Advertisement

ಬಗೆದಷ್ಟೂ ಸಿಸಿಬಿ ಕರ್ಮಕಾಂಡ ಬಯಲು

05:35 AM May 22, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ ಸಮಯವನ್ನೇ ಸಿಸಿಬಿಯ ಆರ್ಥಿಕ ಅಪರಾಧ ವಿಭಾಗ ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ ಗಳು ಅವಕಾಶವನ್ನಾಗಿ ಬಳಸಿಕೊಂಡಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ಸಿಗರೇಟ್‌ ವಿತರಕರನ್ನು ಬೆದರಿಸಿ  ಹಣ ಸುಲಿಗೆ ಮಾಡಿದ್ದ ಸಿಸಿಬಿ ಎಸಿಪಿ ಪ್ರಭು ಶಂಕರ್‌, ಇನ್ಸ್‌ಪೆಕ್ಟರ್‌ಗಳಾದ ಅಜಯ್‌ ಹಾಗೂ ನಿರಂಜನ್‌ ವಿರುದ್ಧದ ಇಲಾಖಾ ತನಿಖೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

Advertisement

ಎಸಿಪಿ ಪ್ರಭುಶಂಕರ್‌, ಲಾಕ್‌ಡೌನ್‌ ಸಮಯದಲ್ಲಿ  ಅಕ್ರಮವಾಗಿ ಹಣ ಮಾಡಲು ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು, ಸಿಗರೇಟ್‌ ಏಜೆಂಟರು ನಗರಾದ್ಯಂತ ಇರುವ ಅಂಗಡಿಗಳಿಗೆ ಸಿಗರೇಟ್‌ ಸರಬರಾಜು ಮಾಡಿ ಹಣ ಮಾಡಲು ಸಹಾಯ ಮಾಡಿದ್ದರು ಎಂಬ ಅಂಶವೂ ಬೆಳಕಿಗೆ  ಬಂದಿದೆ. ಅಷ್ಟೇ ಅಲ್ಲದೆ ಎಸಿಪಿ ಜತೆ ಇನ್ಸ್‌ಪೆಕ್ಟರ್‌ಗಳಾದ ಅಜಯ್‌ ಹಾಗೂ ನಿರಂಜನ್‌ ಕುಮಾರ್‌ ಕೂಡ ಬಾಣಸವಾಡಿಯಲ್ಲಿ ಎನ್‌ – 95 ಮಾಸ್ಕ್ ತಯಾರಿಕೆ ಜಾಲದವರಿಂದ ಹಣ ಪಡೆದು ಆರೋಪಿಗಳಿಗೆ ಸಹಕರಿಸಿದ್ದರು ಎಂಬೂ  ಗೊತ್ತಾಗಿದೆ.

ಈ ಅಂಶಗಳನ್ನು ಆಧರಿಸಿ ಎಸಿಪಿ ಪ್ರಭುಶಂಕರ್‌ ಸೇರಿದಂತೆ ಇನ್ಸ್‌ಪೆಕ್ಟರ್‌ಗಳ ವಿರುದ್ಧ ಮೂರು ಪೃತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿರುವ ಎಸಿಬಿ ತನಿಖೆ ಚುರುಕುಗೊಳಿಸಿದೆ. ಮೂವರು ಅಧಿಕಾರಿಗಳು ಲಾಕ್‌ ಅವಧಿಯಲ್ಲಿ ಹಣ  ಮಾಡಲು ಖಾಸಗಿ ವ್ಯಕ್ತಿಗಳ ಮುಖೇನ ವ್ಯವಸ್ಥಿತ ತಂಡವನ್ನೇ ಕಟ್ಟಿಕೊಂಡಿದ್ದರು. ಆರೋಪಿಗಳ ಜತೆ ಖಾಸಗಿ ವ್ಯಕ್ತಿಗಳ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ ?: ಸಿಗರೇಟ್‌ ವಿತರಕರಿಂದ ಎಸಿಪಿ ಪ್ರಭುಶಂಕರ್‌ ಇನ್ಸ್‌ಪೆಕ್ಟರ್‌ಗಳಾದ ಅಜಯ್‌, ನಿರಂಜನ್‌ ಕುಮಾರ್‌ ಸೇರಿ ಒಟ್ಟು 1.75 ಕೋಟಿ ರೂ ಸುಲಿಗೆ ಮಾಡಿದ್ದರು. ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ವಿತರಕರು  ಹಿರಿಯ  ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿದ್ದರು. ಈ ಸಂಬಂಧ ಸಿಸಿಬಿ ಡಿಸಿಪಿ ರವಿಕುಮಾರ್‌ ತನಿಖೆ ನಡೆಸಿದಾಗ ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳು ಹಣ ಪಡೆದಿರುವುದು ಖಚಿತಪಟ್ಟಿತ್ತು. ಈ ಕುರಿತು ತನಿಖೆಗೆ ಎಸಿಬಿಗೆ ವಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next