ಮಹದೇವಪುರ: ರಾಜಕೀಯ ಪಕ್ಷಗಳು ಜಾತಿ ವ್ಯವಸ್ಥೆಗೆ ಪುಷ್ಟಿ ನೀಡುತ್ತಿರುವ ಕಾರಣ ಸಮಾಜದಲ್ಲಿ ಇಂದಿಗೂ ಜಾತಿ ಪಿಡುಗು ಜೀವಂತವಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೂರೆಸ್ವಾಮಿ ಬೇಸರ ವ್ಯಕ್ತಪಡಿಸಿದರು. ಕ್ಷೇತ್ರದ ಹೂಡಿಯಲ್ಲಿ ಭಾರತೀಯರ ಸೇವಾ ಸಮಿತಿ ಹಮ್ಮಿಕೊಂಡಿದ್ದ 62ನೇ ಕನ್ನಡ ರಾಜ್ಯೋತ್ಸವ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮ ಉದ್ಗಾಟಿಸಿ ಅವರು ಮಾತನಾಡಿದರು.
ಮಠಗಳಿಗೆ ಜಾತಿ ಆಧಾರದಲ್ಲಿ ಹಣ ನೀಡುವುದನ್ನು ಬಿಟ್ಟು, ಬಡತನದಿಂದ ಬಳಲುತ್ತಿರುವ ಜನರಿಗೆ ಸರ್ಕಾರ ಅಸರೆಯಾಗಬೇಕು. ಜನ ಸೇವೆ ಮಾಡುವ ನಿಜವಾದ ಜನ ಪ್ರತಿನಿಧಿಗಳು ಯಾರೂ ಇಲ್ಲ. ಇದ್ದರೂ ಆಯಾ ಪಕ್ಷಗಳ ಕೈಗೊಂಬೆಗಳಾಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ದೇಶಕ್ಕೆ ಕೂಡುಗೆ ನೀಡಿದ ಮಹಾನ್ ವ್ಯಕ್ತಿಗಳನ್ನು ಆಯಾ ಜಾತಿಗೆ ಸೀಮಿತಗೊಳಿಸಿರುವುದು ಅವರ ಅಸ್ತಿತ್ವ, ಆಶಯಕ್ಕೆ ದಕ್ಕೆ ತಂದಿದೆ. ದೇಶಕ್ಕೆ ಸಂವಿಧಾನ ನೀಡಿದ್ದಲ್ಲದೆ, ಜಾತಿ ಪಿಡುಗನ್ನು ತೊಲಗಿಸಲು ಶ್ರಮಿಸಿದ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸಮೀತಗೊಳಿಸಿ ಬಿಂಬಿಸುತ್ತಿರುವುದು ಬೇಸರದ ಸಂಗತಿ ಎಂದರು.
ಬಿಎಸ್‌ಎಸ್ ರಾಜ್ಯ ಸಮಿತಿಯ ಸದಸ್ಯರು ವೀರಗಾಸೆ, ಡೊಳ್ಳು ಕುಣಿತ, ತಮಟೆ ವಾದ್ಯಗಳೊಂದಿಗೆ ಭುವನೇಶ್ವರಿ ದೇವಿ, ಮತ್ತು ಡಾ.ಅಂಬೇಡ್ಕರ್ ಪ್ರತಿಮೆಯ ಮೆರವಣಿಗೆ ಮಾಡಿದರು.ಹೂಡಿ ಆಟೋ ಚಾಲಕರು ಮೆರವಣಿಗೆಗೆ ಸಾಥ್ ನೀಡಿದರು.
ಬೆಳಗಾವಿಯ ಗುರುದೇವ ಬ್ರಹ್ಮಾನಂದ ಅಶ್ರಮದ ಸದ್ಗುರು ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಬಿಎಸ್‌ಎಸ್ ರಾಜ್ಯ ಸಮಿತಿ ಅದ್ಯಕ್ಷ ಎಚ್.ಎಂ.ರಾಮಚಂದ್ರ, ನಲ್ಲೂರಹಳ್ಳಿ ನಾಗಾನಂದ ಸ್ವಾಮಿ, ನಟ ರುತ್ವಿಕ್, ಚಂದ್ರಶೇಖರ್ ನಾಯ್ಡು, ಸಿ.ನಾರಾಯಣಸ್ವಾಮಿ, ಅಲ್ತಾಫ್, ನಾಗರಾಜ್, ಆಂಜಿನಪ್ಪ ಯಾದವ್, ಮಂಜುಳಾ ಅಕ್ಕಿ, ಶೋಭಾ, ಸ್ವಾತಿ, ಕಿರಣ್ ಕುಮಾರ್ ರೆಡ್ಡಿ, ಹರಿಕೃಷ್ಣ ಯಾದವ್ ಮತ್ತಿತರರು ಹಾಜರಿದ್ದರು.