Advertisement
ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದಲ್ಲಿ 99 ಒಳ ಪಂಗಡಗಳಿದ್ದು, ಪ್ರಮುಖವಾಗಿ ಬಣಜಿಗ, ಪಂಚಮಸಾಲಿ, ಸಾದರ, ನೊಣಬ, ರೆಡ್ಡಿ ಲಿಂಗಾಯತ, ಗಾಣಿಗ ಸಮುದಾಯಗಳು ರಾಜಕೀಯವಾಗಿ ಪ್ರಾಬಲ್ಯ ಹೊಂದಿದ್ದು, ಹಾಲಿ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ 8 ಜನ ವೀರಶೈವ ಲಿಂಗಾಯತ ಸಮುದಾಯದ ಸಚಿವರಿದ್ದು, ಇತ್ತಿಚೆಗೆ ನಡೆದ ಉಪ ಚುನಾವಣೆಯಲ್ಲಿ ಗೆದ್ದು ಬಂದಿರುವ ಬಿ.ಸಿ.ಪಾಟೀಲ್ ಹಾಗೂ ಮಹೇಶ್ ಕುಮಠಳ್ಳಿ ಕೂಡ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದಾರೆ. ಅವರಿಗೂ ಸಂಪುಟದಲ್ಲಿ ಅವಕಾಶ ದೊರೆತರೆ ಹತ್ತು ಜನ ವೀರಶೈವ ಲಿಂಗಾಯತ ಸಮದಾಯದವರಿಗೆ ಅವಕಾಶ ದೊರೆತಂತಾಗುತ್ತದೆ.
Related Articles
Advertisement
ರೆಡ್ಡಿ ಲಿಂಗಾಯತರಿಗೆ ಸ್ಥಾನದ ಬೇಡಿಕೆ: ವೀರಶೈವ ಸಮುದಾಯದಲ್ಲಿ ರೆಡ್ಡಿ ಲಿಂಗಾಯತ ಸಮುದಾಯವೂ ರಾಜಕೀಯವಾಗಿ ಪ್ರಬಲವಾಗಿದ್ದು, ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ರೆಡ್ಡಿ ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಐವರು ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿದ್ದು, ಎಲ್ಲ ಸರ್ಕಾರಗಳ ಸಂಪುಟದಲ್ಲಿಯೂ ರೆಡ್ಡಿ ಸಮುದಾಯಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು.
ಆದರೆ, ಈ ಸಂಪುಟದಲ್ಲಿ ಅವಕಾಶ ನೀಡಿಲ್ಲ ಎನ್ನುವ ಕಾರಣಕ್ಕೆ ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿದು ಬಂದಿದೆ. ರೆಡ್ಡಿ ಲಿಂಗಾಯತ ಸಮುದಾಯದಲ್ಲಿ ಮೂರು ಬಾರಿ ಆಯ್ಕೆಯಾಗಿರುವ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹಾಗೂ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಅವರಲ್ಲಿ ಒಬ್ಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ರೆಡ್ಡಿ ಲಿಂಗಾಯತ ಸಮುದಾಯದ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ತಿಳಿದು ಬಂದಿದೆ.
ಜಂಗಮರ ಬೇಡಿಕೆ: ವೀರಶೈವ ಲಿಂಗಾಯತ ಸಮುದಾಯದಲ್ಲಿ ಮೇರು ಸ್ಥಾನದಲ್ಲಿರುವ ಜಂಗಮ (ಅಯ್ಯನವರು) ಸಮುದಾಯಕ್ಕೂ ಪ್ರಾತಿನಿಧ್ಯ ದೊರೆತಿಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರೂ ಒಳ ಪಂಗಡವನ್ನು ಮುಂದಿಟ್ಟುಕೊಂಡು ಸಂಪುಟ ಸೇರುವ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ.
ಆದಿ ಬಣಜಿಗರ ಒತ್ತಡ: ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಮುಖವಾಗಿ ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಆದಿ ಬಣಜಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದ್ದು, ಗುಲಬರ್ಗಾ ದಕ್ಷಿಣ ಕ್ಷೇತ್ರದರಿಂದ ಎರಡನೇ ಬಾರಿಗೆ ಆಯ್ಕೆಯಾಗಿರುವ ಸಮುದಾಯದ ಏಕೈಕ ಶಾಸಕ ದತ್ತು ಪಾಟೀಲ್ ರೇವೂರ್ ಅವರ ಪರವಾಗಿ ಆ ಸಮುದಾಯದ ಮುಖಂಡರು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇವರ ಹೊರತಾಗಿಯೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರುವ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಹಿರಿತನದ ಆಧಾರದಲ್ಲಿ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹಾಲಿ ಸಚಿವರ ಒಳ ಪಂಗಡಗಳುಗಾಣಿಗ: ಲಕ್ಷ್ಮಣ ಸವದಿ
ಬಣಜಿಗ: ಜಗದೀಶ ಶೆಟ್ಟರ್, ಶಶಿಕಲಾ ಜೊಲ್ಲೆ
ಸಾದರ: ಬಸವರಾಜ ಬೊಮ್ಮಾಯಿ
ಪಂಚಮಸಾಲಿ: ಸಿ.ಸಿ. ಪಾಟೀಲ್
ನೊಣಬ: ಜೆ.ಸಿ. ಮಾಧುಸ್ವಾಮಿ
ವಿ.ಸೋಮಣ್ಣ: ಗೌಡ ಲಿಂಗಾಯತ * ಶಂಕರ ಪಾಗೋಜಿ