Advertisement

ಹೂಕೋಸು ವೈವಿಧ್ಯ

07:06 PM Jan 23, 2020 | mahesh |

ಚಳಿಗಾಲದಲ್ಲಿ ತಂಪಾಗಿ ಬೆಳೆಯುವ ತಾಜಾ ತರಕಾರಿಗಳಲ್ಲಿ ಹೂಕೋಸೂ ಒಂದು. ಇದು ತುಂಬಾ ರುಚಿಯಾಗಿರುವ ಕಾರಣ ಇದರಿಂದ ಹಲವಾರು ರೀತಿಯ ಪದಾರ್ಥಗಳನ್ನು ಮಾಡಬಹುದು. ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಹೂಕೋಸಿನಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್‌ ಮತ್ತು ಪೋಷಕಾಂಶಗಳು ಸಮೃದ್ಧವಾಗಿದೆ. ಇಲ್ಲಿವೆ ಕೆಲವು ರಿಸಿಪಿಗಳು.

Advertisement

ಗೋಬಿ ಮಂಚೂರಿ
ಬೇಕಾಗುವ ಸಾಮಗ್ರಿ: ಹೂಕೋಸು- 1, ಕಾರ್ನ್ಪ್ಲೋರ್‌- 1 ಕಪ್‌, ಮೈದಾ- 1/4 ಕಪ್‌, ನೀರುಳ್ಳಿ- 2, ದೊಣ್ಣೆಮೆಣಸು- 2, ಹಸಿಮೆಣಸು- 3, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌- 1 ಚಮಚ, ಮೆಣಸಿನ ಪುಡಿ-ಗರಂಮಸಾಲಾ ಪುಡಿ- 1 ಚಮಚ, ಕೊತ್ತಂಬರಿ ಸೊಪ್ಪು , ಟೊಮೆಟೋ ಸಾಸ್‌, ರೆಡ್‌ಚಿಲ್ಲಿ ಸಾಸ್‌, ಸೋಯಾ ಸಾಸ್‌, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ: ಹೂಕೋಸನ್ನು ಕತ್ತರಿಸಿ ಕುದಿಯುವ ಬಿಸಿನೀರಿಗೆ ಹಾಕಿ ತೊಳೆದು ನೀರು ಬಸಿದು, ಇದಕ್ಕೆ ಕಾರ್ನ್ಫ್ಲೋರ್‌, ಮೈದಾ, ಮೆಣಸಿನಹುಡಿ, ಉಪ್ಪು ಸೇರಿಸಿ ಗಟ್ಟಿಯಾಗಿ ಮಿಶ್ರಮಾಡಿ ಎಣ್ಣೆಯಲ್ಲಿ ನಸುಗಂದು ಬರುವವರೆಗೆ ಕರಿದು ತೆಗೆಯಿರಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ನೀರುಳ್ಳಿ ಮತ್ತು ಹಸಿಮೆಣಸನ್ನು ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಇದಕ್ಕೆ ದೊಣ್ಣೆಮೆಣಸು ಸೇರಿಸಿ ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ , ಗರಂ ಮಸಾಲಾ ಪುಡಿ ಹಾಕಿ ಹುರಿದುಕೊಳ್ಳಿ. ನಂತರ ಟೊಮೆಟೊ ಸಾಸ್‌, ಸೋಯಾಸಾಸ್‌, ರೆಡ್‌ಚಿಲ್ಲಿ ಸಾಸ್‌ ಸೇರಿಸಿ ಚೆನ್ನಾಗಿ ಹುರಿದು ಅರ್ಧ ಕಪ್‌ ನೀರು ಹಾಕಿ ಕುದಿಸಿ. ಸಾಸ್‌ನಂತೆ ಆದ ಬಳಿಕ ಕರಿಮೆಣಸು ಪುಡಿ, ಉಪ್ಪು ಹಾಕಿ. ನಂತರ ಮಾಡಿಟ್ಟ ಗೋಬಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಕರ ಗೋಬಿ ಮಂಚೂರಿ ತಯಾರು. ಮಕ್ಕಳಿಂದ ಹಿಡಿದು ಹಿರಿಯರು ಸಹ ಇಷ್ಟಪಡುವ ಸ್ನ್ಯಾಕ್ಸ್‌ ಇದು.

ಹೂಕೋಸು ಪುಲಾವ್‌
ಬೇಕಾಗುವ ಸಾಮಗ್ರಿ: ಬಾಸುಮತಿ ಅಕ್ಕಿ- ಒಂದೂವರೆ ಕಪ್‌, ಹೂಕೋಸು- 2 ಕಪ್‌, ಚಕ್ಕೆ-ಲವಂಗ-ಪಲಾವ್‌ ಎಲೆ, ಈರುಳ್ಳಿ- 1 ದೊಡ್ಡದು, ಟೊಮೆಟೋ- 1, ಹಸಿಮೆಣಸು- 3, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌- 1 ಚಮಚ, ಖಾರಪುಡಿ- 1 ಚಮಚ, ಗರಂಮಸಾಲಾ ಪುಡಿ- 1/2 ಚಮಚ, ಕೊತ್ತಂಬರಿ ಸೊಪ್ಪು , ಎಣ್ಣೆ-ತುಪ್ಪ.

ತಯಾರಿಸುವ ವಿಧಾನ: ಹೂಕೋಸನ್ನು ಬಿಸಿ ನೀರಿನಲ್ಲಿ ತೊಳೆದು ಖಾರದಪುಡಿ, ಅರಸಿನ ಪುಡಿ, ಉಪ್ಪು ಸೇರಿಸಿ ಮಿಕ್ಸ್‌ ಮಾಡಿಡಿ. ನಂತರ ಒಂದು ಕುಕ್ಕರ್‌ನಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ಚಕ್ಕೆ, ಲವಂಗ, ಪುಲಾವ್‌ ಎಲೆ ಹಾಕಿ ಪರಿಮಳ ಬರುವವರೆಗೆ ಹುರಿದು ಈರುಳ್ಳಿ, ಹಸಿಮೆಣಸು ಹಾಕಿ ಮತ್ತೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಟೊಮೆಟೋ ಸೇರಿಸಿ. ನಂತರ ಗರಂಮಸಾಲಾ ಪುಡಿ, ಉಪ್ಪು ಹಾಗೂ ಕಲಸಿಟ್ಟ ಗೋಬಿಯನ್ನು ಹಾಕಿ 5 ನಿಮಿಷ ಪ್ರೈ ಮಾಡಿ. ಕೊನೆಗೆ ಅಕ್ಕಿಯನ್ನು ಸೇರಿಸಿ ಬೇಕಷ್ಟು ನೀರು ಹಾಕಿ ಕುಕ್ಕರ್‌ ಮುಚ್ಚಿ 2 ವಿಸಲ್‌ ಕೂಗಿಸಿದರೆ ಘಮ ಘಮ ಹೂಕೋಸು ಪುಲಾವ್‌ ರೆಡಿ.

Advertisement

ಹೂಕೋಸು ಪಲ್ಯ
ಬೇಕಾಗುವ ಸಾಮಗ್ರಿ: ಹೂಕೋಸು- 1, ಈರುಳ್ಳಿ- 2, ಟೊಮೆಟೋ- 1, ಸಾಸಿವೆ- 1/2 ಚಮಚ, ಜೀರಿಗೆ- 1/2 ಚಮಚ, ಬೆಳ್ಳುಳ್ಳಿ ಎಸಳು 6-7, ಶುಂಠಿ- ಸಣ್ಣ ತುಂಡು, ಗರಂಮಸಾಲಾ ಪುಡಿ- 1/2 ಚಮಚ, ಮೆಣಸಿನಹುಡಿ- 1/2 ಚಮಚ, ಎಣ್ಣೆ, ರುಚಿಗೆ ಬೇಕಷ್ಟು ಉಪ್ಪು.

ತಯಾರಿಸುವ ವಿಧಾನ: ಹೂಕೋಸನ್ನು ಕತ್ತರಿಸಿಕೊಂಡು ಉಪ್ಪು-ಅರಸಿನ ಸೇರಿಸಿದ ಬಿಸಿ ನೀರಿನಲ್ಲಿ ತೊಳೆದು ಬಸಿದಿಡಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ-ಜೀರಿಗೆ ಹಾಕಿ ಚಟಪಟಿಸಿ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ. ಹಸಿವಾಸನೆ ಹೋದ ಬಳಿಕ ಟೊಮೆಟೊ ಹಾಕಿ ಬೇಯಿಸಿ. ನಂತರ ಅರಸಿನ, ಮೆಣಸಿನಪುಡಿ, ಗರಂಮಸಾಲಾ, ದನಿಯಾ ಪುಡಿ, ಉಪ್ಪು ಸೇರಿಸಿ. ಕೊನೆಗೆ ಹೂಕೋಸು ಸೇರಿಸಿ ಕಾಲು ಗ್ಲಾಸ್‌ ನೀರು ಹಾಕಿ ಬೇಯಿಸಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿಕರ ಪಲ್ಯ ರೆಡಿ.

ಹೂಕೋಸು ಕುರ್ಮಾ
ಬೇಕಾಗುವ ಸಾಮಗ್ರಿ: ಹೂಕೋಸು- 1, ಬಟಾಣಿ- 1 ಕಪ್‌, ತೆಂಗಿನತುರಿ- 2 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌- 1 ಚಮಚ, ಕೊತ್ತಂಬರಿ ಸೊಪ್ಪು , ಹಸಿಮೆಣಸು- 4, ಸಾಸಿವೆ- 1/2 ಚಮಚ, ಗರಂಮಸಾಲಾ ಪುಡಿ- 1/2 ಚಮಚ, ಗೋಡಂಬಿ- 10, ಈರುಳ್ಳಿ- 1 ದೊಡ್ಡ, ಟೊಮೆಟೊ- 1, ಗಸಗಸೆ- 1 ಚಮಚ, ಚಕ್ಕೆ-ಲವಂಗ, ರುಚಿಗೆ ಬೇಕಷ್ಟು ಉಪ್ಪು.

ತಯಾರಿಸುವ ವಿಧಾನ:
ಗೋಬಿಯನ್ನು ಕತ್ತರಿಸಿ ಬಿಸಿನೀರಿಗೆ ಹಾಕಿ ತೊಳೆದಿಡಿ. ಮಿಕ್ಸಿ ಜಾರಿಗೆ ತೆಂಗಿನತುರಿ, ಶುಂಠಿ-ಬೆಳ್ಳುಳ್ಳಿ, ಗೋಡಂಬಿ, ಹಸಿಮೆಣಸು, ಚಕ್ಕೆ-ಲವಂಗ, ಗಸಗಸೆ, ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಹೂಕೋಸು, ಬಟಾಣಿ , ಟೊಮೆಟೊ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ದನಿಯಾ ಪುಡಿ, ಗರಂಮಸಾಲೆ, ರುಬ್ಬಿಟ್ಟ ಮಸಾಲೆ ಹಾಕಿ ಸ್ವಲ್ಪ ಹೊತ್ತು ಹುರಿದು ಬೇಕಷ್ಟು ನೀರು ಸೇರಿಸಿ ಮುಚ್ಚಿ ಬೇಯಿಸಿದರೆ ರುಚಿ ರುಚಿ ಕುರ್ಮಾ ರೆಡಿ. ಇದು ಚಪಾತಿ, ಪೂರಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

ಸ್ವಾತಿ

Advertisement

Udayavani is now on Telegram. Click here to join our channel and stay updated with the latest news.

Next