ಹರಿಹರ: ದೇಶದಲ್ಲಿ ಸಮಾನತೆ, ಏಕತೆ ಮೂಡಬೇಕೆಂದರೆ ಮನುಷ್ಯರನ್ನು ಪ್ರತ್ಯೇಕಿಸುವ ಜಾತಿ-ಮತಗಳ ಕಾಲಂ ಕಿತ್ತೂಗೆಯಬೇಕು ಎಂದು ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶೀಕೇಂದ್ರ ಶ್ರೀಗಳು ಅಭಿಪ್ರಾಯಪಟ್ಟರು. ಕೆ.ಬೇವಿನಹಳ್ಳಿಯಲ್ಲಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ನಿಮಿತ್ತ ಆಯೋಜಿಸಲಾಗಿದ್ದ ಜನಜಾಗೃತಿ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಕ್ಕಳನ್ನು ಶಾಲೆಗೆ ಸೇರಿಸುವಾಗಲೆ ಜಾತಿ ನಮೂದಿಸುವ ಮೂಲಕ ಭಿನ್ನತೆ ಮೂಡಿಸಲಾಗುತ್ತಿದೆ.
ಜಾತಿ-ಮತಗಳಿಂದ ಸಮಾಜ ತುಂಡರಿಸುವುದನ್ನು ನಿಲ್ಲಿಸಿದಾಗ ಮಾತ್ರ ದೇಶ ಕಟ್ಟಲು ಸಾಧ್ಯ ಎಂದರು. ಇಂದಿನ ಹಲವು ಸಮಸ್ಯೆಗಳಿಗೆ ಹಸಿರು ನಾಶವೇ ಕಾರಣ. ವಿಜ್ಞಾನದ ಪ್ರಕಾರ ಶೇ.69ರಷ್ಟು ಹಸಿರಿದ್ದಲ್ಲಿ ಮಾತ್ರ ಉತ್ತಮ ಮಳೆಯಾಗುತ್ತದೆ. ಆದರೆ ಜಗತ್ತಿನಾದ್ಯಂತ ಮರಗಳ ಮಾರಣಹೋಮ ನಡೆಯುತ್ತಿದೆ. ಈಗಾಗಲೇ ನೀರಿಗಾಗಿ ಹಾಹಾಕಾರ ಎದ್ದಿದೆ ಎಂದರು.
ಕೃಷಿಗೆ ಆದ್ಯತೆ ನೀಡಲು ಪ್ರಧಾನಿಗೆ ಪತ್ರ: ಭಾರತ ಕೃಷಿ ಪ್ರಧಾನ ದೇಶ, ಕೃಷಿಯಿಂದ ಮಾತ್ರ ನಮ್ಮ ದೇಶ ಉದ್ಧಾರವಾಗಲು ಸಾಧ್ಯ. ಆದ್ದರಿಂದ ದೇಶಾದ್ಯಂತ ವಿವಿಧ ಹಂತದ ಶೈಕ್ಷಣಿಕ ಪಠ್ಯಕ್ರಮದಲ್ಲಿ ಕೃಷಿಗೆ ಆದ್ಯತೆ ನೀಡುವ ಮೂಲಕ ಕೃಷಿಯಲ್ಲಿ ಹೊಸ ಹೊಸ ಸಂಶೋಧನೆ, ಅವಿಷ್ಕಾರ ನಡೆಯುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೀಠದಿಂದ ಪತ್ರ ಬರೆದು ಕೋರಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್. ಎಸ್.ಶಿವಶಂಕರ್ ಮಾತನಾಡಿ, ಪಂಚ ಪೀಠಗಳಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದ್ದು, ಹೀಗಾದರೆ ಸಮಾಜ ಕಟ್ಟಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ. ಉಜ್ಜಯಿನಿ ಪೀಠಕ್ಕೆ ಕೇದಾರ ಶ್ರೀಗಳ ಮತ್ತೂಬ್ಬ ಶ್ರೀ ಆಯ್ಕೆ ಮಾಡಿರುವ ಬಗ್ಗೆ ಈ ಭಾಗದ ಎಲ್ಲಾ ಭಕ್ತರ ವಿರೋಧವಿದೆ. ವೀರಶೈವಧರ್ಮದಲ್ಲಿ ಮನಬಂದಂತೆ ಪೀಠಾಧಿಪತಿಗಳ ಬದಲಾವಣೆಗೆ ಅವಕಾಶವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಆವರಗೊಳ್ಳ ಓಂಕಾರ ಶ್ರೀ, ಉಚ್ಚಗಿದುರ್ಗದ ಕಟ್ಟಿಮನಿ ರಾಜಗುರು ಶ್ರೀ, ರಾಮಘಟ್ಟದ ರೇವಣಸಿದ್ದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಡಾ| ಸಿ.ಎಂ.ಸುಲೋಚನ ಶಿವಾನಂದಯ್ಯ ಉಪನ್ಯಾಸ ನೀಡಿದರು. ಮಾಜಿ ಶಾಸಕ ಬಿ.ಪಿ.ಹರೀಶ್, ಮಾಜಿ ಎಂಎಲ್‌ಸಿ ಎ.ಎಚ್. ಶಿವಯೋಗಿಸ್ವಾಮಿ, ಎನ್ .ಜಿ.ನಾನಗೌಡ್ರು, ಡಿ.ಎಂ.ಹಾಲಸ್ವಾಮಿ, ಟಿ.ಮುಕುಂದ, ಜ್ಯೋತಿ ಸುರೇಶ್, ಡಾ| ಎ.ಎಸ್.ಪ್ರಶಾಂತ್ ಕುಮಾರ್, ಡಾ| ಸುಷ್ಮಾ ಅಂಗಡಿ ಬಸಟೇಪ್ಪ, ಕೆ.ಎಂ. ರುದ್ರಮುನಿಸ್ವಾಮಿ, ಬಿ.ಕೆ. ಚಂದ್ರಶೇಖರ್, ಎಂ.ಎನ್. ವಿರೂಪಾಕ್ಷಯ್ಯ, ಜಿ.ಎಸ್. ಮರುಳುಸಿದ್ದಯ್ಯ, ಜಿ.ಸಿದ್ದಪ್ಪ ಮತ್ತಿತರರಿದ್ದರು.