ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಸ್ವಿಪ್ಟ್ ಕಾರಿನ ಗ್ಲಾಸ್ ಒಡೆದಿರುವ ದುಷ್ಕರ್ಮಿಗಳು ಕಾರಿನ ಲ್ಲಿದ್ದ 5 ಲಕ್ಷ ರೂ. ಕದ್ದೊಯ್ದಿರುವ ಘಟನೆ ಜಾಲಹಳ್ಳಿಯ ಎಸ್.ಎಂ ರಸ್ತೆಯಲ್ಲಿ ನಡೆದಿದೆ. ಈ ಸಂಬಂಧ ಹಣ ಕಳೆದುಕೊಂಡ ನೆಲ ಮಂಗಲದ ರಾಮಕೃಷ್ಣ (80) ನೀಡಿದ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೆಲಮಂಗಲದ ವಾಜರಹಳ್ಳಿಯ ನಿವಾಸಿ ರಾಮಕೃಷ್ಣ, ಗುರುವಾರ ಒಬ್ಬರೇ ಕಾರಿನಲ್ಲಿ ನಗರಕ್ಕೆ ಆಗಮಿಸಿದ್ದು, ಹಣದ ಅವಶ್ಯಕತೆ ಇದ್ದುದ್ದರಿಂದ ಪೀಣ್ಯದಲ್ಲಿರುವ ಸೆಂಟ್ರಲ್ ಬ್ಯಾಂಕ್‌ಗೆ ತೆರಳಿ ತಮ್ಮ ಖಾತೆಯಲ್ಲಿದ್ದ 5 ಲಕ್ಷ ರೂ ಡ್ರಾ ಮಾಡಿಕೊಂಡಿದ್ದಾರೆ.
ಬಳಿಕ ಊರಿಗೆ ವಾಪಾಸ್ ತೆರಳುವ ಸಂಧರ್ಭದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಾಲಹಳ್ಳಿಯ ಎಸ್.ಎಂ ರಸ್ತೆ ಬದಿ ಕಾರು ನಿಲ್ಲಿಸಿ, ಹತ್ತಿರದಲ್ಲಿಯೇ ಇದ್ದ ಕೆನರಾ ಬ್ಯಾಂಕ್‌ನಲ್ಲಿ ಆಸ್ತಿ ತೆರಿಗೆ ಪಾವತಿಸಲು ತೆರಳಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಕಾರಿನ ಗ್ಲಾಸ್ ಒಡೆದು ಡ್ಯಾಶ್‌ಬೋರ್ಡ್‌ನಲ್ಲಿಟ್ಟಿದ್ದ 5 ಲಕ್ಷ ರೂ ಕದ್ದು ಪರಾರಿಯಾಗಿದ್ದಾರೆ. ರಾಮಕೃಷ್ಣ ಅವರು ಬ್ಯಾಂಕ್‌ನಿಂದ ವಾಪಾಸಾದ ಬಳಿಕ ಕಳ್ಳತನ ಗೊತ್ತಾಗಿದೆ.
ಸಿಸಿಟಿವಿಯಲ್ಲಿ ಇಬ್ಬರು ಶಂಕಿತರು: ರಾಮಕೃಷ್ಣ ಅವರ ಬಳಿ ಹಣವಿರುವುದನ್ನು ತಿಳಿದಿದ್ದವರೇ ಆವರನ್ನು ಹಿಂಬಾಲಿಸಿ ಕಳ್ಳತನ ಮಾಡಿರುವ ಸಾಧ್ಯತೆಗಳಿವೆ. ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಅನುಮಾನಸ್ಪದಾವಾಗಿ ಓಡಾಡು ತ್ತಿರುವುದು ಈ ವೇಳೆ ಕಂಡು ಬಂದಿದೆ. ಜೊತೆಗೆ ದುಷ್ಕರ್ಮಿಗಳ ಬಗ್ಗೆ ಸುಳಿವು ಗೊತ್ತಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.