುವಿನ ಇಂಥ ಸಂಬಂಧ ನಿಜಕ್ಕೂ ಪ್ರಜಾತಂತ್ರಕ್ಕೊಂದು ಶೋಭೆ. ಜ್ವಲಂತ ಸಮಸ್ಯೆ ಯೊಂದನ್ನು ನಿಭಾಯಿಸುವಾಗ ರಾಜಕೀಯ ಲಾಭನಷ್ಟದ ಲೆಕ್ಕಾಚಾರ ಮುಖ್ಯವಲ್ಲ ಎನ್ನುವ ಸಂದೇಶವನ್ನು ಸರಕಾರ ಈ ಮೂಲಕ ರವಾನಿಸಿದೆ. ಅಂತೆಯೇ ನಮ್ಮ ಮೇಲೆ ದಾಳಿ ಮಾಡಿದರೆ ಮರು ದಾಳಿ ಮಾಡುವ ಆಯ್ಕೆಯನ್ನು ಮುಕ್ತವಾಗಿಟ್ಟುಕೊಂಡಿರುವುದನ್ನು ದೇಶದ ಭದ್ರತೆಯ ಹಿತದೃಷ್ಟಿಯಿಂದಲೂ ವಿವೇಚನಾಯುಕ್ತ ನಿರ್ಧಾರ.
ಕದನ ವಿರಾಮವಿರುವುದರಿಂದ ಭದ್ರತಾ ಪಡೆಗಳ ಕಾರ್ಯಾಚರಣೆಯ ಆತಂಕವಿಲ್ಲದೆ ಜನರು ರಮ್ಜಾನ್‌ನ ಧಾರ್ಮಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳಬಹುದು. ಅಲ್ಲದೆ ಕಾಶ್ಮೀರಿ ಪೊಲೀಸ್ ಪಡೆಯಲ್ಲಿರುವ ಬಹುತೇಕ ಮುಸ್ಲಿಂ ಸಿಬಂದಿಗಳಿಗೂ ಕಾರ್ಯಾಚರಣೆಯ ಒತ್ತಡಗಳಿಂದ ತುಸು ವಿರಾಮ ಸಿಕ್ಕಿದಂತಾಗಿದೆ. ಹಿಂದೆ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಕಾಲದಲ್ಲೂ ರಮ್ಜಾನ್ ಮಾಸದಲ್ಲಿ ಘೋಷಿಸಿದ ಕದನ ವಿರಾಮ ಐದು ತಿಂಗಳು ಮುಂದುವರಿದಿತ್ತು. ಅನಂತರ ಉಗ್ರರ ಉಪಟಳ ಹೆಚ್ಚಾದ ಕಾರಣ ಮತ್ತೆ ಕಾರ್ಯಾಚರಣೆ ಶುರುವಾಗಿತ್ತು.
ರಾಜಕೀಯವಾಗಿಯೂ ವ್ಯೂಹಾತ್ಮಕವಾಗಿಯೂ ಕೇಂದ್ರ ಸರ್ಕಾರಕ್ಕೂR ಇದರಿಂದ ಕೆಲವೊಂದು ಲಾಭಗಳಿವೆ. ಮೊದಲನೆಯದಾಗಿ ಜಮ್ಮು – ಕಾಶ್ಮೀರದಲ್ಲಿ ಮಿತ್ರ ಪಕ್ಷದ ಬೇಡಿಕೆಯನ್ನು ಈಡೇರಿಸುವ ಮೂಲಕ ಮೈತ್ರಿಧರ್ಮವನ್ನು ಗೌರವಿಸಿದ್ದೇವೆ ಎಂದು ಹೇಳಿಕೊಳ್ಳಬಹುದು. ಜತೆಗೆ ಅಲ್ಪಸಂಖ್ಯಾಕ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಗೌರವ ಕೊಟ್ಟ ಕ್ರೆಡಿಟನ್ನು ಗಳಿಸಿಕೊಳ್ಳಬಹುದು. ಇದೇ ವೇಳೆ ಕದನ ವಿರಾಮದ ವೇಳೆ ಯಾವುದೇ ಹಿಂಸಾಚಾರ ಸಂಭವಿಸಿದರೂ ಅದರ ಪೂರ್ತಿ ಹೊಣೆ ಉಗ್ರ ಸಂಘಟನೆಗಳ ಮೇಲೆ ಬೀಳುತ್ತದೆ. ನಾವು ಶಾಂತಿ ಬಯಸಿದರೂ ಉಗ್ರ ಸಂಘಟನೆಗಳಿಗೆ ಅದು ಬೇಕಿಲ್ಲ. ಕಾಶ್ಮೀರದ ಅಶಾಂತಿಗೆ ಈ ಉಗ್ರಗಾಮಿ ಸಂಘಟನೆಗಳೇ ಕಾರಣ ಎಂದು ಜಗತ್ತಿಗೆ ಹೇಳಲು ಇದೊಂದು ಸಾಕ್ಷಿ ಆಗಬಲ್ಲದು.
ಕಳೆದ ಎರಡು ವರ್ಷಗಳಿಂದ ಕಾಶ್ಮೀರದಲ್ಲಿ ನಿತ್ಯ ರಕ್ತ ಹರಿಯುತ್ತಿದೆ. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ, ಉಗ್ರರ ವಿರುದ್ಧ ಕಾರ್ಯಾಚರಣೆ, ಗಡಿಯಾಚೆಗಿನಿಂದ ಕದನ ವಿರಾಮ ಉಲ್ಲಂಘನೆ ಹೀಗೆ ಪ್ರತಿದಿನ ಗುಂಡಿನ ಮೊರೆತ ಕೇಳಿಸುತ್ತಿತ್ತು. ಜತೆಗೆ ಉಗ್ರವಾದದತ್ತ ವಾಲುತ್ತಿರುವ ಕಾಶ್ಮೀರಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿತ್ತು. ಅದರಲ್ಲೂ 13ರಿಂದ 30 ವರ್ಷದೊಳಗಿನವರೇ ಮನೆಯವರಿಗೆ ಕೊನೆಯ ಕರೆ ಮಾಡಿ ನಾಪತ್ತೆಯಾಗಿ ಅನಂತರ ಬಂದೂಕಿನ ಜತೆಗೆ ಉಗ್ರ ಪೋಷಾಕು ತೊಟ್ಟು ಪ್ರತ್ಯಕ್ಷವಾಗುವ ದೃಶ್ಯ ಕಳವಳ ಮೂಡಿಸುತ್ತಿತ್ತು. ಏಪ್ರಿಲ್ ತಿಂಗಳೊಂದರಲ್ಲೇ 28 ಕಾಶ್ಮೀರಿ ಯುವಕರು ಉಗ್ರ ಸಂಘಟನೆ ಸೇರಿದ್ದಾರೆ ಎಂದರೆ ಅಲ್ಲಿ ಪರಿಸ್ಥಿತಿ ಹೇಗೆ ಕೈ ಮೀರಿ ಹೋಗುತ್ತಿದೆ ಎಂಬ ಅಂದಾಜು ಸಿಗುತ್ತದೆ. ಯುವಕರನ್ನು ಸರಿದಾರಿಗೆ ಒಯ್ಯಬೇಕಾದ ಕಾಲೇಜು ಉಪನ್ಯಾಸಕರಂತಹ ವಿದ್ಯಾವಂತರೇ ಉಗ್ರವಾದವನ್ನು ಅಪ್ಪಿಕೊಳ್ಳುವಷ್ಟು ಪ್ರತ್ಯೆಕತಾವಾದಿ ಮನೋಭಾವ ಬಲವಾಗುತ್ತಿದ್ದು, ಈ ಹಿಂಸಾ ಸರಣಿಯನ್ನು ಮುರಿಯುವುದು ತೀರಾ ಅವಶ್ಯಕವಾಗಿತ್ತು. ಕದನ ವಿರಾಮ ಇದಕ್ಕೊಂದು ಅವಕಾಶ ನೀಡಬಹುದು.
ಕಳೆದ ವರ್ಷದ ಸ್ವಾತಂತ್ರೊತ್ಸವ ಭಾಷಣದಲ್ಲಿ ಹೇಳಿದ “ನ ಗೋಲಿ ಸೆ, ನ ಗಾಲಿ ಸೆ, ಕಾಶ್ಮೀರ್ ಕಿ ಸಮಸ್ಯಾ ಸುಲೆjàಗಿ ಗಲೇ ಲಗಾನೆ ಸೆ’ ಮಾತನ್ನು ಮೋದಿ ಕದನ ವಿರಾಮ ಘೋಷಿಸುವ ಮೂಲಕ ಕಾರ್ಯ ರೂಪಕ್ಕೆ ತಂದಿದ್ದಾರೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ರಾಜಕೀಯ ಮಾತುಕತೆಗಳು ಮುಂದುವರಿಯಬೇಕು ಎಂದರೆ ಶಾಂತಿ ನೆಲೆಯಾಗುವುದು ಅಗತ್ಯ.
ಬಂದೂಕಿನಿಂದ ಯಾವುದೇ ಸಮಸ್ಯೆಗಳು ಬಗೆಹರಿಯುವುದಿಲ್ಲ ಎನ್ನುವುದಕ್ಕೆ ಇತಿಹಾಸದಲ್ಲಿ ಧಾರಾಳ ಉದಾಹರಣೆಗಳು ಸಿಗುತ್ತಿವೆ. ಹೀಗಾಗಿ ಈ ಕದನ ವಿರಾಮವನ್ನು ಉಗ್ರ ಪಡೆಗಳು ಮತ್ತು ಅವರಿಗೆ ಬೆಂಬಲ ನೀಡುವವರು ಗಂಭೀರವಾಗಿ ಪರಿಗಣಿಸಬೇಕು.