ಚಿಕ್ಕಬಳ್ಳಾಪುರ: ಮಕ್ಕಳ ಕಳ್ಳರ ವದಂತಿ ಪ್ರಕರಣಗಳು ಜಿಲ್ಲಾದ್ಯಂತ ಸಾಕಷ್ಟ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾ ಪೊಲೀಸ್ ಇಲಾಖೆ, ಮಕ್ಕಳ ಅಪಹರಣ ಬಗ್ಗೆ ವದಂತಿಗಳನ್ನು ಹಬ್ಬಿಸಿದರೆ ಅಂತಹವರನ್ನು
ಪತ್ತೆ ಐಪಿಸಿ ಹಾಗೂ ಐಟಿ ಆಕ್ಟ್‌ನಡಿ ಪ್ರಕರಣ ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದೆ.
ನಗರದಲ್ಲಿ ತಮ್ಮ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತೀಕರೆಡ್ಡಿ ಸುದ್ದಿಗೋಷ್ಠಿ ನಡೆಸಿ, ಜಿಲ್ಲೆ ಮಾತ್ರವಲ್ಲದೇ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ಮಕ್ಕಳ ಕಳ್ಳರ ಬಗ್ಗೆ ಯಾವುದೇ ರೀತಿಯ ಪ್ರಕರಣಗಳು ವರದಿಯಾಗಿಲ್ಲ. ಇದರಿಂದ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ವದಂತಿಗಳಿಗೆ ಜನ ಯಾರು ಕಿವಿಗೂಡಬಾರದು ಎಂದು ಮನವಿ ಮಾಡಿದರು.
ಹಳ್ಳಿಗಳಲ್ಲಿ ಜಾಗೃತಿ: ಮಕ್ಕಳ ಕಳ್ಳರ ಬಗ್ಗೆ ಕೆಲ ನಕಲಿ ಪೋಟೋಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವ ಕಾರಣ ವದಂತಿಗಳು ಜಿಲ್ಲೆ ಹಾಗೂ ಜಿಲ್ಲೆಯ ಗಡಿಭಾಗವಾದ ಆಂಧ್ರದಲ್ಲಿ ಸಹ ಹರಡಿವೆ. ಆದರೆ, ಎಲ್ಲೂ ಕೂಡ ಮಕ್ಕಳ ಅಪಹರಣದ ಪ್ರಕರಣ ಹಾಗೂ ಕೊಲೆ ಪ್ರಕರಣಗಳು ವರದಿಯಾಗಿಲ್ಲ. ಇದು ಕೇವಲ ವದಂತಿ ಅಷ್ಟೇ. ಈಗಾಗಲೇ ನಾವು ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಡಿ ನಮ್ಮ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ಸ್ಥಳೀಯ ಪೊಲೀಸರ ಜೊತೆಗೆ ಹಳ್ಳಿಗಳಲ್ಲಿ ನಿಯೋಜಿಸಿದ್ದೇವೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೂ ಪೊಲೀಸರು ಹಳ್ಳಿಗಳಲ್ಲಿ ಬೀಟ್ ನಡೆಸುತ್ತಿದ್ದಾರೆ.
ಯಾರೇ ಅನುಮಾನಾಸ್ಪದ ವ್ಯಕ್ತಿಗಳು ನಿಮ್ಮ ಗಮಕ್ಕೆ ಬಂದರೆ ತಕ್ಷಣದ ಹತ್ತಿರ ಪೊಲೀಸ್ ಠಾಣೆಗೆ ಅಥವಾ ನಿಮ್ಮೂರಿನ ಬೀಟ್ ಪೊಲೀಸರ ಗಮನಕ್ಕೆ ತರಬೇಕು. ಆದರೆ, ಯಾರು ಕೂಡ ಕಾನೂನು ಕೈಗೆತ್ತಿಕೊಂಡು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುವುದಾಗಲಿ ಅಥವಾ ಅವರಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಮಾಡಬಾರದು ಎಂದು ಕೋರಿದರು.
ಪ್ರತಿ ಠಾಣೆ ವ್ಯಾಪ್ತಿ ಆಟೋ ಪ್ರಚಾರ: ಮಕ್ಕಳ ಕಳ್ಳರ ಬಗ್ಗೆ ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಳೆದ ಎರಡು ವಾರಗಳಿಂದ ಎರಡು ಆಟೋಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಕರಪತ್ರಗಳನ್ನು ಹಂಚಿ ಸುಳ್ಳು ಸುದ್ದಿಗಳಿಗೆ ಕಿವಿಗೂಡಬೇಡಿಯೆಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ.
ಯಾರೇ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ವದಂತಿಗಳನ್ನು ಹಬ್ಬಿಸುವುದು ಕಂಡು ಬಂದರೆ ಇಲಾಖೆಯ ಗಮನಕ್ಕೆ ತನ್ನಿ. ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆದರೆ, ಮಕ್ಕಳ ಕಳ್ಳರ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಜನರಿಗೆ ರಕ್ಷಣೆ ಕೊಡಲು ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಎಸ್ಪಿ ಕಾರ್ತೀಕರೆಡ್ಡಿ ತಿಳಿಸಿದರು.
ಸುಳ್ಳು ಸುದ್ದಿಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿದರೆ ಅಂತಹವರ ಮೇಲೆ ನಿಗಾವಹಿಸಿ ಐಟಿ ಆಕ್ಟ್‌ನಡಿ ಪ್ರಕರಣ
ದಾಖಲಿಸುವ ಮೂಲಕ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ವದಂತಿ ನಂಬಬೇಡಿ