Advertisement

ತಾಳಕ್ಕೆ ತಕ್ಕಂತೆ ಕುಣಿವ ಪೆನ್ಸಿಲ್‌!

06:00 AM Jul 12, 2018 | Team Udayavani |

ಕೈ ಹೇಳಿದಂತೆ ಪೆನ್ಸಿಲ್‌ ಕೇಳುತ್ತೆ. ಬೆರಳುಗಳಿಂದ ಬಂಧಿಯಾಗಿರುವ ಪೆನ್ಸಿಲ್‌ ಹಾಗೆ ಕೇಳಬೇಕು ಕೂಡ. ಆದರೆ, ಕೈಬೆರಳುಗಳು ದೂರ ಇದ್ದಾಗಲೂ, ಅವುಗಳ ಮಾತನ್ನು ಪೆನ್ಸಿಲ್‌ ಕೇಳುತ್ತೆ! ಇದು ಹೇಗೆ ಗೊತ್ತೇ?

Advertisement

ಬೇಕಾಗುವ ವಸ್ತು: ಪೆನ್ಸಿಲ್‌, ಉದ್ದದ ಖಾಲಿ ಬಾಟಲ್‌ (ಸಂಪೂರ್ಣ ಪಾರದರ್ಶಕ), ದಾರ

ಪ್ರದರ್ಶನ: ಸಭಿಕರಿಂದ ಕೆಲವೇ ಮೀಟರುಗಳ ಅಂತರದಲ್ಲಿ ಈ ಜಾದೂ ನಡೆಸಬೇಕು. ಮೊದಲು ಜಾದೂಗಾರ ತನ್ನ ಹೊಟ್ಟೆ ಅಥವಾ ಎದೆಗೆ ಸಮಾನಾಂತರವಾದ ಎತ್ತರದಲ್ಲಿರುವ ಪುಟ್ಟ ಟೇಬಲ್‌ ಮೇಲೆ ಉದ್ದದ ಖಾಲಿ ಬಾಟಲ್‌ ಇಡುತ್ತಾನೆ. ಅದರೊಳಗೆ ಬಣ್ಣದ ಪೆನ್ಸಿಲ್‌ ಅನ್ನು ನಿಧಾನಕ್ಕೆ ಇಳಿಬಿಡುತ್ತಾನೆ. ಆದರೆ ಪೆನ್ಸಿಲ್‌, ಬಾಟಲ್‌ನ ತಳ ಮುಟ್ಟುವುದಿಲ್ಲ. ಜಾದಾಗಾರ ಅಕ್ಕಪಕ್ಕದಲ್ಲಿ ತನ್ನ ಕೈಗಳನ್ನು ಮೇಲಕ್ಕೆ ಕೆಳಕ್ಕೆ ಆಡಿಸಿದಂತೆ,
ಪೆನ್ಸಿಲ್‌ ಕೂಡ, ಬಾಟಲಿಯೊಳಗೆ ಮೇಲಕ್ಕೆ ಕೆಳಕ್ಕೆ ಆಡುತ್ತಿರುತ್ತದೆ. ಕೈಗಳು ಹೇಳಿದಂತೆ ಆ ಪೆನ್ಸಿಲ್‌ ಕೇಳುತ್ತಿರುತ್ತದೆ.

ತಯಾರಿ: ಈ ಮ್ಯಾಜಿಕ್‌ ಮಾಡುವ ಮುನ್ನ ನೀವು ಯಾವ ಬಣ್ಣದ ಅಂಗಿ ಧರಿಸಿದ್ದೀರೋ, ಅದೇ ಬಣ್ಣದ ದಾರ ಇಟ್ಟುಕೊಂಡಿರಬೇಕು. ಪೆನ್ಸಿಲ್‌ನ ತುದಿಗೆ ಆ ದಾರವನ್ನು ಕಟ್ಟಿ, ಇನ್ನೊಂದು ತುದಿಯನ್ನು ಎದೆಯ ಭಾಗದ ಅಂಗಿ ಬಟನ್‌ಗೆ ಕಟ್ಟಬೇಕು. ದಾರ ಕಟ್ಟಿದ ಪೆನ್ಸಿಲ್‌ ಭಾಗ ಕೆಳಮುಖವಾಗುವಂತೆ, ನಿಧಾನಕ್ಕೆ ಅದನ್ನುಬಾಟಲಿಯಲ್ಲಿ ಬಿಡಬೇಕು. ಪೆನ್ಸಿಲ್‌ ಅನ್ನು  ತಳ ಮುಟ್ಟಲು ಬಿಡದೇ, ಅರ್ಧಕ್ಕೆ ನಿಲ್ಲಿಸುತ್ತಾ, ಮತ್ತೆ ಮೇಲಕ್ಕೆ ಎಳೆದುಕೊಳ್ಳಬೇಕು. ದೇಹವನ್ನು ಹಿಂದೆ ಮುಂದೆ ಬಾಗಿಸಿದ ಹಾಗೆ, ಪೆನ್ಸಿಲ್‌ನ ಪವಾಡಸದೃಶ ಚಲನೆ ಇರುತ್ತದೆ. ಸಭಿಕರ ದೃಷ್ಟಿಯನ್ನು ಬೇರೆಡೆ ಒಯ್ಯಲು, ಪೆನ್ಸಿಲ್‌ನ ತಾಳಕ್ಕೆ ತಕ್ಕಂತೆ, ಅತ್ತಿತ್ತ ಕೈಯನ್ನು ಮೇಲಕ್ಕೆ ಕೇಳಕ್ಕೆ ಮಾಡುತ್ತಿರಬೇಕು. ಆಗ ಅವರಿಗೆ ಕೈಗಳು ಹೇಳಿದಂತೆ, ಪೆನ್ಸಿಲ್‌ ಕೇಳುತ್ತಿದೆಯಂದು ಅನ್ನಿಸತೊಡಗುತ್ತದೆ. ಹೀಗೆ ಕೆಲ ನಿಮಿಷ ಅವರನ್ನು ನಂಬಿಸಿ, ನಂತರ ಜಾದೂ ಮುಗಿಸುವಾಗ, ಪೆನ್ಸಿಲ್‌ ಅನ್ನು
ಎತ್ತಿಕೊಂಡು, ಯಾರ ಕಣ್ಣಿಗೂ ಬೀಳದ ಹಾಗೆ ಕೈಬೆರಳಲ್ಲೇ ದಾರ ಕತ್ತರಿಸಿ.

ವಿನ್ಸೆಂಟ್‌ ಲೋಬೋ

Advertisement
Advertisement

Udayavani is now on Telegram. Click here to join our channel and stay updated with the latest news.

Next